ಬೆಂಗಳೂರು: ಬಟ್ಟೆ ಖರೀದಿಸಿ ಹಣ ಪಾವತಿಸದೆ ವಂಚಿಸಿದ ಯುವತಿ ಬಂಧನ; ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿದ ಆರೋಪಿಗಳು ಅಂದರ್
ಬಟ್ಟೆ ಖರೀದಿಸಿ ಆನ್‌ಲೈನ್‌ನಲ್ಲಿ ಹಣ ಪಾವತಿಯಾಗಿದೆ ಎಂದು ನಂಬಿಸಿ ವಂಚಿಸಿದ್ದ ಯುವತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿ ವಂಚಿಸುತ್ತಿದ್ದ 6 ಮಂದಿ ಕೂಡಾ ಪೊಲೀಸ್ ಬಲೆಗೆ ಬಿದ್ದಿದ್ದಾರೆ. (ವರದಿ: ಎಚ್.ಮಾರುತಿ)
ಬಟ್ಟೆ ಅಂಗಡಿಯಲ್ಲಿ 31 ಸಾವಿರ ರೂ ಮೌಲ್ಯದ ಉಡುಪುಗಳನ್ನು ಖರೀದಿಸಿ ಆನ್ ಲೈನ್ ಮೂಲಕ ಹಣ ಪಾವತಿಯಾಗಿದೆ ಎಂದು ನಕಲಿ ಫೊಟೋ ತೋರಿಸಿ ನಂಬಿಸಿದ್ದ ಯುವತಿಯನ್ನು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರದ ನಿವಾಸಿ ರಶ್ಮಿ ಬಂಧಿತ ಆರೋಪಿ. 25 ವರ್ಷದ ರಶ್ಮಿ ಸದಾಶಿವನಗರದ ಆರ್‌ಎಂವಿ ಬಡಾವಣೆಯ ವಸಿಷ್ಠ ಬೂಟಿಕ್ ಎಂಬ ಬಟ್ಟೆ ಅಂಗಡಿಗೆ ಬಂದು 31,800 ರೂಪಾಯಿ ಮೌಲ್ಯದ ಬಟ್ಟೆ ಖರೀದಿಸಿ ವಂಚಿಸಿದ್ದರು. ಅಂಗಡಿ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಮಾ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ರಶ್ಮಿ, ಲೆಕ್ಕ ಪರಿಶೋಧಕ (ಸಿಎ) ಪರೀಕ್ಷೆಗೆ ಅಭ್ಯಾಸ ನಡೆಸುತ್ತಿದ್ದರು. ಅಕ್ಟೋಬರ್ 29ರಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಬೂಟಿಕ್‌ಗೆ ಆಗಮಿಸಿದ್ದ ರಶ್ಮಿ, ಸಂಪದ ಅವರಿಂದ ಬಟ್ಟೆ ಖರೀದಿಸಿದ್ದರು. ಸ್ನೇಹಾ ಹೆಸರಿನಲ್ಲಿ ಬಿಲ್ ಮಾಡಿಸಿದ್ದರು. ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಿರುವುದಾಗಿ ಮೊಬೈಲ್‌ನ ಸ್ಕ್ರೀನ್‌ಶಾಟ್ ತೋರಿಸಿದ್ದರು. ಆರಂಭದಲ್ಲಿ ಅಂಗಡಿ ಮಾಲೀಕರು ಹಣ ಪಾವತಿಯಾಗಿದೆ ಎಂದು ನಂಬಿಕೊಂಡಿದ್ದರು. ಆದರೆ, ಸಂಜೆಯಾದರೂ ಅಂಗಡಿಯ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿರಲಿಲ್ಲ. ನಂತರ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಮತ್ತೊಮ್ಮೆ ಕರೆ ಮಾಡಿದಾಗ ಪುರುಷರೊಬ್ಬರು ಮಾತನಾಡಿ ರಶ್ಮಿ ಎಂಬ ಹೆಸರಿನವರು ಯಾರೂ ಇಲ್ಲ ಎಂದು ಉತ್ತರಿಸಿದ್ದರು. ಆಕೆ ವಂಚನೆ ಮಾಡಿರುವುದನ್ನು ಮನಗಂಡ ಮಾಲೀಕರು ದೂರು ನೀಡಿದ್ದರು. ಕೊನೆಗೆ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ನಕಲಿ ಇಎಸ್‌ಐ ಕಾರ್ಡ್ ಸೃಷ್ಟಿಸಿ ವಂಚಿಸುತ್ತಿದ್ದ 6 ಮಂದಿ ಬಂಧನ
ನಕಲಿ ಕಂಪನಿ ಮೂಲಕ ಇ ಪೆಹಚಾನ್ ಕಾರ್ಡ್ ಸೃಷ್ಟಿಸಿ ಇಎಸ್ ಐ ಆಸ್ಪತ್ರೆಯ ಚಿಕಿತ್ಸಾ ಕಾರ್ಡ್ ಮಾಡಿಕೊಡುತ್ತಿದ್ದ ಆರು ಮಂದಿ ವಿರುದ್ಧ ಸಿಸಿಬಿ ಪೊಲೀಸರು ದೂರು ದಾಖಲಿಸಿದ್ದಾರೆ. ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಶಶಿಕಲಾ ಹಾಗೂ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೆಲವು ವಂಚಕರು ಬೇರೆ ಬೇರೆ ಹೆಸರಿನಲ್ಲಿ ನಕಲಿ ಕಂಪನಿ ಸೃಷ್ಟಿಸಿದ್ದರು. ಅದರಲ್ಲಿ ಕೆಲಸ ಮಾಡದೇ ಇರುವವರಿಗೂ ನಕಲಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವಂತೆ ಇ ಪೆಹಚಾನ್ ಕಾರ್ಡ್ ಸೃಷ್ಟಿಸುತ್ತಿದ್ದರು. ಆ ಕಾರ್ಡ್ ಸಹಾಯದಿಂದ ಆರೋಪಿಗಳು ಇಎಸ್‌ಐ ಆಸ್ಪತ್ರೆ ಚಿಕಿತ್ಸಾ ಕಾರ್ಡ್‌ಗಳನ್ನು ಮಾಡಿಕೊಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆಸ್ಪತ್ರೆ ಸಿಬ್ಬಂದಿಯೇ ಭಾಗಿ
ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪ್ರಕಾಶ್ ನಗರದ ನಿವಾಸಿ ಶ್ರೀಧರ್, ರಮೇಶ್, ಶಿವಗಂಗಾ, ಶ್ವೇತಾ, ಶಶಿಕಲಾ (ಲೆಕ್ಕ ಪರಿಶೋಧಕಿ) ಸೇರಿದಂತೆ ಇತರ ಆರೋಪಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡಲು ಈ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದಿದ್ದ ದೇವು ಮಾರ್ಕೆಟಿಂಗ್, ಭಾಸ್ಕರ್ ಎಂಟರ್‌ಪ್ರೈಸಸ್, ವಿಪಿಶ್ರೀ ಎಂಟರ್‌ಪ್ರೈಸಸ್, ಗೌರಿ ಮಾರ್ಕೆಟಿಂಗ್ ಹೆಸರಿನಲ್ಲಿ ನಕಲಿ ಕಂಪನಿ ಹುಟ್ಟು ಹಾಕಿದ್ದರು. ಆ ಕಂಪನಿಗಳಲ್ಲಿ ಸಾರ್ವಜನಿಕರು ಹಾಗೂ ರೋಗಿಗಳು ಕೆಲಸ ಮಾಡುತ್ತಿರುವಂತೆ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದರು ಎನ್ನವುದು ತನಿಖೆಯಿಂದ ತಿಳಿದು ಬಂದಿದೆ.
ಇಎಸ್‌ಐ ಮಾನ್ಯತೆ ಪಡೆದಿರುವ ಆಸ್ಪತ್ರೆಗಳಲ್ಲಿ ಅಧಿಕೃತ ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ತಪ್ಪಿಸಿ ನಕಲಿ ಇಎಸ್‌ಐ ಕಾರ್ಡ್ ಪಡೆದವರಿಗೆ ಚಿಕಿತ್ಸೆ ದೊರಕುವಂತೆ ಮಾಡುತ್ತಿದ್ದರು. ಅರ್ಹ ಕಾರ್ಮಿಕರಿಗೆ ಆಸ್ಪತ್ರೆಯ ಬೆಡ್, ಚಿಕಿತ್ಸೆ ಮತ್ತು ಔಷಧೋಪಚಾರ ಲಭ್ಯವಾಗದಂತೆ ಈ ಜಾಲ ಮೋಸ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ಬೆಂಗಳೂರು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ