Video: ಬೆಂಗಳೂರಿನಲ್ಲಿ ಒಂಟಿ ಮಹಿಳೆ ಇದ್ದ ಕಾರಿನ ಗಾಜು ಒಡೆದು ಒಳನುಗ್ಗಲು ಯತ್ನ; ಪೊಲೀಸರಿಂದ ಕಾನೂನು ಕ್ರಮ
ಬೆಂಗಳೂರಿನಲ್ಲಿ ಮಹಿಳೆ ಒಬ್ಬರೇ ಇದ್ದ ಕಾರಿಗೆ ದುಷ್ಕರ್ಮಿಯೊಬ್ಬ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೆಣ್ಣುಮಕ್ಕಳು ಒಬ್ಬರೇ ಓಡಾಡುವಾಗ ಮತ್ತಷ್ಟು ಜಾಗರೂಕರಾಗಿರಲು ವಿಡಿಯೋ ಎಚ್ಚರಿಸಿದೆ.
ಬೆಂಗಳೂರಿನಂಥ ಮಹಾನಗರದಲ್ಲಿ ಎಷ್ಟು ಎಚ್ಚರವಾಗಿದ್ದರೂ ಸಾಲುವುದಿಲ್ಲ. ನಗರದಲ್ಲಿ ಒಬ್ಬರೇ ಓಡಾಡುವಾಗ ಎಚ್ಚರವಿದ್ದಷ್ಟೂ ಒಳ್ಳೆಯದು. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂಥಾ ಘಟನೆ ನಡೆದಿದೆ. ಮಹಿಳೆಯೊಬ್ಬರು ಏಕಾಂಗಿಯಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ವ್ಯಕ್ತಿಯೊಬ್ಬ ದಾಳಿ ನಡೆಸಲು ಬಂದಿರುವ ಘಟನೆ ನಡೆದಿದ್ದು, ಏಕಾಂಗಿಯಾಗಿ ಪ್ರಯಾಣಿಸುವರು ಮತ್ತಷ್ಟು ಎಚ್ಚರವಾಗಿರುವಂತೆ ಮಾಡಿದೆ. ವ್ಯಕ್ತಿಯೊಬ್ಬ ಮಹಿಳೆಯ ಕಾರಿನ ಗಾಜು ಒಡೆಯಲು ಪ್ರಯತ್ನಿಸಿ ನುಗ್ಗಲು ಯತ್ನಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಬೆಂಗಳೂರು ಪೊಲೀಸರು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಮೂಲದವರೇ ಆದ ಮಹಿಳೆಯೊಬ್ಬರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಬದಿಯಲ್ಲಿ ಕಾರು ನಿಲ್ಲಿಸಿದ್ದಾಗ, ವ್ಯಕ್ತಿಯೊಬ್ಬ ಕಾರಿಗೆ ನುಗ್ಗಲು ಯತ್ನಿಸಿದ ಭೀಕರ ಅನುಭವವಾಗಿದೆ. ಆದರೆ, ಮಹಿಳೆಯು ಹೆಚ್ಚು ಭಯಪಡದೆ ಘಟನೆಯನ್ನು ಶೂಟ್ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ವ್ಯಕ್ತಿಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಟ್ವಿಟರ್ (ಎಕ್ಸ್) ಬಳಕೆದಾರ ಕರ್ನಾಟಕ ಪೋರ್ಟ್‌ಫೋಲಿಯೊ ಎಂಬ ಅಕೌಂಟ್‌ನಲ್ಲಿ ಈ ವಿಡಿಯೋ ಕ್ಲಿಪ್ ಶೇರ್ ಮಾಡಲಾಗಿದೆ. ಘಟನೆಯು ನಗರದ ಮಾರತ್ತಹಳ್ಳಿ ಬ್ರಿಡ್ಜ್ ಸರ್ವಿಸ್ ರಸ್ತೆಯ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬ್ರಿಡ್ಜ್ ಸರ್ವಿಸ್ ರಸ್ತೆಯ ಬಳಿ ಯುವತಿಯು ಬೇರೊಬ್ಬರ ಬರುವಿಕೆಗಾಗಿ ಕಾಯುತ್ತಿದ್ದರು. ಆಗ ವ್ಯಕ್ತಿಯೊಬ್ಬ ಆಕೆಯ ಕಾರಿನ ಬಳಿಗೆ ಬಂದು ಒಳಗೆ ಬರುವ ಪ್ರಯತ್ನ ಮಾಡಿದ್ದಾನೆ. ಆದರೆ ಮಹಿಳೆ ಕಾರಿನ ಎಲ್ಲಾ ಡೋರ್ ಲಾಕ್ ಮಾಡಿದ್ದಾರೆ. ಒಬ್ಬರೇ ಇರುವುದನ್ನು ಗಮನಿಸಿದ ಆತ ಕಾರಿನ ನಾಲ್ಕೂ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಅವು ಲಾಕ್ ಆಗಿದ್ದ ಕಾರಣ ಒಳಗೆ ನುಗ್ಗಲು ಸಾಧ್ಯವಾಗಲಿಲ್ಲ.
ಅಪಾಯಕ್ಕೂ ಮುನ್ನ ಸ್ಥಳದಿಂದ ಹೊರಟ ಯುವತಿ
ಆ ಸಂದರ್ಭ ಭಯಪಡದ ಯುವತಿ, ಯುವಕನ ವರ್ತನೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಈ ವೇಳೆ ಡ್ರೈವರ್ ಸೀಟ್ ಪಕ್ಕದ ಡೋರ್ ಬಳಿ ಬಂದ ವ್ಯಕ್ತಿ ಗಾಜು ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಹೆಚ್ಚು ಹೊತ್ತು ಅಲ್ಲಿರುವುದು ಸುರಕ್ಷಿತವಲ್ಲ ಎಂದುಕೊಂಡ ಯುವತಿ, ಸ್ಥಳವನ್ನು ಖಾಲಿ ಮಾಡಿದ್ದಾಳೆ. ಆದರೆ, ಅಪಾಯದ ಪರಿಸ್ಥಿತಿಯಿಂದ ಪಾರಾಗಿದ್ದಾರೆ.
ಘಟನೆಯ ವಿಡಿಯೋ ವೈರಲ್ ಆಗಿದೆ. ವಿಶೇಷವಾಗಿ ಮಹಿಳೆಯರು ಒಬ್ಬರೇ ಪ್ರಯಾಣಿಸುವಾಗ ಎಷ್ಟೇ ಎಚ್ಚರವಿದ್ದರೂ ಸಾಲುವುದಿಲ್ಲ. ಹೀಗಾಗಿ ಮತ್ತಷ್ಟು ಜಾಗರೂಕರಾಗುವ ಅಗತ್ಯವಿದೆ.
ಕಾರಿನ ಬಾಗಿಲುಗಳನ್ನು ಲಾಕ್ ಮಾಡಿರಿ
“ಅಪಾಯದಿಂದ ಪಾರಾದ ಮಹಿಳೆ ಇತರ ಮಹಿಳೆಯರಿಗೆ ಜಾಗರೂಕರಾಗುವ ಸಲುವಾಗಿ ಮತ್ತು ಇದೇ ರೀತಿಯ ಸಂದರ್ಭಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅನುಭವವನ್ನು ಜನರೊಂದಿಗೆ ಹಂಚಿಕೊಳ್ಳಲು ಬಯಸಿದ್ದರು. ಯಾವಾಗಲೂ ನಿಮ್ಮ ಕಾರಿನ ಬಾಗಿಲುಗಳನ್ನು ಲಾಕ್ ಮಾಡಿಕೊಳ್ಳಿ,” ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, “ಅಗತ್ಯ ಕ್ರಮ ಕೈಗೊಳ್ಳಲು ನಾವು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಸಂಬಂಧ ಕಾನೂನು ಕ್ರಮ ಕೈಗೊಂಡಿದ್ದೇವೆ,” ಎಂದು ಅವರು ಹೇಳಿದರು.