ಮಂಡ್ಯ ಆಲೆಮನೆಯಲ್ಲಿ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ತಿರುವು; ಸ್ಕ್ಯಾನಿಂಗ್ ಯಂತ್ರ ಮಾರಾಟಗಾರರ ಬಂಧನ
Mandya News: ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಸಮೀಪ ಕಬ್ಬಿನಗದ್ದೆಯ ನಡುವಿನ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ವುದು ಕಳೆದ ವರ್ಷ ಬಹಿರಂಗಗೊಂಡಿತ್ತು. ಪ್ರಕರಣ ಸಂಬಂಧ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಮತ್ತು ಮಂಡ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ.
ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಲಿಂಗ ಪತ್ತೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಆಲೆಮನೆಯಲ್ಲೂ ಲಿಂಗ ಪತ್ತೆ ಮಾಡುತ್ತಿದ್ದ ಹೀನ ಕೃತ್ಯ ಬೆಳಕಿಗೆ ಬಂದ ನಂತರ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಬೆಂಗಳೂರಿನ ಆವಿಷ್ಕಾರ್ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಈ ಪ್ರಕರಣ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆವಿಷ್ಕಾರ್ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಮಾಲೀಕ ಲಕ್ಷ್ಮಣ ಗೌಡ ಮತ್ತು ಸಿದ್ದೇಶ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ | ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ
ಅಲ್ಟ್ರಾ ಸೌಂಡ್ ಹಾಗೂ ಇಮೇಜಿಂಗ್ ಸ್ಕ್ಯಾನಿಂಗ್ ಯಂತ್ರಗಳ ಮಾರಾಟ, ಮರು ಖರೀದಿ ಹಾಗೂ ದುರಸ್ತಿ ಸಂಬಂಧ ಆವಿಷ್ಕಾರ್ ಬ್ರದರ್ಸ್ ಬಯೊ ಮೆಡಿಕಲ್ ಕಂಪನಿ ಪರವಾನಗಿ ಪಡೆದಿತ್ತು. ಕಾನೂನು ಪ್ರಕಾರ ಪ್ರತಿಯೊಂದು ಸ್ಕ್ಯಾನಿಂಗ್ ಯಂತ್ರದ ಮಾರಾಟ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಆದರೆ, ಕಂಪನಿ ಮಾಲೀಕ ಹಾಗೂ ಮತ್ತಿತರರು ಮೂರು ಸ್ಕ್ಯಾನಿಂಗ್ ಯಂತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಮತ್ತು ಈ ವ್ಯವಹಾರವನ್ನು ಮುಚ್ಚಿಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ.
ಕಳೆದ ವರ್ಷ ಅಕ್ಟೋಬರ್ 15ರಂದು ಒಂದು ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಲಾಗಿತ್ತು. ಚನ್ನರಾಯಪಟ್ಟಣದಲ್ಲೂ ಭ್ರೂಣ ಹತ್ಯೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮತ್ತೊಂದು ಯಂತ್ರವನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿ ಸಿದ್ದೇಶನನ್ನು ಬಂಧಿಸಲಾಗಿದ್ದು, ಈತನ ಬಳಿಯೂ ಯಂತ್ರವೊಂದು ಸಿಕ್ಕಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಲಿಂಗ ಪತ್ತೆಗೆ ಯಂತ್ರ ಬಳಕೆ
ಆರೋಪಿ ಲಕ್ಷ್ಮಣ ಗೌಡ ಬಳಿ ಯಂತ್ರ ಖರೀದಿಸಿದ್ದ ಕೆಲವು ವೈದ್ಯರು ಹಾಗೂ ಇತರರು, ಅಕ್ರಮವಾಗಿ ಲಿಂಗ ಪತ್ತೆ ಮಾಡುತ್ತಿದ್ದರು. ಆಲೆಮನೆ ಮತ್ತು ಕೆಲವು ವಾಸದ ಮನೆಗಳಲ್ಲಿ ಯಂತ್ರಗಳು ಪತ್ತೆಯಾಗಿದ್ದವು. ತಮ್ಮದೇ ಜಾಲದ ಸದಸ್ಯರಿಂದ ಗರ್ಭಿಣಿಯರನ್ನು ಕರೆಸಿ ಸ್ಕ್ಯಾನಿಂಗ್ ಮಾಡಲಾಗುತ್ತಿತ್ತು. ಹೆಣ್ಣು ಭ್ರೂಣವೆಂಬುದು ಗೊತ್ತಾಗುತ್ತಿದ್ದಂತೆ ಹತ್ಯೆ ಮಾಡಲಾಗುತ್ತಿತ್ತು. ಇದೇ ಜಾಲ 900ಕ್ಕೂ ಹೆಚ್ಚು ಭ್ರೂಣಗಳನ್ನು ಹತ್ಯೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣ
ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ಸಮೀಪ ಕಬ್ಬಿನಗದ್ದೆಯ ನಡುವಿನ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವುದು ಕಳೆದ ಅಕ್ಟೋಬರ್ ನವಂಬರ್‌ನಲ್ಲಿ ಬಹಿರಂಗಗೊಂಡಿತ್ತು.
ಹಾಡ್ಯ ಹಾಗೂ ಹುಳ್ಳೇನಹಳ್ಳಿ ನಡುವೆ ಇರುವ ಆಲೆಮನೆಯಲ್ಲಿ ಶನಿವಾರ ಮತ್ತು ಭಾನುವಾರ ಭ್ರೂಣಲಿಂಗ ಪತ್ತೆ ಪರೀಕ್ಷೆ ನಡೆಯುತ್ತಿತ್ತು. ಹೆಣ್ಣುಭ್ರೂಣ ಪತ್ತೆಯಾದರೆ ವಾರದ ದಿನಗಳಲ್ಲಿ ಮೈಸೂರು ಅಥವಾ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಭ್ರೂಣಹತ್ಯೆ ಮಾಡಲಾಗುತ್ತಿತ್ತು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು.
ಇದನ್ನೂ ಓದಿ | Lok Sabha Elections2024: ಬದಲಾದ ಮೈತ್ರಿ, ಕಾಂಗ್ರೆಸ್‌ಗೆ ಮರಳಿದ ಮುದ್ದಹನುಮೇಗೌಡ; ತುಮಕೂರು ಟಿಕೆಟ್ ಸಾಧ್ಯತೆ
ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಮತ್ತು ಮಂಡ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿದ್ದವು. ಇದೇ ಕಾರಣಕ್ಕಾಗಿ ಆರೋಪಿಗಳು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪರೀಕ್ಷೆ ಕೇಂದ್ರ ಸ್ಥಾಪಿಸಿದ್ದರು ಎನ್ನುವ ಅಂಶ ತಿಳಿದು ಬಂದಿತ್ತು.
(This copy first appeared in Hindustan Times Kannada website. To read more like this please logon to kannada.hindustantimes.com)
ವರದಿ: ಎಚ್. ಮಾರುತಿ, ಬೆಂಗಳೂ