ಯಡಿಯೂರಪ್ಪ ವಿರುದ್ಧ ಪ್ರಬಲ ಸಾಕ್ಷ್ಯ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಯಡಿಯೂರಪ್ಪ ವಿರುದ್ಧ ಪ್ರಬಲ ಸಾಕ್ಷ್ಯ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

ಯಡಿಯೂರಪ್ಪ ವಿರುದ್ಧ ಪ್ರಬಲ ಸಾಕ್ಷ್ಯ: ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ನಾಯಕನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

ಯಡಿಯೂರಪ್ಪ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿರುವುದಾಗಿ ಸಿಐಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ) (HT_PRINT)

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಆಪ್ತರಾದ ನಾಲ್ವರ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಐಡಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಈ ಬಾಲಕಿಯ ತಾಯಿ ಬೆಂಗಳೂರಿನ ಸದಾಶಿವನಗರದ ಪೊಲೀಸ್‌ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ತಮ್ಮ 17 ವರ್ಷದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಿಸಿದ್ದರು. ತಮ್ಮ ಅಪ್ರಾಪ್ತ ವಯಸ್ಸಿನ ಪುತ್ರಿಗೆ ನೀಡಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮಗೆ ನ್ಯಾಯ ಒದಗಿಸುವಂತೆ ಬಾಲಕಿಯ ತಾಯಿ ಕೋರಿದ್ದರು.

ತಮ್ಮ ಪುತ್ರಿಯೊಂದಿಗೆ ಫೆಬ್ರವರಿ 2ರಂದು ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿ ನಿವಾಸಕ್ಕೆ ತಾಯಿ-ಮಗಳು ಬಂದಿದ್ದರು. ಆಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯಡಿಯೂರಪ್ಪ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿರುವುದಾಗಿ ಸಿಐಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಇರುವ ಸಾಕ್ಷ್ಯಗಳೇನು?

ತಮ್ಮ ಮನೆಗೆ ಆಗಮಿಸಿದ್ದ ಬಾಲಕಿಯನ್ನು ಯಡಿಯೂರಪ್ಪ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದರು. ಆಗ ಬಾಲಕಿಯು ಅರಚಿಕೊಂಡಾಗ ಯಡಿಯೂರಪ್ಪ ಬಾಲಕಿಯ ಕೈಗೆ ಹಣ ತುರುಕಿ ಬಾಗಿಲು ತೆರದಿದ್ದರು. ಕೊಠಡಿಯಿಂದ ಹೊರಗೆ ಕಾಯುತ್ತಿದ್ದ ಬಾಲಕಿಯ ತಾಯಿಯು ಯಡಿಯೂರಪ್ಪ ಅವರೊಂದಿಗೆ ಜಟಾಪಟಿ ನಡೆಸಿ ತಮ್ಮ ಪುತ್ರಿಯ ಮೇಲೆ ಜೊತೆ ಹೀಗೆ ನಡೆದುಕೊಂಡಿರಿ ಎಂದು ಕೂಗಾಟ ನಡೆಸಿದ್ದರು. ಈ ಜಗಳವನ್ನು ಬಾಲಕಿಯು ತನ್ನ ಐ ಫೋನ್‌ ನಿಂದ ಚಿತ್ರೀಕರಿಸಿಕೊಂಡಿದ್ದರು. ಇದೀಗ ಈ ವಿಡಿಯೋ ಪ್ರಮುಖ ಸಾಕ್ಷ್ಯವಾಗಿದೆ.

ಈ ವಿಡಿಯೋ ಪ್ರಕಾರ ಯಡಿಯೂರಪ್ಪ ಅವರು ತಾವು ಬಾಲಕಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಒಂದು ಹಂತದಲ್ಲಿ ಅವರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಿದ್ದೆ ಎಂದು ಹೇಳಿರುವುದೇ ನಿರ್ಣಾಯಕ ಸಾಕ್ಷ್ಯವಾಗಲಿದೆ. ಇದನ್ನೇ ಚಾರ್ಜ್‌ಶೀಟ್‌ ನಲ್ಲಿಯೂ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ಸಿಐಡಿ ಯಡಿಯೂರಪ್ಪ ಅವರ ಧ್ವನಿಯ ಮಾದರಿಯನ್ನೂ ಸಂಗ್ರವಹಿಸಿದ್ದು, ದಾಖಲೆಯಲ್ಲಿರುವ ಧ್ವನಿಗೆ ಹೊಂದಾಣಿಕೆಯಾಗಲಿದೆ ಎನ್ನುವುದು ಖಚಿತವಾಗಿದೆ ಎಂದು ಉಲ್ಲೇಖಿಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತರ ಮೂವರು ಆರೋಪಿಗಳು ಯಾರು?

ಈ ಪ್ರಕರಣದಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾದರೆ ಅರುಣ್‌ ವೈ.ಎಂ. 2ನೇ ಆರೋಪಿಯಾಗಿದ್ದಾರೆ. ಎಂ.ರುದ್ರೇಶ್‌ ಮೂರನೇ ಮತ್ತು ಜಿ.ಮರಿಸ್ವಾಮಿ 4ನೇ ಆರೋಪಿಯಾಗಿದಾರೆ. ಇವರೆಲ್ಲರೂ ಯಡಿಯೂರಪ್ಪ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಎರಡನೇ ಆರೋಪಿಯಾದ ವೈ.ಎಂ.ಅರುಣ್‌ ಬಾಲಕಿಯ ತಾಯಿಯನ್ನು ಸಂಪರ್ಕಿಸಿ ಮನವೊಲಿಸಿ ಯಡಿಯೂರಪ್ಪ ಅವರ ಮನೆಗೆ ಫೆಬ್ರವರಿ 20ರಂದು ಮತ್ತೆ ಎರಡನೇ ಬಾರಿಗೆ ಕರೆದುಕೊಂಡು ಬಂದಿದ್ದರು. ಯಡಿಯೂರಪ್ಪ ಅವರ ನಿರ್ದೇಶನದಂತೆ ಮೂರು ಮತ್ತು ನಾಲ್ಕನೇ ಆರೋಪಿಗಳಾದ ರುದ್ರೇಶ್‌ ಮತ್ತು ಮರಿಸ್ವಾಮಿ ಬಾಲಕಿಯ ತಾಯಿಯ ಮನೆಗೆ ತೆರಳಿ ತಾಯಿ ಮಗಳು ಇಬ್ಬರನ್ನೂ ಯಡಿಯೂರಪ್ಪ ಅವರ ಮನೆಗೆ ಕರೆತಂದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳ ಸಮ್ಮುಖದಲ್ಲಿಯೇ ಮೊಬೈಲ್‌ನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಲಾಗಿತ್ತು. ಯಡಿಯೂರಪ್ಪ ಅವರ ಅಣತಿಯಂತೆ ಮರಿಸ್ವಾಮಿ ಬಾಲಕಿಯ ತಾಯಿಗೆ 2 ಲಕ್ಷ ರೂಪಾಯಿ ಹಣ ನೀಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ನಂತರ ಮಾರ್ಚ್‌ 14ರಂದು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ದಾಖಲಿಸಿದ್ದರು. ಲೈಂಗಿಕ ಕಿರುಕುಳ, ಸಾಕ್ಷ್ಯನಾಶ, ಪ್ರಕರಣ ಮುಚ್ಚಿ ಹಾಕಲು ಆಮಿಷ ಮತ್ತು ಪೊಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಪೂರಕವಾಗಿ ಲಭ್ಯವಿರುವ ಸಾಕ್ಷ್ಯಗಳನ್ನು ದೋಷಾರೋಪ ಪಟ್ಟಿಯ ಜೊತೆಯಲ್ಲಿ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಬಾಲಕಿಯ ತಾಯಿ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.

Whats_app_banner