Bengaluru: ಕಾಲೇಜಿನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ; ಸ್ನೇಹಿತರಿಗೆ ಚಾಲೆಂಜ್ ಹಾಕಿ ಮಹಿಳೆಯ ಅಂಗಾಂಗ ಸ್ಪರ್ಶಿಸಿದ್ದವ ಅಂದರ್
Bengaluru Crime News: ಕಾಲೇಜಿನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ, ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಸಾವು, ಮಹಿಳೆಯ ಅಂಗಾಂಗ ಸ್ಪರ್ಶಿಸಿದ್ದ ಯುವಕನ ಬಂಧನ ಸೇರಿದಂತೆ ಬೆಂಗಳೂರು ಕ್ರೈಂ ಸುದ್ದಿಗಳು ಇಲ್ಲಿವೆ.. (ವರದಿ: ಎಚ್. ಮಾರುತಿ)
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಾಲೇಜೊಂದರ ಕಟ್ಟಡದ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾರೆ. 19 ವರ್ಷದ ವಿಘ್ನೇಶ್ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ತಮಿಳುನಾಡು ಮೂಲದ ವಿಘ್ನೇಶ್, ಪೋಷಕರ ಜೊತೆ ಬೇಗೂರಿನಲ್ಲಿ ವಾಸವಿದ್ದರು. ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದ್ದಾರೆ.
ಮಂಗಳವಾರ ಕಾಲೇಜಿಗೆ ಬಂದಿದ್ದ ವಿಘ್ನೇಶ್, ತರಗತಿಗಳಿಗೆ ಹಾಜರಾಗಿದ್ದರು. ಮಧ್ಯಾಹ್ನ ಕಾಲೇಜಿನಲ್ಲಿ ಸ್ನೇಹಿತರ ಜೊತೆ ಮಾತನಾಡಿದ್ದರು. ಸಂಜೆ ಎಲ್ಲ ವಿದ್ಯಾರ್ಥಿಗಳು ಮನೆಗೆ ತೆರಳಿದ್ದರೂ ವಿಘ್ನೇಶ್ ಕಾಲೇಜಿನಲ್ಲೇ ಉಳಿದುಕೊಂಡಿದ್ದರು.
ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಾಲೇಜು ಕಟ್ಟಡದ 6ನೇ ಮಹಡಿಗೆ ಹೋಗಿದ್ದ ವಿಘ್ನೇಶ್, ಅಲ್ಲಿಂದ ಕೆಳಗೆ ಜಿಗಿದಿದ್ದರು. ತೀವ್ರವಾಗಿ ಗಾಯಗೊಂಡ ವಿಘ್ನೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ, ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ವಿಘ್ನೇಶ್ ಸಾವಿನ ಬಗ್ಗೆ ಪೋಷಕರು ಹೇಳಿಕೆ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಸಾವು
ಬೆಂಗಳೂರಿನ ನೈಸ್ ರಸ್ತೆಯ ದೊಡ್ಡಬೆಲೆ ಟೋಲ್ ಗೇಟ್ ಹತ್ತಿರದಲ್ಲಿ ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಜಯರಾಮ್ ಮೃತಪಟ್ಟಿದ್ದಾರೆ. ಕುಂದಾಪುರ ಮೂಲದ 43 ವರ್ಷದ ಜಯರಾಮ್ ಮೃತ ದುರ್ದೈವಿ. ಬನ್ನೇರುಘಟ್ಟದ ನಿವಾಸಿಯಾಗಿದ್ ಇವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೈಸೂರು ಮುಖ್ಯರಸ್ತೆ ಕಡೆಯಿಂದ ಹೊಸೂರು ರಸ್ತೆ ಕಡೆಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.
ಚಾಲಕ ನಿರ್ಲಕ್ಷ್ಯದಿಂದ ಅತೀ ವೇಗದಲ್ಲಿ ಕಂಟೇನರ್ ಲಾರಿಯನ್ನು ಚಲಾಯಿಸುತ್ತಿದ್ದ. ಇದರಿಂದಾಗಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿತ್ತು. ಬೈಕ್ ಸಮೇತ ಉರುಳಿಬಿದ್ದ ಜಯರಾಮ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಪ್ರಜ್ಞೆ ತಪ್ಪಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ತಪಾಸಣೆ ನಡೆಸಿದ ವೈದ್ಯರು, ಜಯರಾಮ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕಂಟೇನರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯ ಅಂಗಾಂಗ ಸ್ಪರ್ಶಿಸಿದ್ದ ಯುವಕ ಅಂದರ್;
ಬೆಂಗಳೂರಿಂದ ಹೋಟೆಲ್ ವೊಂದರಲ್ಲಿ ಮಹಿಳೆಯ ಅಂಗಾಂಗಗಳನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿಯಲ್ಲಿ ಚಂದನ್ ಎಂಬಾತನನ್ನು ವಿಜಯನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಂಪಿನಗರ ನಿವಾಸಿಯಾದ ಚಂದನ್, ಅಡುಗೆ ಅನಿಲ ಸಿಲಿಂಡರ್ ಪೂರೈಸುವ ಡೆಲಿವರಿ ಬಾಯ್. ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆ ಹೋಟೆಲ್‌ಗೆ ಹೋಗಿದ್ದ. ಆಗ ಸ್ನೇಹಿತರ ಜೊತೆ ಸವಾಲು ಹಾಕಿ ಮಹಿಳೆಯ ಅಂಗಾಂಗ ಮುಟ್ಟಿದ್ದ. ನಂತರ ಹೋಟೆಲ್ ಸಿಬ್ಬಂದಿಯೇ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯೊಬ್ಬರು 2023ರ ಡಿ. 30ರಂದು ಸಂಜೆ ತಿಂಡಿ ತಿನ್ನಲೆಂದು ಹೋಟೆಲ್‌ಗೆ ಹೋಗಿದ್ದರು. ಅದೇ ಹೋಟೆಲ್‌ಗೆ ಚಂದನ್ ಹಾಗೂ ಸ್ನೇಹಿತರು ತೆರಳಿದ್ದರು. ಹೋಟೆಲ್‌ನ ನಗದು ಸ್ವೀಕರಿಸುವ ಸ್ಥಳದ ಬಳಿ ದೂರುದಾರ ಮಹಿಳೆ ನಿಂತಿದ್ದರು. ಅದೇ ಸ್ಥಳಕ್ಕೆ ಹೋಗಿದ್ದ ಆರೋಪಿ, ಹಿಂಬದಿಯಿಂದ ಅಂಗಾಂಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಕೃತ್ಯದಿಂದ ಗಾಬರಿಗೊಂಡ ಮಹಿಳೆ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಗ್ರಾಹಕರು ಸೇರುತ್ತಿದ್ದಂತೆ ಆರೋಪಿ ಹಾಗೂ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾಮೆರಾದಲ್ಲಿ ಸೆರೆ: ಆರೋಪಿಯ ಕೃತ್ಯ ಹೋಟೆಲ್ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದೌರ್ಜನ್ಯ ಕುರಿತು ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡ ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯನ್ನು ಮುಟ್ಟಿ ಬರುವಂತೆ ಸ್ನೇಹಿತರು ಸವಾಲು ಹಾಕಿದ್ದರು. ಇದೇ ಕಾರಣಕ್ಕೆ ಮಹಿಳೆಯ ಅಂಗಾಂಗಗಳನ್ನು ಮುಟ್ಟಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕೆಲಸದಾಕೆಯಿಂದ 30 ಲಕ್ಷ ರೂ. ಮೌಲ್ಯದ ಒಡವೆ ಕಳ್ಳತನ
ಮಾಲೀಕನ ಮನೆಯಲ್ಲೇ ಮನೆ ಕೆಲಸದಾಕೆ 30 ಲಕ್ಷ ರೂ. ಮೌಲ್ಯದ ಅರ್ಧ ಕೆಜಿ ಚಿನ್ನದ ಒಡವೆಗಳನ್ನು ಕದ್ದಿದ್ದಾಳೆ. ಮನೆ ಮಾಲೀಕರು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎಂದು ನಂಬಿಸಲು ಪ್ರಯತ್ನಿಸಿದ ಅದೇ ಮನೆಯ ಕೆಲಸದಾಕೆ ಪೊಲೀಸರ ಅತಿಥಿಯಾಗಿದ್ದಾಳೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯು ಮನೆಯೊಂದರ ಮಾಲೀಕರು ವಿದೇಶಕ್ಕೆ ತೆರಳಿರುತ್ತಾರೆ. ಮನೆಯಲ್ಲಿ ಮನೆ ಮಾಲೀಕರ ಇಬ್ಬರು ಮಕ್ಕಳು ಹಾಗೂ ಈ ಮನೆಯ ಕೆಲಸದಾಕೆ ಮಾತ್ರ ವಾಸವಿರುತ್ತಾರೆ.
ಜ. 25 ರಂದು ಮಧ್ಯರಾತ್ರಿ ಕೆಲಸದಾಕೆ ನಾಟಕವಾಡಿ ಯಾರೋ ಅಪರಿಚಿತರು ಮನೆಯ ಕೊಠಡಿಯಿಂದ ಚಿನ್ನದ ವಡವೆಗಳನ್ನು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಆಗ ಎಚ್ಚರಗೊಂಡ ತಾನು ಅಪರಿಚಿತರನ್ನು ಹಿಡಿಯಲು ಪ್ರಯತ್ನಿಸಿದಾಗ ಅಪರಿಚಿತರು ಅದೇ ಬ್ಯಾಗ್‌ನಿಂದ ಹೊಡೆದು ಪರಾರಿಯಾಗಿರುತ್ತಾರೆಂದು ಮನೆಯಲ್ಲಿದ್ದ ಮಾಲೀಕರ ಮಕ್ಕಳನ್ನು ನಂಬಿಸಿರುತ್ತಾಳೆ. ಮರುದಿನ ಮನೆಯ ಮಾಲೀಕರ ಪುತ್ರ ತಿಳಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣದ ದೂರು ನೀಡಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಕೆಲಸದಾಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಸಂಗತಿ ಹೊರಬೀಳುತ್ತದೆ. ಕಳ್ಳತನದ ನಾಟಕವಾಡುವ ಒಂದು ವಾರಕ್ಕೂ ಮುನ್ನ ಕೊಠಡಿಯ ಕಬೋರ್ಡ್‌ನ ಬೀಗವನ್ನು ಒಡೆದು ಕರ್ಬೋಡ್ ಮತ್ತು ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ತಾನೇ ಕಳ್ಳತನ ಮಾಡಿರುವುದಾಗಿ ಕೆಲಸದಾಕೆ ಒಪ್ಪಿಕೊಂಡಿರುತ್ತಾಳೆ. ಮುನ್ನೆಚ್ಚರಿಕೆಯಾಗಿ ಮುನ್ನಾದಿನ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕೇಬಲ್‌ಗಳನ್ನು ಕತ್ತರಿಸಿರುವುದನ್ನು ಒಪ್ಪಿಕೊಂಡಿರುತ್ತಾಳೆ.
ಈಕೆಯ ಬಳಿಯಿದ್ದ ಸುಮಾರು 30 ಲಕ್ಷ ರೂಪಾಯಿ ಬೆಲೆಬಾಳುವ 523 ಗ್ರಾಂ ಚಿನ್ನದ ವಡವೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ಟಿಕ್ಕಣ್ಣನವರ್, ಹಾಗೂ ಶೇಷಾದ್ರಿಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್.ಆರ್ ಮಾರ್ಗದರ್ಶನದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ
ವರದಿ: ಎಚ್. ಮಾರುತಿ