ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಗರ್ಭಿಣಿ ಸಾವು, ಹೊಟ್ಟೆಯಿಂದ ಆಚೆ ಬಂದ ಶಿಶು-bengaluru crime news accident in bangalore tumkur highway pregnant woman dies on road metro rides create new record ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಗರ್ಭಿಣಿ ಸಾವು, ಹೊಟ್ಟೆಯಿಂದ ಆಚೆ ಬಂದ ಶಿಶು

ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಗರ್ಭಿಣಿ ಸಾವು, ಹೊಟ್ಟೆಯಿಂದ ಆಚೆ ಬಂದ ಶಿಶು

ಎಡೆಹಳ್ಳಿ ಎಂಬ ಗ್ರಾಮದ ಹತ್ತಿರ ಎಂ ಸ್ಯಾಂಡ್‌ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ಹಿಂಬದಿಯಿಂದ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಕುಳಿತಿದ್ದ ಸಿಂಚನಾ ಕೆಳಗ್ಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ

ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಂಚನಾ
ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಂಚನಾ

ಬೆಂಗಳೂರು: ತುಮಕೂರು ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗರ್ಬಿಣಿಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ 7 ತಿಂಗಳ ಮಗು ಹೊಟ್ಟೆಯಿಂದ ಆಚೆ ಬಂದಿದೆ. ನೆಲಮಂಗಲ ಸಮೀಪದ ತೋಟನಹಳ್ಳಿ ಗ್ರಾಮದ ನಿವಾಸಿ ಸಿಂಚನಾ ಮೃತ ದುರ್ದೈವಿ. ಇವರು ತಮ್ಮ ಪತಿ ಮಂಜುನಾಥ್‌ ಅವರೊಂದಿಗೆ ಶಿವಗಂಗೆಯ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿರುವಾಗ ಈ ಅಪಘಾತ ಸಂಭವಿಸಿದೆ.

ಇವರ ದ್ವಿಚಕ್ರ ವಾಹನದ ಮುಂದೆ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಚಾಲಕ ಬ್ರೇಕ್‌ ಹಾಕಿದ್ದಾರೆ. ಇದರಿಂದ ಮಂಜುನಾಥ್‌ ಅವರೂ ತಮ್ಮ ವಾಹನಕ್ಕೆ ಬ್ರೇಕ್‌ ಹಾಕಿದ್ದಾರೆ. ಆಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿಯ ಚಾಲಕನೂ ಬ್ರೇಕ್‌ ಹಾಕಲು ಪ್ರಯತ್ನಿಸಿದನಾದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಎಡೆಹಳ್ಳಿ ಎಂಬ ಗ್ರಾಮದ ಹತ್ತಿರ ಎಂ ಸ್ಯಾಂಡ್‌ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ಹಿಂಬದಿಯಿಂದ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಕುಳಿತಿದ್ದ ಸಿಂಚನಾ ಕೆಳಗ್ಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ. ಅವರ ಹೊಟ್ಟೆಯಲ್ಲಿದ್ದ ಮಗು ಆಚೆ ಬಂದಿದ್ದು, ತಾಯಿ ಮಗು ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ. ಅಪಘಾತದ ಭೀಕರತೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಸಿಂಚನಾ ಅವರ ಪತಿ ಮಂಜುನಾಥ್‌ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾರ ಸಮಾಧಾನಕ್ಕೂ ಅವರ ನೋವು ಕಡಿಮೆಯಾಗಿರಲಿಲ್ಲ. ಮಂಜುನಾಥ್‌ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅಪಘಾತದ ಕಾರಣಕ್ಕಾಗಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಅಪಘಾತ ಸಂಭವಿಸಿದ ಸ್ಥಳ ತುಂಬಾ ಸೂಕ್ಷ್ಮವಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಕಳೆದ 6 ತಿಂಗಳಲ್ಲಿ ಈ ಸ್ಥಳದಲ್ಲೇ ಸುಮಾರು 90 ಅಪಘಾತಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ಒಂದೇ ದಿನ 8.26 ಲಕ್ಷ ಜನರ ಪ್ರಯಾಣ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ ಆಗಸ್ಟ್ 6ರಂದು ಒಂದೇ ದಿನ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8.26 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದು ಇದೊಂದು ಹೊಸ ದಾಖಲೆಯಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ತಿಳಿಸಿದೆ.

ಎಕ್ಸ್‌ನಲ್ಲಿ ಸಂತಸ ಹಂಚಿಕೊಂಡಿರುವ ನಮ್ಮ ಮೆಟ್ರೋ, ಈ ಹಿಂದಿನ ದಾಖಲೆಗಳನ್ನು ಮೀರಿ ಆಗಸ್ಟ್‌ 6, ಮಂಗಳವಾರ ನಮ್ಮ ಮೆಟ್ರೋದಲ್ಲಿ 8,26,883 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದು ಹೊಸ ದಾಖಲೆಯಾಗಿದೆ ಎಂದು ತಿಳಿಸಿದೆ. ನಮ್ಮ ಮೆಟ್ರೋವನ್ನು ತಮ್ಮ ಪ್ರಯಾಣದ ಪಾಲುದಾರರನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಮತ್ತು ವಾತಾವರಣದಲ್ಲಿ ಮಾಲಿನ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದಕ್ಕಾಗಿ ಪ್ರಯಾಣಿಕರಿಗೆ ನಿಗಮದ ಧನ್ಯವಾದಗಳು ಎಂದು ತಿಳಿಸಿದೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕೊಡಿ. ಮೂಲ ಸೌಕರ್ಯ ಕಲ್ಪಿಸಿ ಮತ್ತು ಜನಸಂದಣಿಯನ್ನು ತಗ್ಗಿಸಲು ರೈಲುಗಳ ಸಂಚಾರವನ್ನು ಹೆಚ್ಚಿಸುವಂತೆ ಆಗ್ರಹಪಡಿಸಿದ್ದಾರೆ.