ಬೆಂಗಳೂರು: ನಕಲಿ ಷೇರು ಮಾರುಕಟ್ಟೆ ಆಪ್ ನಂಬಿ 2.39 ಕೋಟಿ ರೂ ಕಳದುಕೊಂಡ ಎಂಜಿನಿಯರ್ ; ಕೆಲಸದ ಒತ್ತಡಕ್ಕೆ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು ಅಪರಾಧ ಸುದ್ದಿ: ನಕಲಿ ಷೇರು ಮಾರುಕಟ್ಟೆ ಆಪ್ ನಂಬಿ ವ್ಯವಹರಿಸಿದ ಎಂಜಿನಿಯರ್ 2.39 ಕೋಟಿ ರೂ ಕಳದುಕೊಂಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಕೆಲಸದ ಒತ್ತಡಕ್ಕೆ ಸಿಲುಕಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮತ್ತೊಂದೆಡೆ, ಮಾಗಡಿ ತಾಲೂಕು ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ 3 ಯುವತಿಯರು ಮೃತಪಟ್ಟಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: ಷೇರು ಮಾರುಕಟ್ಟೆ ಆಪ್ ಜಾಹಿರಾತು ನಂಬಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು 2.39 ಕೋಟಿ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದು, ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ, ಕೆಲಸದ ಒತ್ತಡ ಹೆಚ್ಚಾಗಿ ಐಟಿಬಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮತ್ತೊಂದೆಡೆ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದಾರೆ.
ನಕಲಿ ಷೇರು ಮಾರುಕಟ್ಟೆ ಆಪ್ ನಂಬಿ 2.39 ಕೋಟಿ ರೂ ಕಳದುಕೊಂಡ ಎಂಜಿನಿಯರ್
ಬೆಂಗಳೂರಿನಲ್ಲಿ 41 ವರ್ಷದ ಎಂಜಿನಿಯರ್ ಫೇಸ್‌ಬುಕ್ ನೋಡುತ್ತಿದ್ದಾಗ ಆಲಿಸ್ ಬ್ಲೂ ಎಂಬ ಟ್ರೇಡಿಂಗ್ ವ್ಯವಹಾರದ ಜಾಹೀರಾತು ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಆಲಿಸ್ ಬ್ಲೂ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದಾರೆ. ಪೂಜಾ ಶೈನ್ ಎಂಬ ಹೆಸರಿನಲ್ಲಿ ಓರ್ವ ಯುವತಿ ಟೆಕ್ಕಿಗೆ ಕರೆ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ನಂಬಿಸಿದ್ದಾಳೆ. ಆಕೆಯ ಮಾತುಗಳನ್ನು ನಂಬಿದ ಟೆಕ್ಕಿ ಆಕೆ ಕಳುಹಿಸಿದ ಲಿಂಕ್ ಬಳಸಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಆರಂಭದಲ್ಲಿ 50 ಸಾವಿರ ಹೂಡಿಕೆ ಮಾಡಿದ್ದಾರೆ.
ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದಷ್ಟೂ ಹೆಚ್ಚಿನ ಲಾಭ ಸಿಗಲಿದೆ ಎಂಬ ಪೂಜಾ ಮಾತನ್ನು ಆಕೆ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಪ್ಲಿಕೇಷನ್ ನಲ್ಲಿ ಲಾಭಾಂಶ ಬಂದಿರುವ ಅಂಕಿಅಂಶ ತೋರಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಲಾಭಾಂಶ ಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ ಮತ್ತಷ್ಟು ಹಣ ಪಾವತಿ ಮಾಡಬೇಕಿದೆ ಎಂದು ವಂಚಕರು ಹೇಳಿದ್ದಾರೆ. ಆಗ ಮತ್ತೆ ಲಕ್ಷಾಂತರ ರೂ. ವರ್ಗಾವಣೆ ಮಾಡಿದ್ದಾರೆ. ಆದರೂ ಲಾಭದ ಮೊತ್ತವನ್ನು ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆ ವೇಳೆಗೆ ಟೆಕಿ ರೂ. 2.39 ಕೋಟಿ ಹೂಡಿಕೆ ಮಾಡಿದ್ದರು. ಹತ್ತಾರು ಬಾರಿ ಪ್ರಯತ್ನಿಸಿದರೂ ವಂಚಕರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಟೆಕ್ಕಿ ದೂರಿನಲ್ಲಿ ತಿಳಿಸಿದ್ದಾರೆ. ಇವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಂಚಕರ ಬ್ಯಾಂಕ್ ಖಾತೆಗಳ ವಿವರ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.
ಕೆಲಸದ ಒತ್ತಡ: ಎಂಜಿನಿಯರ್ ಆತ್ಮಹತ್ಯೆ
ಐಟಿಬಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಪತ್ತೆಯಾಗಿದೆ. ಮೇ 17ರಂದು ನಿಖಿಲ್ ಸೋಮವಂಶಿ ಅಗರ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಶವ ತಡವಾಗಿ ಪತ್ತೆಯಾಗಿದೆ. ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ)ಯಲ್ಲಿ ಪದವಿ ಪಡೆದಿದ್ದ ನಿಖಿಲ್, ಒಂದು ವರ್ಷದ ಹಿಂದೆಯಷ್ಟೇ ಕೃತ್ರಿಮ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಪ್ರತಿಭಾವಂತರಾಗಿದ್ದ ನಿಖಿಲ್ ಅವರಿಗೆ ಮಹತ್ವದ ಪ್ರಾಜೆಕ್ಟ್‌ಗಳನ್ನು ವಹಿಸಿ ಇಬ್ಬರು ಸಹಾಯಕರನ್ನು ನೀಡಲಾಗಿತ್ತು. ಅವರಿಬ್ಬರೂ ಕೆಲಸ ಬಿಟ್ಟಿದ್ದರಿಂದ ಎಲ್ಲ ಜವಬ್ದಾರಿಯನ್ನೂ ನಿಖಿಲ್ ನಿರ್ವಹಿಸಬೇಕಿತ್ತು. ಅಮೆರಿಕದಲ್ಲಿರುವ ಕಂಪನಿಯ ವ್ಯವಸ್ಥಾಪಕ, ಮೀಟಿಂಗ್ ನಲ್ಲಿ ಅವರನ್ನು ಹಿಯಾಳಿಸುತ್ತಿದ್ದರು ಎಂದು ಸಹೋದ್ಯೋಗಿಗಳು ಆರೋಪಿಸಿದ್ದಾರೆ. ಇವರ ಆತ್ಮಹತ್ಯೆಗೆ ಪ್ರತಿಕ್ರಿಯಿಸಿರುವ ಕೃತ್ರಿಮ್ ಕಂಪನಿ, ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿರುವುದು ನೋವನ್ನುಂಟು ಮಾಡಿದೆ ಮತ್ತು ಅವರ ಕುಟುಂಬಕ್ಕೆ ಅಗತ್ಯ ಸಹಾಯ ನೀಡುವುದಾಗಿ ಭರವಸೆ ನೀಡಿದೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ದುರ್ಮರಣ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದಾರೆ. ಬೆಂಗಳೂರು ಮೂಲದ ರಾಘವಿ (18) ಮಧುಮಿತ (20), ಹಾಗೂ ರಮ್ಯಾ (22) ಮೃತ ಯುವತಿಯರು. ಜಲಾಶಯವನ್ನು ನೋಡಲು ಏಳು ಯುವತಿಯರು ಆಗಮಿಸಿದ್ದರು. ಈ ಪೈಕಿ ಓರ್ವ ಯುವತಿ ನೀರಿಗೆ ಬಿದ್ದಿದ್ದಾಳೆ. ಆಕೆಯ ರಕ್ಷಣೆಗೆ ಜತೆಯಲ್ಲಿದ್ದ ಆರು ಯುವತಿಯರು ನೀರಿಗೆ ಇಳಿದಿದ್ದಾರೆ. ಇವರಲ್ಲಿ ಮೂವರು ಯುವತಿಯರು ಮೃತಪಟ್ಟಿದ್ದಾರೆ. ಉಳಿದ ಮೂವರನ್ನು ಯುವಕನೊಬ್ಬ ರಕ್ಷಿಸಿದ್ದಾನೆ. ಬೆಂಗಳೂರಿನಿಂದ ಸಂಬಂಧಿಕರ ಮನೆಗೆ ಬಂದಿದ್ದ ಯುವತಿಯರು, ವೈಜಿ ಗುಡ್ಡ ಜಲಾಶಯ ವೀಕ್ಷಿಸಲು ಹೋಗಿದ್ದ ವೇಳೆ ಈ ದುರಂತ ನಡೆದಿದೆ. ಮೃತ ದೇಹಗಳನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.
(ವರದಿ- ಎಚ್.ಮಾರುತಿ, ಬೆಂಗಳೂರು)


