Bengaluru Crime: ಬೆಂಗಳೂರಿನಲ್ಲಿ ಮತ್ತೊಂದು ಸೈಬರ್ ವಂಚನೆ; ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 5.67 ಕೋಟಿ ರೂ ಕಳೆದುಕೊಂಡ ಮಹಿಳೆ
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಲೆಕ್ಕಾಚಾರ ಹಾಕಿದ್ದ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಕೋಟಿ ಕೋಟಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತು ನಂಬಿ ಖಾಸಗಿ ಕಂಪನಿಯ ನಿವೃತ್ತ ಅಧಿಕಾರಿಯೊಬ್ಬರು 5.67 ಕೋಟಿ ರೂ. ಹೂಡಿಕೆ ಮಾಡಿ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗಿದ್ದಾರೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ಸಂತ್ರಸ್ತೆ ನೀಡಿರುವ ದೂರು ಆಧರಿಸಿ ಆರೋಪಿಗಳಾದ ವೀರೇಶ್ ಗುಪ್ತಾ, ಆಯಾನ್ ಜೋಸೆಫ್ ವಿರುದ್ಧ ಬೆಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾಗಿರಿ ಲೇಔಟ್ ನಿವಾಸಿಯಾಗಿರುವ ಈ ಸಂತ್ರಸ್ತ ಮಹಿಳೆ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಉದ್ದೇಶದಿಂದ ಡಿಮ್ಯಾಟ್ ಖಾತೆ ತೆರೆದಿದ್ದರು. ಫೇಸ್‌ಬುಕ್‌ನಲ್ಲಿ ಪ್ರಕಟವಾದ ಷೇರು ಮಾರುಕಟ್ಟೆ ಕುರಿತ ಲಿಂಕ್ ಒಂದನ್ನು ಕ್ಲಿಕ್ ಮಾಡಿದಾಗ, ವಿರೇಶ್ ಗುಪ್ತಾ ಎಂಬಾತನ ಮೊಬೈಲ್ ನಂಬರ್ ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ವಿರೇಶ್ ಎರಡು ಪ್ರತ್ಯೇಕ ನಂಬರ್‌ಗಳಿಂದ ಸಂದೇಶ ಕಳುಹಿಸಿ, ಆದಿತ್ಯಾ ಬಿರ್ಲಾ ಮತ್ತು ಸ್ಟಾಕ್ ಫೆನ್ಸಿ ಎಂಬ ಕಂಪನಿಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ವಿರೇಶ್ ಗುಪ್ತಾ ಇವರನ್ನು ಆದಿತ್ಯಾ ಬಿರ್ಲಾ, ಸ್ಟಾಕ್ ಫ್ರೆನ್ಸಿ ಎಂಬ 35 ಸದಸ್ಯರಿದ್ದ ವಾಟ್ಸಾಪ್ ಗುಂಪಿಗೆ ಸೇರ್ಪಡೆ ಮಾಡಿದ್ದಾನೆ. ಮತ್ತೊಂದು ಗುಂಪಿನಲ್ಲಿ ಆಯಾನ್ ಜೋಸೆಫ್ ಹಾಗೂ ಇತರರು ತಾವು ಹೇಳುವ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದಾರೆ. ಅದರಂತೆ 2024ರ ಡಿಸೆಂಬರ್ 10ರಿಂದ ಜನವರಿಗೆ 31ರವರೆಗೂ ವಿವಿಧ ಬ್ಯಾಂಕ್‌ಗಳ ಖಾತೆಗಳಿಂದ ರೂ. 2.37 ಕೋಟಿ ಸೇರಿದಂತೆ ಹಂತಹಂತವಾಗಿ ರೂ.5.67 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ತಮ್ಮ ಖಾತೆಯಲ್ಲಿದ್ದ ಹಣ ಖಾಲಿಯಾದ ನಂತರ ಪತಿ ಹಾಗೂ ಮಗನ ಖಾತೆಯಲ್ಲಿದ್ದ ಹಣವನ್ನೂ ಷೇರು ಖರೀದಿಗೆ ವರ್ಗಾಯಿಸಿದ್ದಾರೆ.
ಕೆಲವು ದಿನಗಳ ನಂತರ ಹೂಡಿಕೆ ಮಾಡಿದ್ದ ಹಣವನ್ನು ಹಿಂಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ವಂಚಕ ಆರೋಪಿಗಳು ಹೂಡಿಕೆ ಹೆಸರಿನಲ್ಲಿ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿರೇಶ್ ಗುಪ್ತಾ ಹಾಗೂ ಆಯಾನ್ ಜೋಸೆಫ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು, ಚೆನ್ನೈ ಹಾಗೂ ಕೇರಳದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸ್ಫೋಟಿಸುವ ಬೆದರಿಕೆ
ಬೆಂಗಳೂರು, ಚೆನ್ನೈ ಹಾಗೂ ಕೇರಳದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ವಿಮಾನಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸುವುದಾಗಿ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯು ಇ ಮೇಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವೊಂದನ್ನು ಬರೆದಿದ್ದೇನೆ. ಅದಕ್ಕೆ ಅವರು ಉತ್ತರ ನೀಡದಿದ್ದರೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ.
ಮಹಾಂತೇಶ್ ಎಂಬಾತನ ಹೆಸರಿನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ-ಮೇಲ್ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.
- ವರದಿ: ಎಚ್. ಮಾರುತಿ, ಬೆಂಗಳೂರು
ಇದನ್ನೂ ಓದಿ | Bengaluru Crime: ಮನೆ ಮೇಲೆ ದಾಳಿ ನಡೆಸಿ 11 ರೌಡಿಗಳ ವಿರುದ್ಧ ಎಫ್ಐಆರ್; ಚಾಕು ತೋರಿಸಿ ಸಿಗರೇಟ್ ಪಡೆದಿದ್ದ ರೌಡಿ ಬಂಧನ
