ಬೆಂಗಳೂರಿನಲ್ಲಿ ಮದ್ಯ ಖರೀದಿಗೆ ದುಡ್ಡು ಕೊಡಲಿಲ್ಲ ಎಂದು ಪತ್ನಿ ಕೊಲೆ; ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ
ಎಣ್ಣೆಗೆ ದುಡ್ಡು ಕೊಟ್ಟಿಲ್ಲ ಅಂತ ವ್ಯಕ್ತಿಯೊರ್ವ ಪತ್ನಿಯನ್ನು ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಮತ್ತೊಬ್ಬ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಎರಡೂ ಪ್ರಕರಣಗಳು ಬೆಂಗಳೂರಿನಲ್ಲಿ ನಡೆದಿವೆ.

ಬೆಂಗಳೂರು: ಮದ್ಯ ಖರೀದಿಗೆ ಹಣ ಕೊಡಲಿಲ್ಲ ಎಂದು ಪತ್ನಿಯನ್ನು ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 32 ವರ್ಷದ ನೇತ್ರಾವತಿ ಮೃತ ದುರ್ದೈವಿ. ಸೀರೆಯಿಂದ ಕತ್ತು ಬಿಗಿದು ಪತಿ ವೆಂಕಟೇಶ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಮಾಗಡಿ ತಾಲೂಕಿನ ನೇತ್ರಾವತಿ ಹಾಗೂ ವೆಂಕಟೇಶ್ ರಂಗನಾಥಪುರದಲ್ಲಿ ವಾಸವಿದ್ದರು. ಇವರಿಗೆ 9 ವರ್ಷದ ಹಿಂದೆ ಮದುವೆಯಾಗಿದ್ದು, 8 ವರ್ಷದ ಮಗನಿದ್ದಾನೆ. ನೇತ್ರಾವತಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ ವೆಂಕಟೇಶ್ ಖಾಸಗಿ ಕಂಪನಿಯೊಂದರ ಕ್ರೇನ್ ಆಪರೇಟರ್ ಕೆಲಸ ಮಾಡುತ್ತಿದ್ದ.
ಮದ್ಯವ್ಯಸನಿಯಾಗಿದ್ದ ವೆಂಕಟೇಶ್ ವಿಪರೀತ ಕುಡಿಯುತ್ತಿದ್ದ. ಜೊತೆಗೆ ಕುಡಿದು ಬಂದು ಮನೆಯಲ್ಲಿ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ. ಸಂಬಳದ ಹಣವನ್ನೆಲ್ಲಾ ಮದ್ಯ ಖರೀದಿಗೆ ಸುರಿಯುತ್ತಿದ್ದ. ಹಣ ಮುಗಿದಾಗ ಪತ್ನಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ನೀಡುವ ಸಂಬಳದಲ್ಲಿ ನೇತ್ರಾವತಿ ಮನೆ ನಡೆಸುತ್ತಿದ್ದರು. ಪತಿಯೂ ತನ್ನ ಸಂಬಳದ ಮೇಲೆ ಕಣ್ಣು ಹಾಕಿದ್ದು ನೇತ್ರಾವತಿಗೆ ರೋಸಿ ಹೋಗಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅನೇಕ ಬಾರಿ ಪತ್ನಿ ಮೇಲೆ ವೆಂಕಟೇಶ್ ಹಲ್ಲೆ ಮಾಡಿದ್ದ ಎಂದು ಅಕ್ಕಪಕ್ಕದ ನಿವಾಸಿಗಳು ಸ್ಥಳೀಯರು ಹೇಳಿದ್ದಾರೆ. ವೆಂಕಟೇಶ್ ಮತ್ತು ನೇತ್ರಾವತಿ ನಡುವೆ ಶನಿವಾರವೂ ಗಲಾಟೆ ನಡೆದಿತ್ತು. ವೆಂಕಟೇಶ್ ಮನೆಯಿಂದ ಹೊರಗೆ ಹೋಗಿ ಕುಡಿದು ನಡುರಾತ್ರಿ ರಾತ್ರಿ ಮನೆಗೆ ಹಿಂತಿರುಗಿದ್ದ. ಆಗ ನೇತ್ರಾವತಿ ಎಚ್ಚರವಿದ್ದರೆ ಮಗ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿಯಿಡೀ ಮೃತದೇಹದ ಪಕ್ಕದಲ್ಲೇ ಮಲಗಿದ್ದ
ನಡುರಾತ್ರಿಯಲ್ಲೂ ವೆಂಕಟೇಶ್ ಪತ್ನಿ ಜೊತೆ ಜಗಳ ಆರಂಭಿಸಿ ಆಕೆಯನ್ನು ಹೊಡೆದಿದ್ದ. ಮನೆಯಿಂದ ಹೊರಗೆ ಬಂದ ನೇತ್ರಾವತಿ ಅಕ್ಕ ಪಕ್ಕದ ಮನೆಯವರನ್ನು ಕೂಗಿ ಕರೆದಿದ್ದರು. ಅವರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು ಎಂದು ತಿಳಿದು ಬಂದಿದೆ. ನಂತರವೂ ಜಗಳ ತೆಗೆದಿದ್ದ ಆರೋಪಿ ವೆಂಕಟೇಶ್ ಪತ್ನಿ ನೇತ್ರಾವತಿ ಅವರ ಕುತ್ತಿಗೆಗೆ ಸೀರೆ ಸುತ್ತಿ ಬಿಗಿದಿದ್ದ. ಇದರಿಂದ ಉಸಿರುಗಟ್ಟಿ ನೇತ್ರಾವತಿ ಮೃತಪಟ್ಟಿದ್ದಾರೆ. ಆರೋಪಿಯು ರಾತ್ರಿಯಿಡೀ ಮೃತದೇಹದ ಪಕ್ಕದಲ್ಲೇ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಎಚ್ಚರಗೊಂಡ ಮಗ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದ. ಆದರೆ ಆಕೆ ಎದ್ದಿರಲಿಲ್ಲ. ನಂತರ ತಂದೆಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಆತನೂ ಎಚ್ಚರಗೊಳ್ಳಲಿಲ್ಲ. ವಿಪರೀತ ಮದ್ಯ ಕುಡಿದಿದ್ದ ವೆಂಕಟೇಶ್‌ಗೆ ಎಚ್ಚರ ವಾಗಿಲ್ಲ. ಮನೆಯಿಂದ ಹೊರಗೆ ಬಂದ ಮಗ ಅಳುತ್ತಿದ್ದ. ಇದನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡು ಮನೆಯೊಳಗೆ ಹೋಗಿ ನೋಡಿದಾಗ ನೇತ್ರಾವತಿ ಮೃತಪಟ್ಟಿದ್ದರು. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿಯಲು ಹಣ ನೀಡಲಿಲ್ಲ ಎಂದು ಪತ್ನಿಗೆ ಇರಿದ ಭೂಪ
ಇಂತಹುದೇ ಮತ್ತೊಂದು ಪ್ರಕರಣದಲ್ಲಿ ಮದ್ಯ ಖರೀದಿಸಲು ಹಣ ನೀಡಲಿಲ್ಲ ಎಂದು ಪತ್ನಿಗೆ ಚಾಕುವಿನಿಂದ ಇರಿದಿದ್ದ ಆರೋಪದಡಿಯಲ್ಲಿ ಮೊಹಮ್ಮದ್ ಎಂಬಾತನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಮೂಲದ ಆರೋಪಿ ಮೊಹಮ್ಮದ್, ಕೂಲಿ ಕಾರ್ಮಿಕನಾಗಿದ್ದು, ಪತ್ನಿ ಮೈಮುದಾ ಮತ್ತು ಮೂವರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದ. ಶನಿವಾರ ರಾತ್ರಿ ಕುಡಿಯಲು ಹಣ ನೀಡುವಂತೆ ಪತ್ನಿಯೊಂದಿಗೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ಹೋದಾಗ ಆರೋಪಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೊಹಮ್ಮದ್ ಪ್ರತಿದಿನ ಕುಡಿದು ಮನೆಯಲ್ಲಿ ಹಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಹಣ ನೀಡದೆ ಇದ್ದಾಗ ಜೋರು ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿ ಮದ್ಯ ಖರೀದಿಗೆ ಮತ್ತೆ ಹಣಕ್ಕಾಗಿ ಪತ್ನಿಯನ್ನು ಪೀಡಿಸಿದ್ದಾನೆ. ಕೊಡದೆ ಇದ್ದಾಗ ಪತ್ನಿಯ ಭುಜ ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದ. ಈಕೆಯ ಕೂಗಾಟ ಕೇಳಿ ರಕ್ಷಣೆಗೆ ಧಾವಿಸಿದ್ದ ಸ್ಥಳೀಯರು, ಮೈಮುದಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೈಮುದಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಮತ್ತು ಮಕ್ಕಳ ಹೇಳಿಕೆ ಆಧರಿಸಿ ಹಲ್ಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
