Bengaluru Crime: ಸಾಲ ಮರಳಿಸದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ್ದ ಫೈನಾನ್ಸಿಯರ್ ಅರೆಸ್ಟ್; ನಾಲ್ವರು ಬೈಕ್ ಕಳ್ಳರ ಬಂಧನ
ಸಾಲ ಮರುಪಾವತಿಸದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿದ್ದ ಆರೋಪಿಯನ್ನು 4 ಗಂಟೆಯೊಳಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅತ್ತ, ಮೂರು ಪ್ರತ್ಯೇಕ ಬೈಕ್ ಕಳವು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬೆಂಗಳೂರು ದಕ್ಷಿಣ ಮತ್ತು ಉತ್ತರ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಲ ಮರಳಿಸಲಿಲ್ಲ ಎಂದು ಹೋಟೆಲ್ ಮಾಲೀಕರೊಬ್ಬರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಫೈನಾನ್ಸಿಯರ್‌ನನ್ನು ಕೇವಲ 4 ಗಂಟೆಗಳಲ್ಲೇ ಬೆಂಗಳೂರಿನ ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಲವನ್ನು ಹಿಂತಿರುಗಿಸಿಲ್ಲ ಎಂದು ಫೈನಾನ್ಸಿಯರ್ 46 ವರ್ಷದ ದಯಾಳ್ ಎಂಬಾತ ಶ್ರೀರಾಂಪುರದ ಸಾಯಿಬಾಬಾನಗರ ನಿವಾಸಿ 38 ವರ್ಷದ ಕುಮಾರ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಕೊಲೆ ನಡೆದ ನಾಲ್ಕು ಗಂಟೆಗಳಲ್ಲೇ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರ್ ಮತ್ತು ದಯಾಳ್ ಇಬ್ಬರೂ ಸ್ನೇಹಿತರು ಮತ್ತು ಸಾಯಿಬಾಬಾ ನಗರದಲ್ಲೇ ವಾಸವಾಗಿದ್ದರು. ದಯಾಳ್ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರೆ, ಕುಮಾರ್ ಮನೆ ಹತ್ತಿರವೇ ಸಣ್ಣ ಹೋಟೆಲ್ ನಡೆಸುತ್ತಿದ್ದರು. ದಯಾಳ್ ಅವರಿಂದ ಕುಮಾರ್ ಮನೆ ಕಟ್ಟಲು ಮತ್ತು ಹೋಟೆಲ್ ಅಭಿವೃದ್ಧಿಗೆ ಎಂದು 65 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಸಾಲ ಮರಳಿಸಲು ಸಾಧ್ಯವಾಗಿರಲಿಲ್ಲ. ದಯಾಳ್ ಸಾಲವನ್ನು ಮರಳಿಸುವಂತೆ ಒತ್ತಡ ಹೇರುತ್ತಲೇ ಇದ್ದರು. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಯಾಳ್ ಅವರೂ ಇತರರಿಂದ ಸಾಲ ಪಡೆದು ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಿದ್ದರು. ಅವರಿಗೂ ಸಾಲಗಾರರ ಕಾಟ ಹೆಚ್ಚಾಗಿತ್ತು. ಇದರಿಂದ ಕಂಗೆಟ್ಟ ದಯಾಳ್ ಎಚ್ಚರಿಕೆ ನೀಡಿದ್ದರೂ ಕುಮಾರ್ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಆಕ್ರೋಶಗೊಂಡ ದಯಾಳ್, ಕುಮಾರ್ ಅವರನ್ನು ಹತ್ಯೆ ಮಾಡಲು ತೀರ್ಮಾನಿಸಿ ಸೋಮವಾರ ಮಧ್ಯಾಹ್ನ ತರಕಾರಿ ಕತ್ತರಿಸುವ ಚಾಕು ಖರೀದಿಸಿದ್ದರು. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಕುಮಾರ್ ಜೊತೆಗೆ ರಾಜಾಜಿನಗರದ ಬಾರ್‌ವೊಂದರಲ್ಲಿ ತಡರಾತ್ರಿವರೆಗೂ ಮದ್ಯ ಸೇವಿಸಿದ್ದರು. ನಂತರ ಮುಂಜಾನೆ 2.30ರ ಸುಮಾರಿಗೆ ಓಕಳೀಪುರದ ನ್ಯೂಕಾಳಪ್ಪ ಬ್ಲಾಕ್‌ನಲ್ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ನಾಲ್ವರು ಬೈಕ್ ಕಳ್ಳರ ಬಂಧನ
ಬೆಂಗಳೂರು ದಕ್ಷಿಣ ಮತ್ತು ಉತ್ತರ ವಿಭಾಗದ ಪೊಲೀಸರು ಮೂರು ಪ್ರತ್ಯೇಕ ಬೈಕ್ ಕಳವು ಪ್ರಕರಣಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್ ಗಳನ್ನು ಕಳವು ಮಾಡುತ್ತಿದ್ದ ಶೇಖ್ ಮುಜಾಮಿಲ್ ಪಾಷಾ ಮತ್ತು ಮೊಹಮ್ಮದ್ ಫಯಾಜ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ವಿಲಾಸಿ ಜೀವನ ನಡೆಸಲು ಬೈಕ್ ಕಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇವರು ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಬೇರೆ ಊರುಗಳಲ್ಲಿ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಆಗಿದೆ ಎಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹೋಟೆಲ್‌ಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಸಾದಿಕ್ ಎಂಬಾತನನ್ನು ಕುಮಾರಸ್ವಾಮಿ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ. ಈತನಿಂದ 4 ಲಕ್ಷ ರೂ ಮೌಲ್ಯದ 7 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕದ್ದು ಬಿಡಿ ಭಾಗಗಳನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದಆರೋಪಿಯನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ತಿಲಕ್ ಬಂಧಿತ ಆರೋಪಿ. ಈತನಿಂದ 8 ಲಕ್ಷ ರೂ ಬೆಲೆ ಬಾಳುವ 7 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವರದಿ: ಮಾರುತಿ ಎಚ್, ಬೆಂಗಳೂರು.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಒದಿ | ಮಕ್ಕಳನ್ನು ಸ್ಕೂಲ್ ಬಸ್ನಲ್ಲಿ ಕಳುಹಿಸುವ ಮುನ್ನ ಇರಲಿ ಎಚ್ಚರ: ಬೆಂಗಳೂರಿನಲ್ಲಿ ಕುಡಿದು ವಾಹನ ಚಲಾಯಿಸಿದ ಶಾಲಾ ಬಸ್ ಚಾಲಕರ ವಿರುದ್ಧ ಕೇಸ್