ಬೆಂಗಳೂರು ಅಪರಾಧ ಸುದ್ದಿ; ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ ಸಾರಕ್ಕಿ ಪಾರ್ಕ್ ಜೋಡಿ ಕೊಲೆ, ಸಿನಿಮಾ ಸ್ಟೈಲ್ ನಲ್ಲಿ ಇಬ್ಬರ ಹತ್ಯೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ ಸಾರಕ್ಕಿ ಪಾರ್ಕ್ ಜೋಡಿ ಕೊಲೆ, ಸಿನಿಮಾ ಸ್ಟೈಲ್ ನಲ್ಲಿ ಇಬ್ಬರ ಹತ್ಯೆ

ಬೆಂಗಳೂರು ಅಪರಾಧ ಸುದ್ದಿ; ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ ಸಾರಕ್ಕಿ ಪಾರ್ಕ್ ಜೋಡಿ ಕೊಲೆ, ಸಿನಿಮಾ ಸ್ಟೈಲ್ ನಲ್ಲಿ ಇಬ್ಬರ ಹತ್ಯೆ

ಬೆಂಗಳೂರು ಅಪರಾಧ ಜಗತ್ತಿನಲ್ಲಿ ಜೋಡಿ ಕೊಲೆ ಪ್ರಕರಣಗಳು ಹೊಸದಲ್ಲ. ಆದರೆ, ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ ಸಾರಕ್ಕಿ ಪಾರ್ಕ್ ಜೋಡಿ ಕೊಲೆ ಸಿನಿಮಾ ಸ್ಟೈಲ್‌ನಲ್ಲಿ ನಡೆದಿತ್ತು. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ಡಾಕ್ಟರ್, ನರ್ಸ್ ಶವಗಳು ರೈಲ್ವೆ ಹಳಿಯಲ್ಲಿ ಪತ್ತೆಯಾಗಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ:  ಸಾರಕ್ಕಿ ಪಾರ್ಕ್ ಜೋಡಿ ಕೊಲೆ ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ: ಸಾರಕ್ಕಿ ಪಾರ್ಕ್ ಜೋಡಿ ಕೊಲೆ ಜೆಪಿ ನಗರವನ್ನು ಬೆಚ್ಚಿ ಬೀಳಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಜೆಪಿ ನಗರದ ಸಾರಕ್ಕಿ ಪಾರ್ಕ್‌ನಲ್ಲಿ ಗುರುವಾರ ಸಂಜೆ ನಡೆದ ನಡೆದ ಜೋಡಿ ಕೊಲೆ ಬೆಚ್ಚಿ ಬೀಳಿಸಿದೆ. ಗುರುವಾರ ಸಂಜೆ 4.30 ರ ವೇಳೆಗೆ ಪಾರ್ಕಿನಲ್ಲಿ 25 ವರ್ಷದ ಅನುಷಾ ಮತ್ತು 46 ವರ್ಷದ ಸುರೇಶ ಅವರ ಹತ್ಯೆ ನಡೆದಿದೆ. ಗೊರಗುಂಟೆಪಾಳ್ಯ ನಿವಾಸಿ ಸುರೇಶ್ ಮತ್ತು ಶಾಕಾಂಬರಿ ನಗರ ನಿವಾಸಿ ಅನುಷಾ ಕೊಲೆಯಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಸುರೇಶ್ ಮತ್ತು ಅನುಷಾ ಇಬ್ಬರಿಗೂ ಐದು ವರ್ಷಗಳ ಪರಿಚಯ ಮತ್ತು ಸಲುಗೆ ಬೆಳೆದಿತ್ತು. ಆದರೆ ಸುರೇಶ್ ತನಗೆ ಮದುವೆಯಾಗಿ ಮಕ್ಕಳಿರುವ ವಿಚಾರವನ್ನು ಅನುಷಾರಿಂದ ಮುಚ್ಚಿಟ್ಟಿದ್ದ. ಈ ಸಂಗತಿ ತಿಳಿದ ನಂತರ ಅನುಷಾ ಸುರೇಶನಿಂದ ಸಂಪರ್ಕ ಕಳೆದುಕೊಳ್ಳಲು ಪ್ರಯತ್ನ ನಡೆಸಿದ್ದರು. ಆದರೆ ಅನುಷಾರಿಂದ ದೂರ ಉಳಿಯಲು ಸುರೇಶ್ ನಿರಾಕರಿಸಿದ್ದ.

ಸುರೇಶನ ನಡವಳಿಕೆಯಿಂದ ಬೇಸತ್ತ ಅನುಷಾ ಜೆಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಿದ್ದರು. ಸುರೇಶ್ ಗೆ ಎಚ್ಚರಿಕೆ ನೀಡಿ ಅನುಷಾರ ತಂಟೆಗೆ ಹೋಗದಂತೆ ಸೂಚಿಸಿದ್ದರು. ಈ ಸಂಬಂಧ ಗುರುವಾರ ಬೆಳಗ್ಗೆ ಪೊಲೀಸ್ ಠಾಣೆಯಲ್ಲಿ ಸುರೇಶ್ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ ಎಂದು ತಿಳಿದು ಬಂದಿದೆ.

ನಂತರ ಸುರೇಶ್ ಕೊನೆಯದಾಗಿ ಒಂದೇ ಒಂದು ಬಾರಿ ಮಾತನಾಡಬೇಕು. ಸಾರಕ್ಕಿ ಪಾರ್ಕ್ ಬರುವಂತೆ ಕೋರಿ ಕೊಂಡಿದ್ದ. ಆತನ ಬೇಡಿಕೆಗೆ ಒಪ್ಪಿಕೊಂಡ ಅನುಷಾ ತನ್ನ ತಾಯಿ ಗೀತಾ ಅವರಿಗೂ ಹೇಳಿ ಪಾರ್ಕ್ ಗೆ ಬಂದಿದ್ದರು. ಗೀತಾ ಅವರೂ ಮಗಳನ್ನು ಹಿಂಬಾಲಿಸಿಕೊಂಡು ಪಾರ್ಕ್ ಗೆ ಬಂದಿದ್ದರು.

ಅನುಷಾ ಜೊತೆ ಮಾತನಾಡುತ್ತಿರುವಾಗಲೇ ಸುರೇಶ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಇದನ್ನು ನೋಡಿದ ಗೀತಾ ನನ್ನ ಮಗಳನ್ನು ಸಾಯಿಸಬೇಡ ಎಂದು ಕಿರುಚಿಕೊಂಡಿದ್ದಾರೆ.

ಆದರೂ ಸುರೇಶ್ ಮೂರ್ನಾಲ್ಕು ಬಾರಿ ಚುಚ್ಚಿದ್ದಾನೆ. ಇದರಿಂದ ರೊಚ್ಚಿಗೆದ್ದ ಗೀತಾ ಅಲ್ಲಿಯೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಎತ್ತಿ ಸುರೇಶ್ ತಲೆ ಮೇಲೆ ಹಾಕಿದ್ದಾರೆ. ಸುರೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಅತ್ತ ಇರಿತಕ್ಕೊಳಗಾಗಿದ್ದ ಅನುಷಾ ಕೂಡಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಗೀತಾ ಅವರನ್ನು ಬಂಧಿಸಿದ್ದಾರೆ.

ರೈಲ್ವೆ ಹಳಿ ಬಳಿ ಸಿಕ್ತು ಡಾಕ್ಟರ್, ನರ್ಸ್ ಶವ

ಬೆಂಗಳೂರು ನಗರದ ದೀಪಾಂಜಲಿನಗರ ಸಮೀಪದ ರೈಲ್ವೆ ಹಳಿಯ ಮೇಲೆ ಯುವಕನೊಬ್ಬನ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದ 22 ವರ್ಷದ ಚನ್ನಬಸು ಅಶೋಕ್‌ ಯಳಮೇಲಿ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದು ಬಂದಿದೆ. ಮೃತ ದೇಹದ ಪ್ಯಾಂಟ್ ನಲ್ಲಿ ಪತ್ತೆಯಾದ ಆಧಾರ್‌ ಹಾಗೂ ಪ್ಯಾನ್‌ ಕಾರ್ಡ್‌ ಆಧರಿಸಿ ಗುರುತು ಪತ್ತೆ ಮಾಡಲಾಗಿದೆ.

ಐದು ತಿಂಗಳ ಹಿಂದೆ ಅಶೋಕ್‌ ನರ್ಸಿಂಗ್‌ ಕೋರ್ಸ್‌ ಮುಗಿಸಿ ಊರಿನಲ್ಲೇ ಉಳಿದಿ ಕೊಂಡಿದ್ದರು. ನರ್ಸಿಂಗ್‌ ಕೆಲಸ ಸಿಕ್ಕ ನಂತರ 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿ ಮಾಗಡಿ ರಸ್ತೆಯಲ್ಲಿರುವ ಚೋಳರ ಪಾಳ್ಯದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರತಿದಿನ ದೀಪಾಂಜಲಿನಗರದಿಂದ ಮೆಟ್ರೊ ಮೂಲಕ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಸಂಜೆ ಸ್ನೇಹಿತರ ಮನೆಗೆ ಹೋಗುವುದಾಗಿ ಚಿಕ್ಕಮ್ಮನಿಗೆ ತಿಳಿಸಿದ್ದರು. ರಾತ್ರಿ ಕರೆ ಮಾಡಿದಾಗ ಅಶೋಕ್‌ ಮೊಬೈಲ್‌ ಸ್ವಿಚ್ ಆಫ್‌ ಆಗಿತ್ತು ಎಂದು ಅವರ ಚಿಕ್ಕಮ್ಮ ಹೇಳಿದ್ದಾರೆ. ಅಶೋಕ್ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳಿಯ ಮೇಲೆ ಬ್ಯಾಗ್‌ವೊಂದು ಪತ್ತೆಯಾಗಿದೆ. ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಕ್ಕಳ ವೈದ್ಯರಾಗಿದ್ದ ಡಾ.ಅನಂತಪ್ರಸಾದ್ ಶವ ಕೂಡ ಯಶವಂತಪುರ ಸಮೀಪ ರೈಲ್ವೆ ಹಳಿಯಲ್ಲಿ ಸಿಕ್ಕಿದೆ. ಡಾ.ಅನಂತಪ್ರಸಾದ್‌ (38) ಉತ್ತರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು).

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner