ಹೀಗೂ ಮೋಸ ಮಾಡ್ತಾರೆ ಹುಷಾರ್‌! ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಹೀಗೂ ಮೋಸ ಮಾಡ್ತಾರೆ ಹುಷಾರ್‌! ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ

ಹೀಗೂ ಮೋಸ ಮಾಡ್ತಾರೆ ಹುಷಾರ್‌! ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ

ಈಗೀಗ ಸೈಬರ್‌ ವಂಚನೆಯ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ಪ್ರಕರಣವೊಂದರ ಬಗ್ಗೆ ಕೇಳಿದ್ರೆ ನಿಮಗೆ ಹೀಗೂ ಮೋಸ ಮಾಡ್ತಾರಾ ಅಂತ ಅನ್ನಿಸದೇ ಇರುವುದಿಲ್ಲ. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅಂಬಾನಿ ಧ್ವನಿ ಬಳಸಿ ವಂಚಕರು ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ. (ವರದಿ: ಎಚ್. ಮಾರುತಿ)

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ (ಸಾಂಕೇತಿಕ ಚಿತ್ರ)
ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ (ಸಾಂಕೇತಿಕ ಚಿತ್ರ)

ಬೆಂಗಳೂರು: ವಂಚನೆ ಮಾಡಲು ಅಧಿಕಾರಿಗಳು, ಪೊಲೀಸರು ಮತ್ತು ರಾಜಕಾರಣಿಗಳ ಹೆಸರು ಬಳಸುವುದು ಸರ್ವೇ ಸಾಮಾನ್ಯ. ಆದರೆ ಈ ವಂಚಕರು ದೇಶದ ಮಹಾನ್ ಉದ್ಯಮಿಗಳಾದ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅಂಬಾನಿ ಅವರ ಹೆಸರು ಮತ್ತು ಅವರದ್ದೇ ಧ್ವನಿ ಬಳಸಿ ವಂಚಿಸಿದ್ದಾರೆ.

ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಉದ್ಯಮಿಗಳ ಹೆಸರು ಹಾಗೂ ಅವರದೇ ಶೈಲಿಯ ಧ್ವನಿ ಡೀಪ್‌ಫೇಕ್ ಬಳಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ವಂಚಕರು ಮಹಿಳೆ ಮತ್ತು ನಿವೃತ್ತ ನೌಕರರೊಬ್ಬರಿಗೆ 68 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಈ ಸಂಬಂಧ ಸೈಬರ್ ಅಪರಾಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ರಿಲಯನ್ಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ‘ಎಫ್‌ಎಕ್ಸ್‌ ರೋಡ್. ಕಾಂ‘ ಟ್ರೇಡಿಂಗ್ ಕುರಿತು ಮಾಹಿತಿ ನೀಡಿದಂತೆ ಫೇಸ್‌ಬುಕ್‌ನಲ್ಲಿ ಸೈಬರ್ ಕಳ್ಳರು ಪೋಸ್ಟ್‌ವೊಂದನ್ನು ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ನಿವೃತ್ತ ನೌಕರರೊಬ್ಬರು ಹಣ ಕಳೆದುಕೊಂಡಿದ್ದಾರೆ.

ವ್ಯವಸ್ಥಾಪಕರೊಬ್ಬರ ಸೋಗಿನಲ್ಲಿ ಸೈಬರ್ ವಂಚಕನೊಬ್ಬ ಮೇ. 30ರಂದು ಕರೆ ಮಾಡಿ ಲಿಂಕ್ ಕಳುಹಿಸಿದ್ದ. ಆ ಲಿಂಕ್ ಬಳಸಿಕೊಂಡು ನಿವೃತ್ತ ನೌಕರರೊಬ್ಬರು ಹೂಡಿಕೆ ಖಾತೆ ತೆರೆದಿದ್ದರು. ಲಾಭದ ಆಸೆಯಿಂದ ಅವರು ಮೂರು ಬ್ಯಾಂಕ್ ಖಾತೆಗಳಿಂದ ಮೇ. 30 ರಿಂದ ಅಕ್ಟೋಬರ್ 3ರ ಮಧ್ಯೆ ಒಟ್ಟು 19 ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭಾಂಶ ನೀಡಿಲ್ಲ. ಜೊತೆಗೆ ಅಸಲು ಹಣವನ್ನೂ ನೀಡದೇ ಮೋಸ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.

ಮಹಿಳೆಗೆ 67 ಲಕ್ಷ ವಂಚನೆ

ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರಿಗೆ ಸೆಪ್ಟೆಂಬರ್ 23ರಂದು ಫೇಸ್‌ಬುಕ್‌ನಲ್ಲಿ ‘ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರಂ‘ ಟ್ರೇಡಿಂಗ್ ಬಗ್ಗೆ ಎನ್.ಆರ್. ನಾರಾಯಣ ಮೂರ್ತಿ ಅವರು ಮಾತನಾಡಿದಂತೆಯೇ ಮಾಹಿತಿ ನೀಡಲಾಗಿತ್ತು. ನಂತರ, ಅಪರಿಚಿತ ವ್ಯಕ್ತಿಯೊಬ್ಬ ಕೆ.ಜಿ.ವೀಣಾ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿ, ಈ ಪ್ಲಾಟ್‌ಫಾರಂನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದ್ದ.ಆತನ ಮಾತನ್ನು ನಂಬಿದ ವೀಣಾ ಅವರು ಕೆನರಾ ಬ್ಯಾಂಕ್ ಖಾತೆಯಿಂದ 1.39 ಲಕ್ಷ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ಆರಂಭದಲ್ಲಿ 8,363 ಲಾಭಾಂಶವನ್ನು ವಂಚಕರು ನೀಡಿದ್ದರು. ಇದನ್ನೇ ನಂಬಿದ್ದ ಮಹಿಳೆ ಹಂತ ಹಂತವಾಗಿ 67 ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ ಹಣಕ್ಕೆ 55,997 ಮಾತ್ರ ಮರಳಿಸಿದ್ದಾರೆ ವೀಣಾ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಮನೆ ಬೀಗ ಒಡೆದು ಕಳವು ಮಾಡುತ್ತಿದ್ದ ರೌಡಿ, ಆತನ ಪತ್ನಿ ಬಂಧನ

ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಚಿನ್ನಾಭರಣ ಹಾಗೂ ನಗದು ಹಣವನ್ನು ಕಳವು ಮಾಡುತ್ತಿದ್ದ ಓರ್ವ ರೌಡಿ ಶೀಟರ್ ಆತನ ಪತ್ನಿ ಸೇರಿದಂತೆ ಐವರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿಯ ಮಾಣಿಕ್ಯ (26), ರೌಡಿಶೀಟರ್ ಗೌತಮ್ ಶೆಟ್ಟಿ(30), ಆತನ ಪತ್ನಿ ಶಿಬಾ(28), ಸಹಚರರಾದ ದಯಾನಂದ್(27) ಮತ್ತು ನರಸಿಂಹ(28) ಬಂಧಿತ ಆರೋಪಿಗಳು. ಇವರಿಂದ 21 ಲಕ್ಷ ಮೌಲ್ಯದ 325 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ 800 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಎಚ್‌ಎಂಟಿ ಲೇಔಟ್‌ನ ಮನೆಯೊಂದರ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮನೆ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕದ್ದ ಚಿನ್ನಾಭರಣಗಳನ್ನು ಖಾಸಗಿ ಹಣಕಾಸು ಸಂಸ್ಥೆ ಹಾಗೂ ಚಿನ್ನದ ಅಂಗಡಿಗಳಲ್ಲಿ ಅಡವಿಡುತ್ತಿದ್ದರು. ಅಂಗಡಿಗಳಿಂದ ಆ ಚಿನ್ನವನ್ನೂ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗೌತಮ್ ಶೆಟ್ಟಿ ಮಾಗಡಿ ರಸ್ತೆ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಆತನ ಪತ್ನಿ ಶೀಬಾ ಪತಿಯ ದುಷ್ಕೃತ್ಯ ಗಳಿಗೆ ಸಹಕಾರ ನೀಡುತ್ತಿದ್ದಾಳೆ. ಮತ್ತೊಬ್ಬ ಆರೋಪಿ ಮಾಣಿಕ್ಯನ ವಿರುದ್ಧ ಬೆಂಗಳೂರಿನ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Whats_app_banner