ಕನ್ನಡ ಸುದ್ದಿ  /  Karnataka  /  Bengaluru Crime News Playing Devotional Songs During Ramadan Namaz Mobile Shop Owner Assaulted Fir Registered Rmy

ಬೆಂಗಳೂರಿನಲ್ಲಿ ರಂಜಾನ್ ನಮಾಜ್ ವೇಳೆ ಭಕ್ತಿ ಗೀತೆ ಹಾಕಿದ್ದಕ್ಕೆ ಸಿಟ್ಟು; ಮೊಬೈಲ್ ಅಂಗಡಿ ಮಾಲೀಕ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Bengaluru Crime News: ರಂಜಾನ್ ನಮಾಜ್ ವೇಳೆ ಹನುಮಾ ಚಾಲೀಸ್ ಹಾಕಿದ್ದಾನೆ ಎಂದು ಆರೋಪಿಸಿ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಮೂರ್ನಾಲ್ಕು ಯುವರ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೊಬೈಲ್ ಅಂಗಡಿ ಮಾಲೀಕನ ಮೇಲೆ ಗುಂಪೊಂದು ಹಲ್ಲೆ ಮಾಡುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊಬೈಲ್ ಅಂಗಡಿ ಮಾಲೀಕನ ಮೇಲೆ ಗುಂಪೊಂದು ಹಲ್ಲೆ ಮಾಡುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ರಂಜಾನ್ ನಮಾಜ್ ವೇಳೆ ಮೊಬೈಲ್ ಅಂಗಡಿಯಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದಾರೆ ಎಂದು ಆರೋಪಿಸಿ ಯುವಕರ ಗ್ಯಾಂಗ್ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆ ಗೊಳಗಾದ ಅಂಗಡಿ ಮಾಲೀಕನನ್ನು ಮುಕೇಶ್ ಎಂದು ಗುರುತಿಸಲಾಗಿದೆ. ಈತ ಸಿದ್ದಣ್ಣ ಗಲ್ಲಿಯ ಜುಮ್ಮಾ ಮಸೀದಿ ರಸ್ತೆ ಪಕ್ಕದಲ್ಲಿ ವರ್ಧಮಾನ್ ಟೆಲಿಕಾಂ ಎಂಬ ಮೊಬೈಲ್ ಶಾಪ್ ಇಟ್ಟುಕೊಂಡಿದ್ದಾನೆ. ಸಂಜೆಯ ನಮಾಜ್ ಸಮಯದಲ್ಲಿ ಮುಕೇಶ್ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಭಕ್ತಿಗೀತೆಯನ್ನು ಹಾಕಿದ್ದಾನೆ.

ಇದೇ ವಿಚಾರವಾಗಿ ಅಂಗಡಿ ಬಳಿಗೆ ಬಂದ ಐದಾರು ಯುವಕರ ಗುಂಪು ನಮಾಜ್ ಸಮಯದಲ್ಲಿ ಭಕ್ತಿ ಗೀತೆಗಳನ್ನು ಯಾಕೆ ಹಾಕುತ್ತೀಯಾ ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಂಗಡಿಯ ಹೊರಗಡೆ ನಿಂತಿದ್ದ ಯುವಕರು ಮುಕೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಂಗಡಿಯಲ್ಲಿದ್ದ ಸಿಸಿಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಯುವಕರ ಗುಂಪು ಮುಕೇಶ್ ತಲೆಗೆ ಸ್ಪೀಕರ್ ನಿಂದ ಹೊಡೆದಿದ್ದಾರೆ. ಇದರಿಂದ ಅವರ ತಲೆಗೆ ಪೆಟ್ಟಾಗಿದೆ.

ಘಟನೆ ಸಂಬಂಧ ಮುಕೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಈ ಯುವಕರು ಗುಂಪು ಕಿರುಕುಳ ನೀಡುತ್ತಿದ್ದಾರೆ. ಹಣ ವಸೂಲಿ ಮಾಡಲು ಬೆದರಿಕೆ ಹಾಕಲು ಯತ್ನಿಸುತ್ತಿದ್ದಾರೆ. ಆರಂಭದಲ್ಲಿ ಆರೋಪಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದರು ಎಂದು ಮುಕೇಶ್ ಆರೋಪಿಸಿದ್ದಾರೆ.

ಮುಕೇಶ್ ಅವರ ಪರವಾಗಿ ನಿಂತ ಇತರೆ ವ್ಯಾಪಾರಿಗಳು ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಅಗ್ರಹಪಡಿಸಿದ್ದು, ನ್ಯಾಯ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಮುಕೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಪಾರಿಗಳ ಪ್ರತಿಭಟನೆಗೆ ಮಣಿದ ಪೊಲೀಸರು ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಸಿ ಹಲ್ಲೆ ನಡೆಸಿರುವವರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜುಮ್ಮಾ ಮಸೀದಿ ರಸ್ತೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಪೊಲೀಸ್ ಠಾಣೆಯ ಎದುರೂ ಭದ್ರತೆ ಕಲ್ಪಿಸಲಾಗಿದೆ.

IPL_Entry_Point