ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ರೇವ್ ಪಾರ್ಟಿ ಪ್ರಕರಣ; 101 ಮಂದಿಯ ರಕ್ತ ಸಂಗ್ರಹಣ, ತೆಲುಗು ನಟಿ ಹೇಮಾ ಪಾರ್ಟಿಯಲ್ಲಿ ಭಾಗವಹಿಸಿರೋದು ನಿಜ; ಪೊಲೀಸರ ಸ್ಪಷ್ಟನೆ

ಬೆಂಗಳೂರಿನಲ್ಲಿ ರೇವ್ ಪಾರ್ಟಿ ಪ್ರಕರಣ; 101 ಮಂದಿಯ ರಕ್ತ ಸಂಗ್ರಹಣ, ತೆಲುಗು ನಟಿ ಹೇಮಾ ಪಾರ್ಟಿಯಲ್ಲಿ ಭಾಗವಹಿಸಿರೋದು ನಿಜ; ಪೊಲೀಸರ ಸ್ಪಷ್ಟನೆ

ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣ ಸಂಬಂಧ 101 ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗವಹಿಸಿರುವುದು ನಿಜ ಎಂದ ಪೊಲೀಸರು ಸ್ಪಷ್ಟಪಡಿಸಿದ್ದಾರೆ (ವರದಿ; ಎಚ್ ಮಾರುತಿ).

ಬೆಂಗಳೂರಿನಲ್ಲಿ ನಡೆದಿರುವ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಅವರು 
ಭಾಗವಹಿಸಿರುವ ನಿಜ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಸ್ಫಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿರುವ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಅವರು ಭಾಗವಹಿಸಿರುವ ನಿಜ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಸ್ಫಷ್ಟಪಡಿಸಿದ್ದಾರೆ.

ಬೆಂಗಳೂರು: ಆನೇಕಲ್ (Anekal) ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ (Hebagodi Police Station) ವ್ಯಾಪ್ತಿಯ ಹುಸ್ಕೂರ್‌ನಲ್ಲಿರುವ ಜಿ.ಆರ್ ಫಾರ್ಮ್ ಹೌಸ್‌ನಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಇಡೀ ರಾತ್ರಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಪಾರ್ಟಿಯಲ್ಲಿದ್ದ 101 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಸಿಸಿಬಿ ಪೊಲೀಸರು (CCB Police) ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ ಪಾರ್ಟಿಯಲ್ಲಿ ಇದ್ದವರು ಮಾದಕ ವಸ್ತು ಸೇವನೆ ಮಾಡಿದ್ದರೆ ಅಥವಾ ಇಲ್ಲವೇ ಎನ್ನುವುದು ತಿಳಿದು ಬರಲಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಶನಿವಾರ (ಮೇ 18) ಸಂಜೆಯಿಂದ ಭಾನುವಾರ ಮುಂಜಾನೆವರೆಗೆ (ಮೇ 19) ಸನ್‌ಸೆಟ್ ಟು ಸನ್‌ರೈಸ್ ವಿಕ್ಟರಿ (Sunset to Sunrise Victory) ಹೆಸರಿನಲ್ಲಿ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಉದ್ದೇಶ ಹೊಂದಿದ್ದರು. ಭಾನುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದರು. ಈ ಘಟನೆ ನಡೆಯುತ್ತಿದ್ದಂತೆ ಫಾರ್ಮ್ ಹೌಸ್ ಮಾಲೀಕ ಗೋಪಾಲ್ ರೆಡ್ಡಿ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಫಾರ್ಮ್ ಹೌಸ್‌ನಲ್ಲಿ ಕೊಕೇನ್, ಎಂಡಿಎಂಎ, ಹೈಡೋ ಗಾಂಜಾ ಸೇರಿ ಹಲವು ಮಾದರಿಯ ಡ್ರಗ್ಸ್ ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಿಂದ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತೆಲುಗು ನಟಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿರುವುದು ನಿಜ; ಪೊಲೀಸರು

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಗ್ರಾಹಕರು ಹಾಗೂ ಪೆಡ್ಲರ್‌ಗಳು ಮಾದಕ ವಸ್ತುಗಳನ್ನು ಈಜುಕೊಳ ಮತ್ತು ಕಮೋಡ್‌ಗೆ ಹಾಕಿ ನಾಶಪಡಿಸಲು ಪ್ರಯತ್ನಿಸಿದ್ದರು. ಆದರೆ ಶ್ವಾನದಳ ಹಾಗೂ ಕೊಠಡಿಗಳಲ್ಲಿ ಬಚ್ಚಿಟ್ಟಿದ್ದ ಡ್ರಗ್ಸ್ ಅನ್ನು ಪತ್ತೆ ಮಾಡಲಾಗಿದೆ. ಆಂಧ್ರಪ್ರದೇಶ ಸೇರಿದಂತೆ ಯಾವುದೇ ರಾಜ್ಯದ ಶಾಸಕ ರೇವ್ ಪಾರ್ಟಿಯಲ್ಲಿ ಭಾಗವಹಿಸಿರಲಿಲ್ಲ. ರಾಜ್ಯಕ್ಕಿಂತ ಹೊರರಾಜ್ಯದ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.

ತೆಲುಗು ನಟಿ ಹೇಮಾ ರೇವ್ (Telugu Actress Hema) ಪಾರ್ಟಿಯಲ್ಲಿ ಭಾಗವಹಿಸಿರುವುದು ಖಚಿತವಾಗಿದ್ದು, ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಡ್ರಗ್ಸ್ ಸೇವನೆ ಮಾಡಿದ್ದರೆ ಶಿಕ್ಷೆಯಾಗಲಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಪಾರ್ಟಿ ಮೇಲೆ ದಾಳಿ ನಡೆಸಿದಾಗ ಕೆಲವು ಗ್ರಾಹಕರು ಮುಖ ಮುಚ್ಚಿಕೊಂಡು ಪರಾರಿಯಾಗಲು ಪ್ರಯತ್ನ ನಡೆಸಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದರು.

ರೇವ್ ಪಾರ್ಟಿಗೆ ಡ್ರಗ್ಸ್ ಪೂರೈಸಿದ್ದ ಆರೋಪಿಗಳ ಬಂಧನ

ಪಾರ್ಟಿಗೆ ಡ್ರಗ್ಸ್ ಪೂರೈಸಿದ್ದ ಆರೋಪದ ಮೇರೆಗೆ ವಿ.ರಣಧೀರ್, ವೈ.ಎಂ ಅರುಣ್‌ಕುಮಾರ್, ಎಲ್ ವಾಸು, ನಾಗಬಾಬು, ಮಹಮ್ಮದ್ ಅಬೂಬಬರ್ ಸಿದ್ದಿಕಿ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ನೆರೆ ರಾಜ್ಯಗಳಿಂದ ಡ್ರಗ್ಸ್ ಖರೀದಿ ಮಾಡಿ ರೇವ್ ರ್ಪಾರ್ಟಿಗೆ ಪೂರೈಸಿದ್ದರು ಎಂದೂ ತಿಳಿದು ಬಂದಿದೆ.

ರೇವ್ ಪಾರ್ಟಿಗೆ ದಿನವೊಂದಕ್ಕೆ ರೂಪಾಯಿ 50 ರಿಂದ 60 ಲಕ್ಷ ಶುಲ್ಕ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಗ್ರಾಹಕರಿಗೆ 10 ಸಾವಿರ ರೂಪಾಯಿ ಶುಲ್ಕ ಪಡೆಯಲಾಗಿತ್ತು. ಮಾದಕ ವಸ್ತುಗಳನ್ನು ಸ್ಥಳದಲ್ಲೇ ಖರೀದಿಸಲು ಅವಕಾಶ ನೀಡಲಾಗಿತ್ತು (ವರದಿ; ಎಚ್ ಮಾರುತಿ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024