ಬೆಂಗಳೂರಿನಲ್ಲಿ ಮಹಿಳೆಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ಆರೋಪ; ಮೂವರು ಆರೋಪಿಗಳ ಬಂಧನ; ವಿಡಿಯೊ
ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ಭಾನುವಾರ (ಮಾರ್ಚ್ 31) ರಾತ್ರಿ ನಡೆದಿದೆ. ವಿಡಿಯೊ ವೈರಲ್ ಆಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore Crime News) ಪುಂಡರ ಹಾವಳಿ ಮುಂದುವರಿದೆ. ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿರುವ ಮೂವರು ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೋರಮಂಗಲ-ಮಡಿವಾಳ ಮಾರ್ಗದಲ್ಲಿ ಭಾನುವಾರ (ಮಾರ್ಚ್ 31) ರಾತ್ರಿ ಕಾರಿನಲ್ಲಿದ್ದ ಮಹಿಳೆಯರಿದ್ದ ಗುಂಪನ್ನು ಹಿಂಬಾಲಿಸಿ ಬೆದರಿಕೆ ಹಾಕಿ, ಕಿರುಕುಳ ನೀಡಿದ್ದಾರೆ. ಭಯಭೀತರಾದ ಮಹಿಳೆಯರ ಪೈಕಿ ಒಬ್ಬಾಕೆ ಜೋರಾಗಿ ಕಿರುಚಾಡಿ ಪೊಲೀಸರಿಗೆ ಫೋನ್ ಮಾಡಿ ದೂರು ನೀಡಿದ್ದಾರೆ. ಪುಂಡರ ಕಿರುಕುಳದ ವಿಡಿಯೊ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ.
ದೂರ ಸ್ವೀಕರಿಸಿದ ಪೊಲೀಸರು ಇವತ್ತು (ಏಪ್ರಿಲ್ 1, ಸೋಮವಾರ) ಮೂವರು ಬೈಕ್ ಸವಾರರನ್ನು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ, ಬೈಕ್‌ನಲ್ಲಿದ್ದ ಒಬ್ಬ ಆರೋಪಿ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆಯಲು ಸಹ ಪ್ರಯತ್ನಿಸಿದ್ದಾನೆ.
ಕಾರಿನಲ್ಲಿದ್ದ ಮಹಿಳೆಯೊಬ್ಬರು ವಾಹನವನ್ನು ಚಾಲನೆ ಮಾಡುವಾಗ ಕರೆ ಮಾಡಿ ಸಹಾಯಕ್ಕಾಗಿ ಪೊಲೀಸರನ್ನು ಕೇಳುತ್ತಿರುವ ವಿಡಿಯೊದಲ್ಲಿ ಕಾಣಬಹುದು. ಎರಡು ಅಥವಾ ಮೂರು ಬೈಕುಗಳಲ್ಲಿ ಬಂದ ಪುರುಷರ ಗುಂಪು ಮಹಿಳೆಯರಿಬ್ಬ ಕಾರನ್ನು ಬೆನ್ನಟ್ಟಿದೆ. ಬಾಗಿಲು ತೆರೆಯುವಂತೆ ಬೆದರಿಕೆ ಹಾಕಿದ್ದಾರೆ. ಆತ ನನ್ನನ್ನು ನಿಂದಿಸುತ್ತಿದ್ದಾನೆ. ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದಾನೆ. ಅಲ್ಲದೆ ಕಾರಿಗೆ ಗುದ್ದಿದ್ದಾನೆ ದಯವಿಟ್ಟು ಸಹಾಯ ಮಾಡಿ ಅಂತ ಅಳುತ್ತಲೇ ಕೇಳಿಕೊಳ್ಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿರುಗಾಳಿ ಎಬ್ಬಿಸಿದ ವಿಡಿಯೊ ಬಗ್ಗೆ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಮೂವರು ಬೈಕ್ ಸವಾರರನ್ನು ಬಂಧಿಸಲಾಗಿದೆ ಅಂತಲೂ ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ (ಆಗ್ನೇಯ ಬೆಂಗಳೂರು) ಸಿ.ಕೆ.ಬಾಬಾ ಅವರು ಮಹಿಳೆಯರನ್ನು ಜಾಗರೂಕರಾಗಿರಲು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿರುವುದಕ್ಕೆ ಶ್ಲಾಘಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಿಕೆ ಬಾಬಾ, "ಈ ಘಟನೆಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು. ರಸ್ತೆ ಸುರಕ್ಷತೆ ಮತ್ತು ರಸ್ತೆ ಕ್ರೋಧದ ಘಟನೆಗಳನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಮತ್ತು ಎಫ್ಐಆರ್ ದಾಖಲಿಸಲಾಗಿದೆ ಎಂದು ನಿಮಗೆ ತಿಳಿಸುತ್ತೇವೆ. ಆರೋಪಿಗಳನ್ನು ಬಂಧಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಸಹಾಯಕ್ಕಾಗಿ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ. "ತ್ವರಿತ ಪ್ರತಿಕ್ರಿಯೆ ಮತ್ತು ಅಗತ್ಯ ಕ್ರಮಕ್ಕಾಗಿ ನಾಗರಿಕರು ಇಂತಹ ಘಟನೆಗಳನ್ನು ತಕ್ಷಣ 112 ಮೂಲಕ ಪೊಲೀಸರಿಗೆ ವರದಿ ಮಾಡುವುದು ಕಡ್ಡಾಯವಾಗಿದೆ. ಹೆಚ್ಚುವರಿಯಾಗಿ, ರಸ್ತೆಯಲ್ಲಿ ಸಂಚರಿಸುವಾಗ ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲು ನಾವೆಲ್ಲರೂ ಬದ್ಧರಾಗಿರೋಣ ಎಂದು ಬೆಂಗಳೂರು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಿಕೆ ಬಾಬಾ ಅವರು ಹೇಳಿದ್ದಾರೆ.