ಬೆಂಗಳೂರು ಅಪರಾಧ ಸುದ್ದಿ; ಪ್ರಯಾಣಿಕರ ಚಿನ್ನಾಭರಣ ಕಳವು, ಇಬ್ಬರು ಮಹಿಳೆಯರ ಬಂಧನ; ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಪ್ರಯಾಣಿಕರ ಚಿನ್ನಾಭರಣ ಕಳವು, ಇಬ್ಬರು ಮಹಿಳೆಯರ ಬಂಧನ; ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಸೆರೆ

ಬೆಂಗಳೂರು ಅಪರಾಧ ಸುದ್ದಿ; ಪ್ರಯಾಣಿಕರ ಚಿನ್ನಾಭರಣ ಕಳವು, ಇಬ್ಬರು ಮಹಿಳೆಯರ ಬಂಧನ; ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಸೆರೆ

ಬೆಂಗಳೂರು ಅಪರಾಧ ಸುದ್ದಿ; ಬಸ್‌ ಪ್ರಯಾಣಿಕರ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಮಹಿಳೆಯರ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಪೊಲೀಸರಿಗೆ ಸೆರೆ ಸಿಕ್ಕಿದೆ. ಪ್ರತ್ಯೇಕ ಘಟನೆಯಲ್ಲಿ ಚಿಕ್ಕಬಾಣಾವರದ ಯೂಟ್ಯೂಬ್‌ ಚಾನೆಲ್‌ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಪ್ರಯಾಣಿಕರ ಚಿನ್ನಾಭರಣ ಕಳವು ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಬಂಧನವಾಗಿದೆ. ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಸೆರೆಯಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಪ್ರಯಾಣಿಕರ ಚಿನ್ನಾಭರಣ ಕಳವು ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಬಂಧನವಾಗಿದೆ. ಪಶ್ಚಿಮ ಬಂಗಾಳದ ಕುಖ್ಯಾತ ಲಾಡಿಯಾ ಗ್ಯಾಂಗ್‌ ಸೆರೆಯಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಯಾಣಿಕರ ಗಮನವನ್ನು ಬೇರೆಡೆಗೆ ಸೆಳೆದು ಚಿನ್ನಾಭರಣಗಳನ್ನು ದೋಚುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿ ಅವರಿಂದ 80 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಲಾವಣ್ಯ ಮತ್ತು ಮೀನಾ ಬಂಧಿತ ಆರೋಪಿಗಳು. ಇವರು ಬ್ಯಾಂಕ್‌ ನಲ್ಲಿ ಅಡವಿಟ್ಟಿದ್ದ 855 ಗ್ರಾಂ ಮತ್ತು ಮನೆಯಲ್ಲಿ ಬಚ್ಚಿಟ್ಟಿದ್ದ 44 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕೆ.ಆರ.ಪುರ ಪೊಲೀಶ ಠಾಣಾ ವ್ಯಾಪ್ತಿಯ ನಿವಾಸಿಯಬ್ಬರು ಕಳೆದ ವರ್ಷ ಅಕ್ಟೋಬರ್‌ 18ರಂದು ಬಸ್‌ ಹತ್ತುವ ಸಂದರ್ಭದಲ್ಲಿ ಬ್ಯಾಗ್‌ ನಲ್ಲಿದ್ದ 156 ಗ್ರಾಂ ಚಿನ್ನದ ಆಭರಣಗಳು ಕಳುವಾಗಿವೆ ಎಂದು ದೂರು ನೀಡಿದ್ದರು. ತನಿಖೆ ನಡೆಸುವ ಸಂದರ್ಭದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಖಚಿತ ಮಾಹಿತಿ ಮೇರೆಗೆ ಗಾಂಧಿನಗರದಲ್ಲಿರುವ ಯಾತ್ರಿ ನಿವಾಸ್‌ ಲಾಡ್ಜ್‌ ನಲ್ಲಿ ಉಳಿದುಕೊಂಡಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಈ ಆರೋಪಿಗಳು ಬಸ್‌ ನಿಲ್ದಾಣಗಳಲ್ಲಿ ಮಹಿಳೆಯರ ಗಮನವನ್ನು ಬೇರೆಡೆಗೆ ಸೆಳೆದು ಆಭರಣಗಳನ್ನು ಕಳವು ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವರು ಕರೂರು ವೈಶ್ಯ ಬ್ಯಾಂಕ್‌ ನಲ್ಲಿ ಅಡವಿಟ್ಟಿದ್ದ ಮತ್ತು ಮನೆಯಲ್ಲಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ಕೆಆರ್‌ ಪುರ ಠಾಣೆ ವ್ಯಾಪ್ತಿಯ 4, ಮಹದೇವಪುರ ಪೊಲೀಸ್‌ ಠಾಣೆಯ 2 ಯಶವಂತಪುರ, ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿದ್ದು ಮತ್ತಷ್ಟು ವಿಚಾರಣೆ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ಲಾಡಿಯಾ ಗ್ಯಾಂಗ್‌ ಬಂಧನ

ಯಾರೂ ಇಲ್ಲದ ಸಮಯದಲ್ಲಿ ಮನೆ ಬೀಗ ಒಡೆದು ಕಳವು ಮಾಡುತ್ತಿದ್ದ ಪಶ್ಚಿಮ ಬಂಗಾಳದ ಲಾಡಿಯಾ ಗ್ಯಾಂಗ್‌ ನ 6 ಮಂದಿ ಕಳ್ಳರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಇವರಿಂದ 27 ಲಕ್ಷ ರೂ. ಮೌಲ್ಯದ 452 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳದ ಲಾಡಿಯಾ ಜಿಲ್ಲೆಯ ಆರು ಮಂದಿ ಕಳ್ಳರು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದರು. ಇವರು ಅಡವಿಟ್ಟಿದ್ದ ಬ್ರೋಕರ್‌ ಅಂಗಡಿಯ ಮಾಲೀಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯದ ಗೃಹಲಕ್ಷ್ಮೀ ಬಡಾವಣೆಯ ನಿವಾಸಿಯೊಬ್ಬರು ತಮ್ಮ ಮನೆಗೆ ಬೀಗ ಹಾಕಿಕೊಂಡು ಅಮೆರಿಕದಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದರು. ಕೆಲವು ದಿನಗಳ ನಂತರ ಮನೆಯ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದು ಸಂಬಂಧಿಯೊಬ್ಬರಿಗೆ ತಿಳಿಸಿ ಪರಿಶೀಲಿಸಲು ತಿಳಿಸಿದ್ದರು. ಅವರು ಹೋಗಿ ನೋಡಿದಾಗ ಮನೆಯ ಬೀಗ ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು.

ದೂರು ಸ್ವೀಕರಿಸಿ ಮನೆಯ ಪರಿಶೀಲನೆ ನಡೆಸಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದರು. ಪೊಲೀಸರು ಮೂವರು ಆರೋಪಿಗಳನ್ನು ಎಚ್‌ ಎಂ ಟಿ ಬಡಾವಣೆಯಲ್ಲಿ ಬಂದಿಸಿದ್ದರು. ನಂತರ ಇವರು ಲಾಡಿಯಾ ಗ್ಯಾಂಗ್‌ ಗೆ ಸೇರಿದ ಕಳ್ಳರು ಎಂದು ತಿಳಿದು ಬಂದಿದೆ. ಈ ಆರೋಪಿಗಳ ಜತೆ ಪಶ್ಚಿಮ ಬಂಗಾಳಕ್ಕೆ ತೆರಳಿ ಉಳಿದ ಆರೋಪಿಗಳು ಮತು ಅಂಗಡಿ ಮಾಲೀಕರಿಬ್ಬರನ್ನು ಬಂಧಿಸಲಾಗಿದೆ. ಇವರ ಬಂಧನದಿಂದ ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೂ ಟ್ಯೂಬ್‌ ವಾಹಿನಿ ಮಾಲೀಕ ಆತ್ಮಹತ್ಯೆ

ಬೆಂಗಳೂರಿನ ಹೆಸರುಘಟ್ಟ ರಸ್ತೆಯ ಚಿಕ್ಕಬಾಣಾವರದ ನಿವಾಸಿ ಯೂ ಟ್ಯೂಬ್‌ ವಾಹಿನಿ-11 ವ್ಯವಸ್ಥಾಪಕ ನಿರ್ದೇಶಕ 38 ವರ್ಷದ ಮಂಜುನಾಥ್‌ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಲಿ ಸಮೀಪದ ಧರ್ಮನಾಯಕನ ತಾಂಡ್ಯದಲ್ಲಿ ನಟಿ ಲೀಲಾವತಿ ನಿರ್ಮಿಸಿರುವ ಆಸ್ಪತ್ರೆಯ ಹಿಂಬಾಗದ ಪಶು ಆಸ್ಪತ್ರೆ ಹಿಂಬಾಗದಲ್ಲಿ ಮಂಜುನಾಥ್‌ ಅವರು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ತಳದಲ್ಲಿ ಮರಣಪತ್ರ ದೊರಕಿದ್ದು, ತಮ್ಮ ಸಾವಿಗೆ ತಾವೇ ಕಾರಣ. ಹಣಕಾಸು ಸೇರಿದಂತೆ ಇನ್ನಿತರೆ ಯಾವುದೇ ಸಮಸ್ಯೆಗಳಿಲ್ಲ. ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ. ಮೃತ ಮಂಜುನಾಥ್‌ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

Whats_app_banner