ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime: ಬೆಕ್ಕಿಗೆ ಹಾಲು ಹಾಕು ಎಂದು ಮನೆಯ ಕೀ ಕೊಟ್ಟರೆ ಚಿನ್ನದ ಸರ ಕದ್ದು ಪೊಲೀಸರ ಅತಿಥಿಯಾದ

Bengaluru Crime: ಬೆಕ್ಕಿಗೆ ಹಾಲು ಹಾಕು ಎಂದು ಮನೆಯ ಕೀ ಕೊಟ್ಟರೆ ಚಿನ್ನದ ಸರ ಕದ್ದು ಪೊಲೀಸರ ಅತಿಥಿಯಾದ

ಪೊಲೀಸರು ಆತನ ಮೊಬೈಲನ್ನು ಪರಿಶೀಲಿಸಿದಾಗ ಚಿನ್ನದ ಸರವನ್ನು ಅಡವಿಟ್ಟಿರುವ ರಶೀತಿ ಪತ್ತೆಯಾಗಿತ್ತು. ಆಗ ಆತ ಸತ್ಯವನ್ನು ಒಪ್ಪಿಕೊಂಡಿದ್ದ.

ಬೆಂಗಳೂರು ಅಪರಾಧ ಸುದ್ದಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಸಾಕಿಕೊಂಡಿದ್ದ ಬೆಕ್ಕಿಗೆ ಹಾಲು ಹಾಕು ಎಂದು ಮಾಲೀಕರು ಮನೆಯ ಕೀ ಕೊಟ್ಟು ಹೋಗಿದ್ದರು. ಆ ಯುವಕ ಅದೇ ಮನೆಯಲ್ಲಿ ಕಳ್ಳತನ ನಡೆಸಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಜಯನಗರದ ನಿವಾಸಿಯೂ ಆಗಿರುವ 23 ವರ್ಷದ ವೆಂಕಟೇಶ್‌ ಬಂಧಿತ ಆರೋಪಿ. ಜಯನಗರ 7ನೇ ಬ್ಲಾಕ್‌ನಲ್ಲಿ ದೂರುದಾರರು ವಾಸವಾಗಿದ್ದರು. ಇವರ ಮನೆ ಪಕ್ಕದಲ್ಲೇ ಆರೋಪಿ ವೆಂಕಟೇಶ್‌ ವಾಸವಾಗಿದ್ದ. ನೆರೆಹೊರೆಯವರಾಗಿದ್ದರಿಂದ ಪರಸ್ಪರ ಪರಿಚಯ ಇತ್ತು. ದೂರುದಾರರು ಜೂನ್‌ 9ರಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬೇರೆ ಊರಿಗೆ ಹೊರಟಿದ್ದರು. ಆದರೆ ಮನೆಯಲ್ಲಿ ಸಾಕಿದ ಬೆಕ್ಕು ಇತ್ತು. ಆದ್ದರಿಂದ ವೆಂಕಟೇಶ್‌ ಗೆ ಬೆಕ್ಕಿಗೆ ಹಾಲು ಹಾಕುವಂತೆ ಹೇಳಿ ಮನೆಯ ಕೀ ಕೊಟ್ಟು ಹೋಗಿದ್ದರು. ಬೆಕ್ಕಿಗೆ ಹಾಲು ಹಾಕಲೆಂದು ಮನೆಯನ್ನು ಪ್ರವೇಶಿಸಿದ್ದ ಆರೋಪಿಗೆ ಬೀರು ಕಣ್ಣಿಗೆ ಬಿತ್ತು. ಬೀರು ತೆಗೆದರೆ ನಗದು ಅಥವಾ ಚಿನ್ನಾಭರಣ ಸಿಗಬಹುದು ಎಂಬ ಅಸೆಯಿಂದ ಬೀರು ತೆಗೆದುಬಿಟ್ಟಿದ್ದ. ಬೀರುವಿನಲ್ಲಿದ್ದ ಚಿನ್ನದ ಸರವೊಂದನ್ನು ಕಳುವು ಮಾಡಿದ.

ನಂತರ ಏನೂ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದ. ಮನೆಗೆ ಬಂದುನೋಡಿದಾಗ ಚಿನ್ನದ ಸರ ಕಾಣೆಯಾಗಿತ್ತು. ಚಿನ್ನದ ಸರ ಕಳವಾಗಿರುವ ಬಗ್ಗೆ ಮೆನಯ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರನ್ನು ಆಧರಿಸಿ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಆರಂಭದಲ್ಲಿ ವೆಂಕಟೇಶ ತಾನು ಕಳ್ಳತನ ಮಾಡಿಲ್ಲ, ತನಗೇನೂ ತಿಳಿದಿಲ್ಲ ಎಂದು ಅಮಾಯಕನಂತೆ ವರ್ತಿಸುತ್ತಿದ್ದ. ಪೊಲೀಸರು ಆತನ ಮೊಬೈಲನ್ನು ಪರಿಶೀಲಿಸಿದಾಗ ಚಿನ್ನದ ಸರವನ್ನು ಅಡವಿಟ್ಟಿರುವ ರಶೀತಿ ಪತ್ತೆಯಾಗಿತ್ತು. ಆಗ ಆತ ಸತ್ಯವನ್ನು ಒಪ್ಪಿಕೊಂಡಿದ್ದ. ಕಾರ್‌ ವಾಷಿಂಗ್‌ ಸರ್ವೀಸ್‌ ಸೆಂಟರ್‌ ನಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಹಣದ ಸಮಸ್ಯೆ ಇದ್ದುದರಿಂದ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬೆಕ್ಕಿಗೆ ಹಾಲು ಹಾಕಲು ಹೋಗುತ್ತಿದ್ದಾಗ ಬೀರು ಕಣ್ನೀಗೆ ಬಿದ್ದಿತ್ತು. ಏನಾದರೂ ಸಿಗಬಹುದು ಎಂದು ಒಮ್ಮೆ ತೆರೆದು ನೋಡಿದ್ದೆ. ಆಗ ಚಿನ್ನದ ಸರ ಸಿಕ್ಕಿತ್ತು ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೆಕ್ಯೂರಿಟಿ ಗಾರ್ಡ್‌ಗಳನ್ನು ಸುಲಿಗೆ ಮಾಡಿದ್ದ ಇಬ್ಬರ ಬಂಧನ

ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪಿಳ್ಳಣ್ಣ ಗಾರ್ಡನ್‌ ನಿವಾಸಿ 26 ವರ್ಷದ ಮೊಹಮದ್‌ ತೌಹಿದ್‌ ಮತ್ತು 23 ವರ್ಷದ ಮೊಹಮದ್‌ ವಾಹಿದ್‌ ಆಲಿಯಾಸ್‌ ಸ್ನೇಕ್‌ ವಾಹಿದ್‌ ಬಂಧಿತ ಆರೋಪಿಗಳು. ಇವರಿಂದ ಎರಡು ಬೈಕ್‌ ಮತ್ತು 5 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಸ್ಸಾಂ ಮೂಲದ ಈ ಸೆಕ್ಯೂರಿಟಿ ಗಾರ್ಡ್‌ ಗಳನ್ನು ಮತ್ತೊಂದು ಬೈಕ್‌ ನಲ್ಲಿ ಅನುಸರಿಸಿ ಅಡ್ಡಗಟ್ಟಿ ಆರೋಪಿಗಳು ಸುಲಿಗೆ ಮಾಡಿದ್ದರು. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಬಳಿ ಕರೆದೊಯ್ದು ಬೈಕ್‌, ನಗದು ಮತ್ತು ಮೊಬೈಲ್‌ಗಳನ್ನು ಸುಲಿಗೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೂಲತಃ ಚಿಕನ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಐಷಾರಾಮಿ ಜೀವನ ನಡೆಸಲು ಸುಲಿಗೆ ಮಾಡಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.