Bengaluru Crime News: ಹಳೇ ದ್ವೇಷಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ; ಎರಡು ಪ್ರತ್ಯೇಕ ಅಪಘಾತ, ಇಬ್ಬರು ಸಾವು
ಕೊಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಆರೋಪಿಗಳ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಎರಡು ಗುಂಪುಗಳ ನಡುವಿನ ಹಳೆಯ ದ್ವೇಷಕ್ಕೆ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಜೀವನಹಳ್ಳಿ ರೈಲ್ವೆ ಟ್ರ್ಯಾಕ್ ಹತ್ತಿರ ನಡೆದಿದೆ. ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯನ್ನು ಮಹಾಲಕ್ಷ್ಮಿ ಲೇಔಟ್‌ನ ಕುರುಬರಹಳ್ಳಿ ನಿವಾಸಿ 34 ವರ್ಷದ ಅಪ್ಪು ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜೀವನಹಳ್ಳಿ ರೈಲ್ವೆ ಹಳಿ ಹತ್ತಿರ ಆರೋಪಿಗಳು ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಅಪ್ಪುವಿನ ಮೇಲೆಯೂ ಹಲ್ಲೆ ನಡೆಸಿದ ಆರೋಪವಿದೆ. ಈ ಹಿಂದೆ ಕೆಲವು ಯುವಕರ ಮೇಲೆ ಹಲ್ಲೆ ನಡೆಸಿದ್ದ. ಇದೇ ದ್ವೇಷಕ್ಕೆ ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ಜೀವನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಅಪ್ಪು ಮೇಲೆ ಹಲ್ಲೆ ನಡೆಸಿದ್ದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ ಎಂದು ಪೊಲೀಸರು ಹೇಳಿದರು.
ಎಂಟು ಮಂದಿ ಸೇರಿಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪ್ಪು ಅವರನ್ನು ಶನಿವಾರ ರಾತ್ರಿ ಸಂಧಾನದ ನೆಪದಲ್ಲಿ ಕರೆಸಿಕೊಂಡು ಕೊಲೆ ಮಾಡಲಾಗಿದೆ. ಕೊಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದೆ. ಆರೋಪಿಗಳ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ಪು ವಿರುದ್ಧ ಈ ಹಿಂದೆ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿತ್ತು.
ಎರಡು ಪ್ರತ್ಯೇಕ ಅಪಘಾತ, ಇಬ್ಬರು ಸಾವು
ಬೆಂಗಳೂರಿನಲ್ಲಿ ಭಾನುವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಬ್ಬಾಳದ ಭದ್ರಪ್ಪ ಲೇಔಟ್ ಸಮೀಪದ ರಿಂಗ್ ರಸ್ತೆಯಲ್ಲಿ ನಿಂತಿದ್ದ ಸಿಮೆಂಟ್ ಮಿಕ್ಸಿಂಗ್ ಲಾರಿಗೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಅಸುನೀಗಿದ್ದಾರೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಲಹಳ್ಳಿಯ ಮುತ್ಯಾಲನಗರ ನಿವಾಸಿ 26 ವರ್ಷದ ಜನಾರ್ದನ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಭಾನುವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಬಿಎಂಟಿಸಿಯಲ್ಲಿ ಗುತ್ತಿಗೆ ನೌಕರರಾಗಿರುವ
ಜನಾರ್ದನ್ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಘಟಕದಲ್ಲಿ ಕೆಲಸ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮುತ್ಯಾಲನಗರದ ತಮ್ಮ ಮನೆಗೆ ಮರಳುತ್ತಿದ್ದರು. ರಿಂಗ್ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸಿಮೆಂಟ್ ಮಿಕ್ಸರ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಜನಾರ್ದನ್ ಅವರನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಸಿಮೆಂಟ್ ಮಿಕ್ಸರ್ ವಾಹನವು ಸಿಗ್ನಲ್ ಲೈಟ್ ಹಾಕಿರಲಿಲ್ಲ. ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಭಜಕಕ್ಕೆ ಡಿಕ್ಕಿ ಹೊಡೆದ ಬೈಕ್: ಸವಾರ ಸಾವು
ವೇಗವಾಗಿ ಬೈಕ್ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕುರುಬರಹಳ್ಳಿ ನಿವಾಸಿ 28 ವರ್ಷದ ಕುಮಾರಸ್ವಾಮಿ ಮೃತ ಸವಾರ. ಹಿಂಬದಿ ಸವಾರ ಬೊಮ್ಮನಹಳ್ಳಿ ನಿವಾಸಿ ನವೀನ್ ಕುಮಾರ್ ಗಾಯಗೊಂಡಿದ್ದಾರೆ.
ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಕಾಲೇಜು ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದರು. ಇವರ ಸ್ನೇಹಿತ ನವೀನ್ ಕುಮಾರ್ ಬೊಮ್ಮನಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನವೀನ್ ಬೈಕ್‌ನಲ್ಲಿ ಬೊಮ್ಮನಹಳ್ಳಿಯಿಂದ ಶಿವಮೊಗ್ಗಕ್ಕೆ ಹೊರಟಿದ್ದರು. ಆಗ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಕುಮಾರಸ್ವಾಮಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿ ಅಸು ನೀಗಿದ್ದಾರೆ. ನವೀನ್ ಕುಮಾರ್ ತಲೆಗೂ ಗಂಭೀರವಾದ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.