ಮಕ್ಕಳ ಜೀವನದ ಜೊತೆ ಚೆಲ್ಲಾಟ; ಕುಡಿದು ವಾಹನ ಚಲಾಯಿಸಿದ 21 ಶಾಲಾ ಬಸ್ ಚಾಲಕರ ವಿರುದ್ಧ ಬಿತ್ತು ಕೇಸ್, ಡಿಎಲ್ ರದ್ದು
Bengaluru Police: ಸೆಪ್ಟೆಂಬರ್ 30ರಂದು ಸೋಮವಾರ ಬೆಂಗಳೂರು ನಗರದಾದ್ಯಂತ ಒಟ್ಟು 3,924 ಶಾಲಾ ಬಸ್ಸುಗಳನ್ನು ಪರಿಶೀಲಿಸಲಾಗಿದ್ದು, 21 ಚಾಲಕರು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಡಿದು ವಾಹನ ಚಲಾಯಿಸಿದ 21 ಶಾಲಾ ಬಸ್ ಚಾಲಕರ ವಿರುದ್ಧ ಬೆಂಗಳೂರು ಪೊಲೀಸರು ಸೆಪ್ಟೆಂನರ್ 30ರ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಚಾಲಕರ ಲೈಸನ್ಸ್ (ಪರವಾನಗಿ)ಗಳನ್ನು ಕರ್ನಾಟಕ ಸಾರಿಗೆ ಇಲಾಖೆ ರದ್ದುಗೊಳಿಸಲು ಶಿಫಾರಸ್ಸು ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಪೊಲೀಸರ ಪ್ರಕಾರ, ಸೋಮವಾರ ನಗರದಾದ್ಯಂತ ಒಟ್ಟು 3,924 ಶಾಲಾ ಬಸ್ಸುಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 21 ಚಾಲಕರು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದಾರೆ. ಬಸ್ಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಿದ್ದಕ್ಕಾಗಿ 400ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬೆಂಗಳೂರು ಪೊಲೀಸರು, ‘ಚಾಲಕರು ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತಹ ವಾಹನಗಳ ಪರ್ಮಿಟ್ ಅನ್ನು ಸಂಬಂಧಪಟ್ಟ ಆರ್‌ಟಿಒಎಸ್ ಮೂಲಕ ರದ್ದುಗೊಳಿಸಲು ಶಿಫಾರಸು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ನಿವಾಸಿಗಳ ಸುರಕ್ಷತೆಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜುಲೈನಲ್ಲಿ 23 ಪ್ರಕರಣಗಳು ದಾಖಲು
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ನಗರದ ರಸ್ತೆಗಳನ್ನು ಸುರಕ್ಷಿತವಾಗಿಸಲು ವಿಶೇಷ ಡ್ರೈವ್ಗಳು ಮುಂದುವರಿಯುತ್ತವೆ ಎಂದು ಪೊಲೀಸರು ಹೇಳಿಕೆಯಲ್ಲಿ ನೀಡಿದ್ದಾರೆ. ಜುಲೈನಲ್ಲಿ ಬೆಂಗಳೂರು ಪೊಲೀಸರು ಶಾಲಾ ಬಸ್ ಚಾಲಕರ ವಿರುದ್ಧ ಕ್ರಮ ಕೈಗೊಂಡು ನಗರದಾದ್ಯಂತ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆಗಳನ್ನು ನಡೆಸಿದ್ದರು. ಕುಡಿದು ವಾಹನ ಚಲಾಯಿಸಿದ ಪರೀಕ್ಷೆಯಲ್ಲಿ ಒಟ್ಟು 23 ಚಾಲಕರಿಗೆ ಪಾಸಿಟಿವ್ ಕಂಡುಬಂದಿತ್ತು.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಶಾಲಾ ಬಸ್ಸುಗಲ ಶಾಲಾ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಮತ್ತು ಅಜಾಗರೂಕ ಚಾಲನೆಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅನೇಕ ದೂರುಗಳನ್ನು ಸ್ವೀಕರಿಸಿದ ನಂತರ ಬೆಂಗಳೂರು ಪೊಲೀಸರು ಸಾಮಾನ್ಯವಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಈ ವಾಹನಗಳನ್ನು ನಿಗ್ರಹಿಸಲು ನಿರ್ಧರಿಸಲಾಯಿತು. ಬೆಂಗಳೂರಿನಲ್ಲಿ ಇಂತಹ ಅನಿರೀಕ್ಷಿತ ತಪಾಸಣೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಎಲ್ಲಾ ಚಾಲಕರ ಡಿಎಲ್ಗಳನ್ನು ರದ್ದುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.