ಕರ್ನಾಟಕದ ಅತಿ ದೊಡ್ಡ ಡ್ರಗ್ಸ್‌ ಬೇಟೆ, 24 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಕಿಂಗ್‌ ಪಿನ್‌ ಮಹಿಳೆ ನಾಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಅತಿ ದೊಡ್ಡ ಡ್ರಗ್ಸ್‌ ಬೇಟೆ, 24 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಕಿಂಗ್‌ ಪಿನ್‌ ಮಹಿಳೆ ನಾಪತ್ತೆ

ಕರ್ನಾಟಕದ ಅತಿ ದೊಡ್ಡ ಡ್ರಗ್ಸ್‌ ಬೇಟೆ, 24 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ; ಕಿಂಗ್‌ ಪಿನ್‌ ಮಹಿಳೆ ನಾಪತ್ತೆ

ಈ ಡ್ರಗ್ಸ್‌ ಪ್ರಕರಣದಲ್ಲಿ ಜ್ಯೂಲಿಯೆಟ್‌ ಎಂಬ ಮಹಿಳೆ ನಾಪತ್ತೆಯಾಗಿದ್ದಾಳೆ. ಈಕೆಯೇ ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿ ರೋಸ್‌ ಲಿನ್‌ಗೆ ಸರಬರಾಜು ಮಾಡುತ್ತಿದ್ದಳು. ಈಕೆ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಕ್ರೈಮ್
ಬೆಂಗಳೂರು ಕ್ರೈಮ್

ಬೆಂಗಳೂರು: ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಕೆ.ಆರ್.ಪುರ ಪೊಲೀಸರು ಬೃಹತ್‌ ಕಾರ್ಯಾಚರಣೆ ನಡೆಸಿ ರೂ 24 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ ನಡೆಸಿದ ಅತಿ ದೊಡ್ಡ ಡ್ರಗ್ಸ್‌ ಕಾರ್ಯಾಚರಣೆ ಇದು. ಕ್ಯಾಟರಿಂಗ್‌ ನೆಪದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ 40 ವರ್ಷದ ಮಹಿಳೆಯನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯ ಹೆಸರು ರೋಸ್‌ ಲಿಮ್‌ ಎಂದು ಗೊತ್ತಾಗಿದೆ.

ಈಕೆಯಿಂದ 12 ಕೆ.ಜಿ ಎಂಡಿಎಂಎ ಕ್ರಿಸ್ಟಲ್, ಒಂದು ಮೊಬೈಲ್, 70 ಏರ್‌ಟೆಲ್ ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ರೂ 24 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಮಾಹಿತಿ ನೀಡಿದ್ದಾರೆ. ಜಪ್ತಿ ಮಾಡಲಾದ 12 ಕೆ.ಜಿ ಎಂಡಿಎಂಎ ಕ್ರಿಸ್ಟಲ್ ಹಳದಿ ಮತ್ತು ಬಿಳಿ ಬಣ್ಣದ್ದಾಗಿದೆ. ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರಿನ ಟಿ.ಸಿ.ಪಾಳ್ಯದಲ್ಲಿ ತಂಗಿದ್ದ ಶಂಕಿತ ಮಹಿಳೆ ಡ್ರಗ್ಸ್‌ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಈವರೆಗೆ ನಡೆಸಿದ ಅತಿ ದೊಡ್ಡ ಡ್ರಗ್ಸ್‌ ಕಾರ್ಯಾಚರಣೆ ಇದಾಗಿದೆ ಎಂದು ದಯಾನಂದ ಅವರು ಹೇಳಿದ್ದಾರೆ. ಈ ಡ್ರಗ್ಸ್‌ ಪ್ರಕರಣದಲ್ಲಿ ಜ್ಯೂಲಿಯೆಟ್‌ ಎಂಬ ಮಹಿಳೆ ನಾಪತ್ತೆಯಾಗಿದ್ದಾಳೆ. ಈಕೆಯೇ ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿ ರೋಸ್‌ ಲಿನ್‌ಗೆ ಸರಬರಾಜು ಮಾಡುತ್ತಿದ್ದಳು. ಈಕೆ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.

ಇದು ಬಹು ಬೆಲೆಬಾಳುವ ಸಿಂಥೆಟಿಕ್‌ ಮಾದಕವಸ್ತು ಎನ್ನಲಾಗಿದೆ. ಈ ಮಹಿಳೆಯು ಟಿಸಿ ಪಾಳ್ಯದಲ್ಲಿ ನೆಲೆಸಿದ್ದಳು. ಮೂಲತಃ ಈಕೆ ವಿದೇಶಿ ಪ್ರಜೆಗಳಿಗೆ ಕ್ಯಾಟರಿಂಗ್‌ ಮಾಡುತ್ತಿದಳು. ಆಹಾರ ಪದಾರ್ಥಗಳನ್ನು ಮಾರುವ ನೆಪದಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಮುಂಬೈ ಮತ್ತು ದೆಹಲಿಯಲ್ಲಿರುವ ಆಫ್ರಿಕಾ ದೇಶಗಳ ಪ್ರಜೆಗಳಿಂದ ಎಂಡಿಎಂಎ ಕ್ರಿಸ್ಟಲ್‌ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು, ವಿದೇಶಿ ಪ್ರಜೆಗಳು ಮತ್ತು ವಿದೇಶಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಅಲ್ಲದೆ ವಿಲಾಸಿ ಜೀವನ ನಡೆಸಲು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಗಿಯೂ ಬಾಯಿಬಿಟ್ಟಿದ್ದಾಳೆ.

ಸುಮಾರು 70 ಏರ್‌ಟೇಲ್ ಸಿಮ್ ಕಾರ್ಡ್‌ಗಳು ಪತ್ತೆಯಾಗಿರುವುದು ಡ್ರಗ್ಸ್‌ ಮಾರಾಟ ಜಾಲ ವ್ಯಾಪಕ ಮತ್ತು ಜಟಿಲವಾಗಿರುವುದನ್ನು ತೋರಿಸುತ್ತದೆ ಎಂದು ಶಂಕಿಸಲಾಗಿದೆ. ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದು, ಬೆಂಗಳೂರಿನಲ್ಲಿ ನಿರಂತರವಾಗಿ ಡ್ರಗ್ಸ್‌ ಪತ್ತೆಯಾಗುತ್ತಲೇ ಇದೆ. ಪೊಲೀಸರೂ ಸಹ ಹದ್ದಿನ ಕಣ್ಣಿಟ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುತ್ತಲೇ ಇದ್ದಾರೆ.

Whats_app_banner