ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದ 9.3 ಕೆಜಿ ಚಿನ್ನ ವಶ; 6 ಮಂದಿ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದ 9.3 ಕೆಜಿ ಚಿನ್ನ ವಶ; 6 ಮಂದಿ ಬಂಧನ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದ 9.3 ಕೆಜಿ ಚಿನ್ನ ವಶ; 6 ಮಂದಿ ಬಂಧನ

Bengaluru Crime News : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6.8 ಕೋಟಿ ರೂಪಾಯಿ ಮೌಲ್ಯದ 9.3 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚೆಕ್ಕಿಂಗ್​ಗೆ ಹೆದರಿ ಬಿಟ್ಟು ಹೋಗಿದ್ದ 3.75 ಕೆಜಿ ಚಿನ್ನವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. (ವರದಿ: ಎಚ್.ಮಾರುತಿ).

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದ 9.3 ಕೆಜಿ ಚಿನ್ನ ವಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದ 9.3 ಕೆಜಿ ಚಿನ್ನ ವಶ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕಳ್ಳ ಸಾಗಾಣೆ ಮಾಡಲಾಗುತ್ತಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ 6.8 ಕೋಟಿ ರೂಪಾಯಿ ಮೌಲ್ಯದ 9.3 ಕೆಜಿ ಚಿನ್ನವನ್ನು ಕಸ್ಟಮ್ಸ್​ ಅಧಿಕಾರಿಗಳು (Customs officials) ವಶಪಡಿಸಿಕೊಂಡಿದ್ದು, 6 ಮಂದಿಯನ್ನು ಬಂಧಿಸಿದ್ದಾರೆ. ಮಲೇಷ್ಯಾ ಮತ್ತು ಶಾರ್ಜಾದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು.

ಪ್ರತ್ಯೇಕ ಎರಡು ಪ್ರಕರಣ ದಾಖಲು

ಮೊದಲ ಪ್ರಕರಣದಲ್ಲಿ ಮಲೇಷ್ಯಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 2.632 ಕೆಜಿ ಚಿನ್ನವನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ. ಒಳ ಉಡುಪಿನಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಆರೋಪಿಗಳು ಅಂಟಿಸಿಕೊಂಡಿದ್ದರು. ಇದರ ಮೌಲ್ಯ 1.42 ಕೋಟಿ ರೂಪಾಯಿ ಆಗಿದೆ. ಚಿನ್ನದ ಜೊತೆಗೆ 73.7 ಲಕ್ಷ ರೂಪಾಯಿ ಮೌಲ್ಯದ 3,510 ಇ-ಸಿಗರೇಟ್​​ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಎರಡನೇ ಪ್ರಕರಣದಲ್ಲಿ ಮಲೇಶಿಯಾದ ಕೌಲಲಾಂಪುರದಿಂದ ಬೆಂಗಳೂರಿಗೆ ಬಂದ ಇಬ್ಬರನ್ನು ಬಂಧಿಸಿ, ಆರೋಪಗಳಿಂದ 2.854 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಚಿನ್ನದ ಪೇಸ್ಟ್ ಅನ್ನು ತಮ್ಮ ಸಾಕ್ಸ್​ನಲ್ಲಿ ಅಡಗಿಸಿಟ್ಟುಕೊಂಡಿದ್ದರು. ಈ ಚಿನ್ನದ ಮೌಲ್ಯ 1.55 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ಆರೋಪಿಗಳು ಪ್ರವಾಸಿ ವೀಸಾದ ಮೇಲೆ ಮಲೇಷ್ಯಾಗೆ ತೆರಳಿದಾಗಲೇ ಅನುಮಾನ ಉಂಟಾಗಿತ್ತು. ಈ 6 ಆರೋಪಿಗಳಲ್ಲಿ ಇಬ್ಬರು ತಮಿಳುನಾಡು ಮೂಲದವರು, ನಾಲ್ವರು ಉತ್ತರ ಭಾರತದವರು ಎಂದು ತಿಳಿದು ಬಂದಿದೆ. 3ನೇ ಪ್ರಕರಣದಲ್ಲಿ ಶಾರ್ಜಾದಿಂದ ಬಂದ ವಿಮಾನದಲ್ಲಿ ಲಗೇಜ್ ಕ್ಯಾಬಿನ್​ನಲ್ಲಿ ಅಡಗಿಸಿಟ್ಟಿದ್ದ 3.75 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಲಗೇಜ್ ಪರಿಶೀಲಿಸುತ್ತಿದ್ದ ಅವಧಿಯಲ್ಲಿ ಈ ಚಿನ್ನವನ್ನು ಕ್ಯಾಬಿನ್​ನಲ್ಲೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.

ಯುವತಿ ಮೇಲೆ ಅತ್ಯಾಚಾರ, ಬೀದರ್‌ ಯುವಕ ಸೆರೆ

ಬೆಂಗಳೂರು: ಯುವತಿ ಮೇಲೆ ಅತ್ಯಾಚಾರ ನಡೆಸಿದ್ದೂ ಅಲ್ಲದೇ ಕೆಲವು ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಸತತ ಆರು ವರ್ಷದಿಂದ ಆಕೆಯಿಂದ ಹಣ ಕೀಳುತ್ತಲೇ ಇದ್ದ ಆತನ ವಿರುದ್ದ ರೋಸಿ ಹೋಗಿ ಯುವತಿ ಪೋಷಕರಿಗೆ ಮಾಹಿತಿ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಆರು ವರ್ಷದ ಹಿಂದೆ ಉಡುಪಿಯಲ್ಲಿ ನಡೆದಿದ್ದ ವಿಶ್ವಹಿಂದೂ ಪರಿಷತ್​ನ ಕಾರ್ಯಕ್ರಮವೊಂದರಲ್ಲಿ ಯುವತಿ ಭಾಗಿಯಾಗಿದ್ದಳು. ಕಾರ್ಯಕ್ರಮಕ್ಕೆ ಬಂದಿದ್ದ ಶಿವಕುಮಾರ್‌ಗೆ ಈಕೆಯ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು. ಊರಿಗೆ ವಾಪಾಸಾದ ನಂತರವೂ ಇಬ್ಬರ ನಡುವೆ ಮಾತುಕತೆ, ಮೊಬೈಲ್‌ ಚಾಟಿಂಗ್‌ ಮುಂದುವರೆದಿದ್ದವು.

ಆನಂತರ ಆಕೆಯ ಊರಿಗೆ ಬಂದಿದ್ದ ಶಿವಕುಮಾರ್‌ ಮನೆಯಲ್ಲಿ ಯಾರೂ ಇಲ್ಲದಾಗ ಆಕೆಯೊಂದಿಗೆ ಒತ್ತಾಯಪೂರ್ವಕ ಲೈಂಗಿಕ ಸಂಬಂಧ ಬೆಳೆಸಿದ್ದ. ಅಲ್ಲದೇ ಆ ವೇಳೆ ಕೆಲವು ಫೋಟೋಗಳನ್ನು ತೆಗೆದುಕೊಂಡಿದ್ದ. ಕೆಲವು ದಿನಗಳ ನಂತರ ಆಕೆಗೆ ನಿನ್ನ ಕೆಲ ಫೋಟೋಗಳು ನನ್ನ ಬಳಿ ಇವೆ. ಹಣ ನೀಡದೇ ಇದ್ದರೆ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಹೀಗೆ ಹಲವು ಬಾರಿ ಬೆದರಿಕೆ ಹಾಕಿ ಒಟ್ಟು85 ಸಾವಿರ ರೂ.ಗಳನ್ನು ಆಕೆಯಿಂದ ಕಿತ್ತಿದ್ದ. ಒಮ್ಮೆ ಹಣ ನೀಡದೇ ಇದ್ದಾಗ ಆಕೆಯೊಂದಿಗೆ ಇದ್ದ ಖಾಸಗಿ ಕ್ಷಣಗಳ ಫೋಟೋವನ್ನು ಸಂಬಂಧಿಯೊಬ್ಬನಿಗ ಕಳುಹಿಸಿದ್ದ. ಇದನ್ನು ಆಕೆಗೆ ಹೇಳಿ ಬೆದರಿಸಿದ್ದ. ಕೆಲ ದಿನಗಳ ಹಿಂದೆ ಮತ್ತೆ ಊರಿಗೆ ಬಂದು ಭೇಟಿಯಾಗುವಂತೆ ಪೀಡಿಸಿದ್ದ.

ಈತನ ಕಾಟ ಹೆಚ್ಚುತ್ತಿದ್ದುದರಿಂದ ಆತಂಕಗೊಂಡ ಯುವತಿ ತನ್ನ ಪೋಷಕರಿಗೆ ಆತನ ವರ್ತನೆ, ಹಿಂದಿನ ಘಟನೆಗಳನ್ನಾ ವಿವರಿಸಿದ್ದಳು. ಕೊನೆಗೆ ಆಕೆಯ ಪೋಷಕರು ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಶಿವಕುಮಾರ್‌ ಹಳ್ಳಿ ವರ್ತನೆ ಬಗ್ಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಹಣ ಕಿತ್ತಿತ್ತು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನೆಲಮಂಗಲ ಠಾಣೆ ಇನ್ಸ್‌ಪೆಕ್ಟರ್‌ ಶಶಿಧರ ತಿಳಿಸಿದ್ದಾರೆ.

Whats_app_banner