ಮಠಕ್ಕೇ ಬಂದು ಅರ್ಚಕರಿಗೆ ಮೋಸ: ಚಿನ್ನದ ತುಳಸಿ ಹಾರ, 25 ಸಾವಿರ ದಕ್ಷಿಣೆ ನೀಡುವುದಾಗಿ ವಂಚಿಸಿದ ಸೋಗಿನ ಭಕ್ತ
ಕೃಷ್ಣಾಷ್ಟಮಿಯ ನಂತರದ ದಿನದಲ್ಲಿ ನಡೆದಂಥ ವಂಚನೆಯೊಂದು ಈಗ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣದ ವಿದ್ಯಾಪೀಠ ವೃತ್ತಕ್ಕೆ ಸಮೀಪದಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನದ ಮಠದಲ್ಲಿ ಈ ರೀತಿ ಮೋಸ ನಡೆದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.
ಬೆಂಗಳೂರು: ಕಳೆದ ಕೃಷ್ಣಾಷ್ಟಮಿಯ ನಂತರದ ದಿನದಲ್ಲಿ ನಡೆದಂಥ ವಂಚನೆಯ ಪ್ರಕರಣ ಇದು. ಈ ಘಟನೆ ನಡೆದಿರುವುದು ಬೆಂಗಳೂರು ದಕ್ಷಿಣದ ವಿದ್ಯಾಪೀಠ ವೃತ್ತಕ್ಕೆ ಸಮೀಪದಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನದ ಮಠದಲ್ಲಿ. ಮೋಸಕ್ಕೆ ಒಳಗಾದವರು ಪೊಲೀಸರಿಗೆ ದೂರು ನೀಡಲು ಹಾಗೂ ತಮ್ಮ ಹೆಸರು ಹಾಗೂ ಮಠದ ಸ್ಪಷ್ಟ ಹೆಸರು, ವಿಳಾಸ ಬಹಿರಂಗಪಡಿಸಲು ನಿರಾಕರಿಸಿದರು. ಹೀಗಾಗಿ ಅವರ ಖಾಸಗಿತನಕ್ಕೆ ಗೌರವಕೊಟ್ಟು, ಈ ವರದಿಯಲ್ಲಿಯೂ ಅವರ ಗುರುತಿಗೆ ಸಂಬಂಧಿಸಿದ ಯಾವುದೇ ವಿವರ ಪ್ರಕಟಿಸಿಲ್ಲ.
ಸುಮಾರು ಐದು- ಐದೂಕಾಲು ಅಡಿ ಎತ್ತರದ ವ್ಯಕ್ತಿಯೊಬ್ಬ ರಾಘವೇಂದ್ರ ಸ್ವಾಮಿಗಳ ಮಠದೊಳಗೆ ಹೋಗಿ, 'ಮದುವೆಯಾದ ಮೇಲೆ ಎಷ್ಟೋ ವರ್ಷಗಳ ಕಾಲ ನನಗೆ ಮಕ್ಕಳಿರಲಿಲ್ಲ. ಹಲವು ಕ್ಷೇತ್ರಗಳಿಗೆ ಹೋಗಿ ಬಂದೆ, ಎಷ್ಟೋ ಪೂಜೆ- ಪುನಸ್ಕಾರಗಳನ್ನು ಮಾಡಿದೆ, ಏನೂ ಫಲಿತಾಂಶ ಸಿಗಲಿಲ್ಲ. ಆದರೆ ಒಂದೂವರೆ ವರ್ಷದ ಹಿಂದೆ ಈ ರಸ್ತೆಯಲ್ಲಿ ಓಡಾಡುವಾಗ ಇಲ್ಲಿ ರಾಯರ ಮಠವಿರುವುದು ಗಮನಕ್ಕೆ ಬಂತು. ಹಾಗೇ ಇಲ್ಲಿ ಒಳಗೆ ಬಂದು ಪ್ರಾರ್ಥನೆ ಮಾಡಿದೆ. ಆ ನಂತರದ ಕೆಲವು ತಿಂಗಳಲ್ಲೇ ನನ್ನ ಹೆಂಡತಿ ಗರ್ಭ ಧರಿಸಿದಳು, ಮಗುವು ಸಹ ಆಯಿತು. ಆದ್ದರಿಂದ ಇಲ್ಲಿನ ರಾಯರ ಪೂಜೆಯ ಮುಖ್ಯ ಜವಾಬ್ದಾರಿ ಹೊತ್ತವರಿಗೆ ಚಿನ್ನದಲ್ಲಿ ಸುತ್ತಿದ ತುಳಸೀಮಣಿ, ಇಪ್ಪತ್ತೈದು ಸಾವಿರ ದಕ್ಷಿಣೆ, ವಸ್ತ್ರ, ದವಸ- ಧಾನ್ಯಗಳನ್ನು ನೀಡಬೇಕು ಅಂತ ಪ್ರೇರಣೆ ಆಗಿದೆ. ದಯವಿಟ್ಟು ನನ್ನ ಮನೆಗೆ ಬಂದು ತೆಗೆದುಕೊಂಡು ಹೋಗಬೇಕು' ಎಂದಿದ್ದಾನೆ.
ಯಾರು ಮಠದಲ್ಲಿ ಪೂಜೆ ಮಾಡುತ್ತಾರೋ ಅವರಿಗೆ ಈ ವ್ಯಕ್ತಿಯ ಮಾತು ಹಾಗೂ ನಡವಳಿಕೆ ನಂಬಿಕೆ ಮೂಡಿಸಿದೆ. ಸರಿ, ಆ ದಿನವೇ ಆತನ ಮನೆಗೆ ತೆರಳಿ, ದಾನವನ್ನು ಸ್ವೀಕರಿಸುವುದಕ್ಕೆ ನಿರ್ಧಾರವಾಗಿದೆ. ಆ ಹೊತ್ತಿಗೆ ವ್ಯಕ್ತಿಯು, ನನ್ನ ಬಳಿ ಐನೂರು ರೂಪಾಯಿ ನೋಟುಗಳಿವೆ. ಐವತ್ತು, ಇನ್ನೂರು, ನೂರು ರೂಪಾಯಿಯ ನೋಟಿರುವಂಥ ಹದಿನೈದು ಸಾವಿರ ಕೊಟ್ಟಿರಿ. ಮನೆಗೆ ಹೋದ ತಕ್ಷಣ ವಾಪಸ್ ಮಾಡ್ತೀನಿ ಎಂದಿದ್ದಾನೆ.
ಮಠದಲ್ಲಿದ್ದ ಭಕ್ತರ ಸೇವಾ ಕಾಣಿಕೆಯ ಮೊತ್ತವನ್ನು ಕೇಳಿ, ಪಡೆದ ಅರ್ಚಕರು ಅದನ್ನು ಆ ವ್ಯಕ್ತಿಗೆ ನೀಡಿದ್ದಾರೆ. ಆ ನಂತರ ವ್ಯಕ್ತಿಯ ಜೊತೆಗೆ ಆಟೋದಲ್ಲಿ ಮಠದಿಂದ ಹೊರಟಿದ್ದಾರೆ. ದಾರಿ ಮಧ್ಯೆ ಮತ್ತೆ ಅರ್ಚಕರಿಂದ 800 ರೂಪಾಯಿ ಫೋನ್ ಪೇ ಮಾಡಿಸಿ, ಬಾದಾಮಿ, ದ್ರಾಕ್ಷಿ, ಗೋಡಂಬಿಯನ್ನು ಆ ವ್ಯಕ್ತಿ ಖರೀದಿಸಿದ್ದಾನೆ. ಅದನ್ನೂ ಸಹ ನಂತರ ದಾನವಾಗಿ ನೀಡುತ್ತೇನೆ ಎಂದು ಅದೇ ವ್ಯಕ್ತಿ ತೆಗೆದುಕೊಂಡಿದ್ದಾನೆ. ಮನೆಗೆ ಹೋದ ಮೇಲೆ ಇದರೊಂದಿಗೆ ನೀವು ಖರ್ಚು ಮಾಡಿರುವ ಹಣ ಹಾಗೂ ದಕ್ಷಿಣೆಯನ್ನೂ ಕೊಟ್ಟುಬಿಡುತ್ತೇನೆ ಎಂದಿದ್ದಾನೆ.
ಅದಾದ ಮೇಲೆ ಮತ್ತೊಂದು ದಿನಸಿ ಮಳಿಗೆಯ ಬಳಿ ಆಟೋದಿಂದ ಇಳಿದು, ಒಂದು ಟಿನ್ ಎಣ್ಣೆಯನ್ನು ಖರೀದಿಸಿದ ವ್ಯಕ್ತಿಯು, ಇದಕ್ಕೆ ಏಳು ಸಾವಿರ ರೂಪಾಯಿ ಹಣ ಕೊಟ್ಟಿರಿ, ಮನೆಗೆ ಹೋದ ತಕ್ಷಣ ಎಲ್ಲ ಮೊತ್ತವನ್ನು ಸೇರಿಸಿ ಕೊಟ್ಟು ಬಿಡುತ್ತೇನೆ ಎಂದಿದ್ದಾನೆ. ಈ ಹಂತದಲ್ಲಿ ಅರ್ಚಕರಿಗೆ ಅನುಮಾನ ಮೂಡಿ, ನನ್ನ ಬಳಿ ಅಷ್ಟು ಹಣವಿಲ್ಲ ಎಂದಿದ್ದಾರೆ. ಆಗ, ನೀವು ಅಂಗಡಿಯಲ್ಲೇ ಕೂತಿರಿ. ಇಲ್ಲೇ ಹತ್ತಿರದ ಎಟಿಎಂನಲ್ಲಿ ಹಣ ತರ್ತೀನಿ ಎಂದು ಹೊರಗೆ ಹೊರಟ. ಅರ್ಚಕರು ಎಷ್ಟು ಹೊತ್ತು ಕಾದರೂ ಆ ವ್ಯಕ್ತಿಯು ವಾಪಸ್ ಬರಲಿಲ್ಲ.
ಒಂದೆರಡು ಗಂಟೆಗಳ ಕಾಲ ಅದೇ ಅಂಗಡಿಯಲ್ಲಿ ಕಾದು ಕುಳಿತ ನಂತರ, ಆ ವ್ಯಕ್ತಿ ತಮಗೆ ಪರಿಚಯ ಆಗಿದ್ದು ಹೇಗೆ, ನಂತರ ಆಗಿದ್ದೇನು ಎಂಬುದನ್ನು ಮಳಿಗೆ ಮಾಲೀಕರಿಗೆ ವಿವರಿಸಿ, ಒಂದು ವೇಳೆ ಆತ ವಾಪಸ್ ಬಂದರೆ ತನ್ನ ಫೋನ್ ನಂಬರ್ ಕೊಡಿ ಎಂದು ಹೇಳಿ, ಅರ್ಚಕರು ವಾಪಸ್ ಮಠಕ್ಕೆ ಬಂದಿದ್ದಾರೆ. ಈ ವಂಚಕನಿಗೆ ಕೊಡಲೆಂದು ಮಠದಲ್ಲಿ ಕೇಳಿ ಪಡೆದುಕೊಂಡಿದ್ದ ಭಕ್ತರ ಹಣವನ್ನು ನಂತರ ತಾವೇ ಕೈಯಿಂದ ಕಟ್ಟಿಕೊಟ್ಟಿದ್ದಾರೆ.
ವಿಭಾಗ