ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು; 67 ಲಕ್ಷ ನಗದು, ಒಂದೂವರೆ ಕೆಜಿ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು; 67 ಲಕ್ಷ ನಗದು, ಒಂದೂವರೆ ಕೆಜಿ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ

ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು; 67 ಲಕ್ಷ ನಗದು, ಒಂದೂವರೆ ಕೆಜಿ ಚಿನ್ನ ಕದ್ದಿದ್ದ ಕೆಲಸದಾಕೆ ಬಂಧನ

ಬೆಂಗಳೂರು ಅಪರಾಧ ಸುದ್ದಿಗಳು: ಕೆಲಸ ಕೊಟ್ಟ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಖತರ್‌ನಾಕ್‌ ಕಳ್ಳಿಯನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೈದಿಗಳಿಗೆ ಮೊಬೈಲ್‌ ಪೂರೈಕೆ ಮಾಡುತ್ತಿದ್ದ ಮನಃಶಾಸ್ತ್ರಜ್ಞೆ ಬಂಧನವಾಗಿದೆ. (ವರದಿ: ಎಚ್.ಮಾರುತಿ)

ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು
ಕೆಲಸಕ್ಕೆ ಸೇರಿದ ಮೂರು ತಿಂಗಳಲ್ಲೇ ಮನೆ ಮಾಲೀಕರ ಮನೆಯಲ್ಲಿ ಕಳವು

ಬೆಂಗಳೂರು: ಕೆಲಸ ಕೊಟ್ಟ ಮನೆ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಖತರ್‌ನಾಕ್‌ ಕಳ್ಳಿಯನ್ನು ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರದ ಗಾಳಿಪುರದ ನಿವಾಸಿ ಉಮಾ (43) ಬಂಧಿತ ಆರೋಪಿ. ಈಕೆ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ರೂ.67 ಲಕ್ಷ ನಗದು ಹಾಗೂ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದಳು.

ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿ ಈಕೆಯಿಂದ 57.50 ಲಕ್ಷ ನಗದು, ರೂ.12.65 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಮರಾಜಪೇಟೆಯ ನಿವಾಸಿ, ಉದ್ಯಮಿ ರಾಧಾ ಅವರು ತಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ದೂರು ನೀಡಿದ್ದರು. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಿ ರಾಧಾ ಅವರು ನಗರ್ತಪೇಟೆಯಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿ ಸುಜಾತಾ ಅವರ ಆರೈಕೆಗೆಂದು ಮೂರು ತಿಂಗಳ ಹಿಂದೆ ಆರೋಪಿ ಉಮಾ ಅವರನ್ನು ನೇಮಕ ಮಾಡಿಕೊಂಡಿದ್ದರು. ತಿಂಗಳಿಗೆ ರೂ.23 ಸಾವಿರ ಸಂಬಳ ನಿಗದಿಪಡಿಸಿದ್ದರು.

ರಾಧಾ ಅವರು ಎರಡು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿರುವ ತಮ್ಮ ನಿವೇಶನವನ್ನು ಮಾರಾಟ ಮಾಡಿದ್ದರು. ಆ ಹಣವನ್ನು ಬೀರುವಿನಲ್ಲಿ ಇಟ್ಟಿದ್ದರು. ಇದೇ ಬೀರುವಿನಲ್ಲಿ 1 ಕೆ.ಜಿ 415 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ಕೆ.ಜಿ 445 ಗ್ರಾಂ ತೂಕದ ಬೆಳ್ಳಿಯ ತಟ್ಟೆ, ಚೊಂಬು ಹಾಗೂ ಕಪ್‌ ಗಳನ್ನು ಇಟ್ಟಿದ್ದರು. ಇವೆಲ್ಲವನ್ನೂ ಉಮಾ ಕಳವು ಮಾಡಿದ್ದರು.

ರಾಧಾ ಅವರು ನಿವೇಶನ ಮಾರಾಟದಿಂದ ಬಂದ ಹಣದಿಂದ ಅಪಾರ್ಟ್‌ ಮೆಂಟ್‌ ಖರೀದಿಸಲು ನಿರ್ಧರಿಸಿದ್ದರು. ಜೂನ್ 9ರಂದು ಹಣ ತೆಗೆದುಕೊಳ್ಳಲು ಬೀರು ತೆರೆದಾಗ ಹಣ ಮತ್ತು ಚಿನ್ನಾಭರಣ ಕಳವಾಗಿದ್ದು ಬೆಳಕಿಗೆ ಬಂದಿತ್ತು. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ರಾಧಾ ಅವರ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದರು. ಮನೆ ಕೆಲಸದಾಕೆ ಉಮಾ ಜೂನ್ 4ರ ಬೆಳಿಗ್ಗೆ ಬ್ಯಾಗ್‌ ವೊಂದನ್ನು ಹಿಡಿದುಕೊಂಡು ಮನೆಯಿಂದ ಹೊರ ಹೋಗುತ್ತಿರುವ ದೃಶ್ಯ ಕಂಡು ಬಂದಿತ್ತು. ಅನುಮಾನಗೊಂಡು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೈದಿಗಳಿಗೆ ಮೊಬೈಲ್‌ ಪೂರೈಕೆ ಮಾಡುತ್ತಿದ್ದ ಮನಃಶಾಸ್ತ್ರಜ್ಞೆ ಬಂಧನ:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಮೊಬೈಲ್‌ ಸರಬರಾಜು ಮಾಡುತ್ತಿದ್ದ ಆರೋಪದಡಿಯಲ್ಲಿ ಮನಃಶಾಸ್ತ್ರಜ್ಞೆ ಸೇರಿ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾರಾಗೃಹದಲ್ಲಿದ್ದ ಕೈದಿಗಳ ಮನಃಪರಿವರ್ತನೆಗಾಗಿ ಮನಃಶಾಸ್ತ್ರಜ್ಞೆ ನವ್ಯಶ್ರೀ ಭೇಟಿ ನೀಡುತ್ತಿದ್ದರು. ಎರಡು ದಿನಗಳ ಹಿಂದೆ ಜೈಲಿನ ಬ್ಯಾರಕ್‌ ವೊಂದರ ಒಳಕ್ಕೆ ಹೋಗುತ್ತಿದ್ದಾಗ ಅವರ ಬ್ಯಾಗ್‌ ಪರಿಶೀಲನೆ ನಡೆಸಲಾಯಿತು. ಆಗ ಅವರ ಬ್ಯಾಗ್‌ ನಲ್ಲಿ ಮೊಬೈಲ್‌ ಪತ್ತೆಯಾಯಿತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್‌ ಪೂರೈಕೆ ಮಾಡುತ್ತಿರುವುದಾಗಿ ಒಪ್ಪಿಕೊಂಡರು ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ನವ್ಯಶ್ರೀ ಅವರು ತನಗೆ ಮತ್ತೊಬ್ಬ ವ್ಯಕ್ತಿ ಮೊಬೈಲ್‌ ತಂದು ಕೊಡುತ್ತಿದ್ದ. ಆ ಮೊಬೈಲ್‌ ಅನ್ನು ಕೈದಿಗಳಿಗೆ ನೀಡುತ್ತಿದ್ದೆ ಎಂದು ತಿಳಿಸಿದ್ದಾರೆ. ಆಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಜೈಲಿನ ಅಧೀಕ್ಷಕರು ಈ ಸಂಬಂಧ ದೂರು ನೀಡಿದ್ದರು.

(ವರದಿ: ಎಚ್.ಮಾರುತಿ)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in