Bengaluru Crime: ಮನೆ ಮೇಲೆ ದಾಳಿ ನಡೆಸಿ 11 ರೌಡಿಗಳ ವಿರುದ್ಧ ಎಫ್ಐಆರ್; ಚಾಕು ತೋರಿಸಿ ಸಿಗರೇಟ್ ಪಡೆದಿದ್ದ ರೌಡಿ ಬಂಧನ
ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅತ್ತ ಚಾಕು ತೋರಿಸಿ ಸಿಗರೇಟ್ ವಸೂಲಿ ಮಾಡಿದ್ದ ಪುಡಿ ರೌಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ. ವರದಿ: ಎಚ್. ಮಾರುತಿ, ಬೆಂಗಳೂರು

ಬೆಂಗಳೂರು: ನಗರದ ಸುಮಾರು 400 ರೌಡಿಗಳು ಹಾಗೂ ಹಳೆಯ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, 11 ಮಂದಿ ರೌಡಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಶುಕ್ರವಾರ (ಫೆ.7) ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ದಾಳಿ ನಡೆಸಿದ್ದಾರೆ. ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದ 15 ಮಂದಿ ರೌಡಿಗಳನ್ನು ವಶಕ್ಕೆ ಪಡೆದು ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವು ರೌಡಿಗಳ ಮನೆಗಳಲ್ಲಿ ಕೆಲವು ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರೌಡಿಗಳು ಮಾಡುತ್ತಿರುವ ಉದ್ಯೋಗ ಮತ್ತು ಮೊಬೈಲ್ ನಂಬರ್‌ಗಳನ್ನು ನಮೂದಿಸಿಕೊಂಡ ಪೊಲೀಸ್ ಅಧಿಕಾರಿಗಳು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಸುಲಿಗೆ
ವಿದೇಶಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ದುಷ್ಕರ್ಮಿಗಳು 15 ಸಾವಿರ ರೂ ದೋಚಿಕೊಂಡು ಪರಾರಿಯಾಗಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಒಸಾಮಾ ದೂರು ನೀಡಿದ್ದಾರೆ. ಇವರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೊತ್ತನೂರಿನಲ್ಲಿ ವಾಸವಾಗಿರುವ ಒಸಾಮಾ, ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಗೋವಿಂದಪುರದಲ್ಲಿರುವ ಸ್ನೇಹಿತ ಪೊರ್ಷೆ ಜಾನ್ ನಿವಾಸಕ್ಕೆ ತೆರಳಿದ್ದರು. ಆದರೆ, ಆ ಸಮಯದಲ್ಲಿ ಹೊರಗಡೆ ಹೋಗಿದ್ದ ಜಾನ್, ಸ್ನೇಹಿತನನ್ನು ಮನೆಯಲ್ಲೇ ಇರುವಂತೆ ತಿಳಿಸಿದ್ದರಿಂದ ಒಸಾಮಾ ಅಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ ಒಂದು ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಒಸಾಮಾ ಮೇಲೆ ಹಲ್ಲೆ ನಡೆಸಿ, ಡ್ರಗ್ಸ್ ನೀಡುವಂತೆ ಒತ್ತಾಯಿಸಿದ್ದಾರೆ.
ಬೆಳಗಿನ ಜಾವ 3.30ಕ್ಕೆ ಪೊರ್ಷೆ ಜಾನ್ ಹಾಗೂ ರಿಂಗ್ ಬೌಲ್ ಮನೆಗೆ ಮರಳಿದ್ದಾರೆ. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿ, ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಮನೆಯಲ್ಲಿದ್ದ ರೂ. 15 ಸಾವಿರ ನಗದು ದೋಚಿಕೊಂಡು, ಮೊಬೈಲ್‌ಗಳನ್ನು ಮರಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದುಷ್ಕರ್ಮಿಗಳು ಹಿಂದಿ ಹಾಗೂ ಇಂಗ್ಲಿಷ್ ಮಾತನಾಡುತ್ತಿದ್ದರು ಎಂದು ದೂರುದಾರರು ತಿಳಿಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕು ತೋರಿಸಿ ಸಿಗರೇಟ್ ವಸೂಲಿ ಮಾಡಿದ್ದ ರೌಡಿ ಬಂಧನ
ಪೆಟ್ಟಿಗೆ ಅಂಗಡಿ ವ್ಯಾಪಾರಿಯೊಬ್ಬರಿಗೆ ಚಾಕು ತೋರಿಸಿ, ಹೆದರಿಸಿ ಉಚಿತವಾಗಿ ಸಿಗರೇಟ್ ಪ್ಯಾಕೆಟ್ ಪಡೆದಿದ್ದ ಆರೋಪಿ ಗೌತಮ್ ಎಂಬಾತನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಆಡುಗೋಡಿಯ ರಾಜೇಂದ್ರ ನಗರದ 80 ಅಡಿ ರಸ್ತೆಯ ಪೆಟ್ಟಿಗೆ ಅಂಗಡಿಗೆ ಬಂದ ಗೌತಮ್, ಒಂದು ಪ್ಯಾಕ್ ಸಿಗರೇಟ್ ಮತ್ತು ಬೆಂಕಿ ಪೊಟ್ಟಣ ಪಡೆದುಕೊಂಡಿದ್ದಾನೆ. ವ್ಯಾಪಾರಿ ಹಣ ಕೇಳಿದಾಗ, ನಾನು ಯಾರು ಎಂದು ತಿಳಿದಿದೆಯೇ? ನನ್ನ ಬಳಿಯೇ ಹಣ ಕೇಳುತ್ತೀಯಾ? ನಾನು ಕೇಳುವುದನ್ನು ಕೊಡಬೇಕು ಎಂದು ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌತಮ್ ಹೆದರಿಸುತ್ತಿರುವ ಮತ್ತು ಮಾಲೀಕ ಸಿಗರೇಟ್ ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಜತೆಗೆ ಅಂಗಡಿ ಮಾಲೀಕ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಮತ್ತು ವಿಡಿಯೋ ಪರಿಶೀಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಒಂದೂವರೆ ಅಡಿ ಉದ್ದದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
