ಕನ್ನಡ ಸುದ್ದಿ  /  Karnataka  /  Bengaluru Crime News: Arrest Of The Assam Gang Which Had Created Tremors Among The Lone Travelers In Bengaluru City Limits

Bengaluru Crime News: ಒಂಟಿ ಸಂಚಾರಿಗಳಲ್ಲಿ ನಡುಕ ಹುಟ್ಟಿಸಿದ್ದ ಅಸ್ಸಾಂ ಗ್ಯಾಂಗ್‌ ಬಂಧನ; 50 ಲಕ್ಷ ರೂ. ಮೌಲ್ಯದ 619 ಮೊಬೈಲ್‌ ವಶಕ್ಕೆ

Bengaluru Crime News: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂಟಿ ಸಂಚಾರಿಗಳಲ್ಲಿ ನಡುಕ ಹುಟ್ಟಿಸಿದ್ದ ಅಸ್ಸಾಂ ಗ್ಯಾಂಗ್‌ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದೆ. ಭಯ ಹುಟ್ಟಿಸಿದ್ದ ಅಸ್ಸಾಂ ಗ್ಯಾಂಗ್‌ ಬಂಧನ ವಿವರ ಇಲ್ಲಿದೆ.

ಬಂಧಿತ ಅಸ್ಸಾಂ ಗ್ಯಾಂಗ್‌ನಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ವೀಕ್ಷಿಸಿದ ಸಿಟಿ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ
ಬಂಧಿತ ಅಸ್ಸಾಂ ಗ್ಯಾಂಗ್‌ನಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ವೀಕ್ಷಿಸಿದ ಸಿಟಿ ಪೊಲೀಸ್‌ ಕಮಿಷನರ್‌ ಪ್ರತಾಪ್‌ ರೆಡ್ಡಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬದುಕು ಒಂದು ರೀತಿಯ ಜಂಜಾಟವೇ ಸರಿ. ಇಲ್ಲೊಂದು ಅಪರಾಧ ಪ್ರಪಂಚವೂ ಇದೆ. ಮಹಾನಗರದ ವಿವಿಧೆಡೆ ಒಂಟಿ ಸಂಚಾರಿಗಳಲ್ಲಿ ಭಯ ಹುಟ್ಟಿಸಿದ್ದ ಸುಲಿಗೆ ಕೋರರ ಗುಂಪು, ಅಸ್ಸಾಂ ಗ್ಯಾಂಗ್‌ ಎಂಬುದು ಬೆಳಕಿಗೆ ಬಂದಿದೆ. ಈ ಗ್ಯಾಂಗ್‌ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದೆ.

ಈ ಗ್ಯಾಂಗ್‌ ಕಾರಿನಲ್ಲಿ ಸುತ್ತಾಡುತ್ತ, ಒಂಟಿಯಾಗಿ ಸಂಚರಿಸುವವರನ್ನು ಬೆದರಿಸಿ ಅವರಿಂದ ಮೊಬೈಲ್‌, ನಗದು, ಚಿನ್ನಾಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಈ ಗ್ಯಾಂಗ್‌ ಅನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ 50 ಲಕ್ಷ ರೂಪಾಯಿ ಮೌಲ್ಯದ 619 ಮೊಬೈಲ್‌, ಎರಡು ಕಾರು, ಒಂದು ದ್ವಿ ಚಕ್ರ ವಾಹನ, ಒಂದು ಲ್ಯಾಪ್‌ಟಾಪ್ ಮತ್ತು ಒಂದು ಡಾಂಗಲ್‌ನ್ನು ವಶಪಡಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಗ್ಯಾಂಗ್‌ ಕಾರ್ಯಾಚರಣೆ ಎಲ್ಲೆಲ್ಲಿ?

ಬೆಂಗಳೂರಿನ ಬಾಗಲೂರು, ಹನುಮಂತನಗರ, ಸಿಟಿ ಮಾರುಕಟ್ಟೆ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೇ ಹೆಚ್ಚಿನ ಸುಲಿಗೆ ಪ್ರಕರಣಗಳು ನಡೆದಿವೆ. ಮೊಬೈಲ್‌ ಫೋನ್‌ಗಳು ಈ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿವೆ ಎಂದು ಪೊಲೀಸ್‌ ಆಯುಕ್ತ ರೆಡ್ಡಿ ತಿಳಿಸಿದರು.

ಬಂಧಿತರು ಯಾರು?

ಅಸ್ಸಾಂ ಮೂಲದ ಅಬ್ದುಲ್ ರಹಿಂ(29) ನೂರ್ ಹುಸೇನ್ ಚೌದರಿ(32) ಅಫ್ಜಲ್‌ ಹುಸೇನ್ ಲಷ್ಕರ್(29) ಬಂಧಿತರು. ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿರುವುದಾಗಿ ನಗರ ಪೊಲೀಸ್‌ ಆಯುಕ್ತರು ತಿಳಿಸಿದರು.

ಕಾರ್ಯಾಚರಣೆ ನಡೆದ ಬಗೆ

ಬೆಂಗಳೂರಿನ ಮಾರತ್‌ಹಳ್ಳಿಯ ಕಾಡುಬೀಸನಹಳ್ಳಿ ಬ್ರಿಡ್ಜ್ ಬಳಿ ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ಕುಳಿತು ಸಾರ್ವಜನಿಕರ ಸುಲಿಗೆಗೆ ಆರೋಪಿಗಳು ಹೊಂಚುಹಾಕಿದ್ದರು. ಈ ಕುರಿತು ಖಚಿತ ಮಾಹಿತಿಯನ್ನು ಸಂಗ್ರಹಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು ಎಂದು ನಗರ ಪೋಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು.

ಸುಲಿಗೆ ಮಾಲನ್ನು ಏನ್‌ ಮಾಡ್ತಿದ್ದರು?

ಆರೋಪಿಗಳು ನಗರದ ವಿವಿಧ ಸ್ಥಳಗಳಲ್ಲಿ ನೂರಾರು ಮೊಬೈಲ್ ಗಳನ್ನು ಸುಲಿಗೆ ಮಾಡಿ, ಅವುಗಳನ್ನು ಪ್ಲಾಶ್ ಮಾಡಿಸಿ ಮಾರಾಟ ಮಾಡುತ್ತಿದ್ದರಿ. ಮೊಬೈಲ್ ಪೋನುಗಳನ್ನು ಪ್ಲಾಶ್ ಮಾಡಲು ಜಮಾಲುದ್ದಿನ್ ಮುಜುಂಡರ್(52) ದಿಲೀಪ್ ಕುಮಾರ್ (38)ರನ್ನು ಬಂಧಿಸಲಾಗಿದೆ.

ಬಂಧಿತರಿಂದ ವಿವಿಧ ಕಂಪನಿಯ 619 ಮೊಬೈಲ್‌ಗಳು, ಎರಡು ಕಾರ್‌ಗಳು, ಒಂದು ದ್ವಿ ಚಕ್ರ ವಾಹನ, ಒಂದು ಲ್ಯಾಪ್‌ಟಾಪ್ ಮತ್ತು ಒಂದು ಡಾಂಗಲ್‌ನ್ನು ವಶಪಡಿಸಲಾಗಿದೆ ಎಂದು ಸಿಟಿ ಪೊಲೀಸ್‌ ಕಮಿಷನರ್‌ ಹೇಳಿದರು.

ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಸುದ್ದಿಗೋಷ್ಠಿಯಲ್ಲಿ ಜತೆಗಿದ್ದರು.

IPL_Entry_Point