ಕನ್ನಡ ಸುದ್ದಿ  /  ಕರ್ನಾಟಕ  /  ಕೆಲಸ ಕೊಟ್ಟವರ ಮನೆಯಲ್ಲೇ ದೋಚಿದ ಖತರ್ನಾಕ್ ಮಹಿಳೆ; ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

ಕೆಲಸ ಕೊಟ್ಟವರ ಮನೆಯಲ್ಲೇ ದೋಚಿದ ಖತರ್ನಾಕ್ ಮಹಿಳೆ; ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

Bengaluru Crime News: ಬಟ್ಟೆ ವ್ಯಾಪಾರದ ನೆಪದಲ್ಲಿ ಡ್ರಗ್ಸ್ ಮಾರುತ್ತಿದ್ದ ವ್ಯಕ್ತಿ ಬಂಧನವಾಗಿದ್ದು, ಆತನಿಂದ 2 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೆಲಸ ಕೊಟ್ಟ ಮಾಲೀಕರ ಮನೆಯಲ್ಲೇ ಕಳವು ಮಾಡಿದ ಮಹಿಳೆ ಬಂಧನವಾಗಿದೆ. (ವರದಿ-ಎಚ್. ಮಾರುತಿ)

ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ
ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದವ ಬಂಧನ

ಬಟ್ಟೆ ವ್ಯಾಪಾರ ಮಾಡುವ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಸೇಕಾ ಗಿಸಲೈನ್ ಟಾನೊ ಎಂಬ 33 ವರ್ಷದ ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರಿ ಕೋಸ್ಟ್‌ ಪ್ರದೇಶದ ಟಾನೊ, 2022ರಲ್ಲಿ ಬೆಂಗಳೂರಿಗೆ ಆಗಮಿಸಿ ಹೊಂಗಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಪರಿಚಯಸ್ಥರಿಗೆ ಮಾತ್ರ ಡ್ರಗ್ಸ್ ಮಾರಾಟ ಮಾಡುತ್ತಿದ್ದ.

ಟ್ರೆಂಡಿಂಗ್​ ಸುದ್ದಿ

ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈತನ ಮನೆಯ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಟಾನೊ ಮನೆಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ 2. 24 ಕೆಜಿ ತೂಕದ ಎಂಡಿಎಂಎ ಮಾತ್ರೆಗಳು, ಮೊಬೈಲ್ ಹಾಗೂ ತೂಕದ ಯಂತ್ರವೊಂದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಸೇಕಾ ಗಿಸಲೈನ್ ಟಾನೋ ಮುಂಬೈನಲ್ಲೂ ಕೆಲವು ತಿಂಗಳು ನೆಲೆಸಿದ್ದ. ಅಲ್ಲಿಯೂ ಬಟ್ಟೆ ವ್ಯಾಪಾರಿ ಎಂದು ಹೇಳಿಕೊಳ್ಳುತ್ತಾ ಡ್ರಗ್ಸ್ ದಂಧೆ ನಡೆಸುತ್ತಿದ್ದ.

ಅಲ್ಲಿ ಕೆಲವು ಡ್ರಗ್ ಪೆಡ್ಲರ್‌ಗಳ ಜೊತೆ ಸಂಪರ್ಕ ಸಾಧಿಸಿ ಅವರಿಂದ ಡ್ರಗ್ಸ್ ಖರೀದಿಸಿ ಮಾರುತ್ತಿದ್ದ. ಈ ಹಿಂದೆ ನಗರದಲ್ಲಿ ಡ್ರಗ್ಸ್ ಮಾರುತ್ತಿದ್ದ ಸಂದರ್ಭದಲ್ಲಿಯೇ ಶಂಕರಪುರ ಪೊಲೀಸ್ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದರು. ಕೆಲವು ದಿನಗಳ ಅವಧಿಗೆ ಜೈಲು ಶಿಕ್ಷೆ ಅನುಭವಿಸಿ ಜಾಮೀನು ಪಡೆದು ಹೊರಬಂದು ಮತ್ತೆ ಇದೇ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಹಿಳೆ ಬಂಧನ

ಒಂಟಿ ಮಹಿಳೆ ಎಂದು ಕೆಲಸ ಕೊಟ್ಟ ಮಾಲೀಕರೊಬ್ಬರ ಮನೆಯಲ್ಲೇ ಕಳ್ಳತನ ನಡೆಸಿದ ಖತರ್ ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಿಜಿ ಕಟ್ಟಡದ ಮಾಲೀಕರೊಬ್ಬರಿಗೆ ಮಜ್ಜಿಗೆಯಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಅವರ ಮನೆಯಿಂದ ಚಿನ್ನಾಭರಣ ಕದ್ದಿದ್ದ ರಾಜೇಶ್ವರಿ ಎಂಬಾಕೆಯನ್ನು ಬೆಂಗಳೂರಿನ ಹಲಸೂರು ಪೊಲೀಸರು ಬಂಧಿಸಿದ್ದಾರೆ.

ಜೀವನ್‌ಭೀಮಾನಗರ ಸಮೀಪದ ಮಲ್ಲೇಶ್ ಪಾಳ್ಯದ ನಿವಾಸಿ ರಾಜೇಶ್ವರಿ, ಪಿಜಿ ಕಟ್ಟಡದಲ್ಲಿಯೇ ಅಡುಗೆ ಕೆಲಸ ಮಾಡುತ್ತಿದ್ದರು. ಈಕೆ ಪತಿಯಿಂದ ದೂರವಾಗಿ ಒಬ್ಬರೇ ವಾಸವಾಗಿದ್ದರು. ಅದೇ ಕಟ್ಟಡದ ಮಾಲೀಕರಾಗಿದ್ದ ಮಹಿಳೆಗೆ ಮತ್ತು ಬರುವ ಔಷಧಿ ಬೆರೆಸಿ ಮಜ್ಜಿಗೆ ಕುಡಿಸಿ ಚಿನ್ನದ ಆಭರಣ ಕದ್ದಿದ್ದರು. ನಂತರ ಮಹಿಳೆ ದೂರು ನೀಡಿದ್ದರು. ದೂರು ದಾಖಲಾದ ನಂತರ ವಿಚಾರಣೆ ನಡೆಸಿ ರಾಜೇಶ್ವರಿಯನ್ನು ಬಂಧಿಸಲಾಗಿದೆ. ಈಕೆಯಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜೇಶ್ವರಿ ಪಿಜಿಯಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಒಂಟಿ ಮಹಿಳೆ ಎಂದು ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕರಾದ ಮಹಿಳೆ ಕರುಣೆಯಿಂದ ಕೆಲಸ ನೀಡಿದ್ದರು. ಇತ್ತೀಚೆಗೆ ಪಿಜಿ ಮಾಲೀಕರಾದ ಮಹಿಳೆಗೆ ಆರೋಗ್ಯ ಹದಗೆಟ್ಟಿತ್ತು. ಆರೋಪಿ ರಾಜೇಶ್ವರಿ ಅವರ ಆರೈಕೆ ಮಾಡುತ್ತಾ ಕುಡಿಯಲು ಮಜ್ಜಿಗೆ ಕೊಟ್ಟಿದ್ದರು. ಮಜ್ಜಿಗೆ ಕುಡಿದ ನಂತರ ಮಹಿಳೆ, ಪ್ರಜ್ಞೆ ತಪ್ಪಿದ್ದರು. ಈಕೆ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿದ್ದರು. ನಂತರ ಏನೂ ಗೊತ್ತಿಲ್ಲದ ಹಾಗೆ ಪಿಜಿಗೆ ಮರಳಿದ್ದರು. ರಾಜೇಶ್ವರಿ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪನ್ನು ಒಪ್ಪಿಕೊಂಡರು.

IPL_Entry_Point