ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು; ಪ್ರವಾಸ ಮುಂದೂಡಲು ಹೆಚ್ಚಿದ ಬೇಡಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು; ಪ್ರವಾಸ ಮುಂದೂಡಲು ಹೆಚ್ಚಿದ ಬೇಡಿಕೆ

ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು; ಪ್ರವಾಸ ಮುಂದೂಡಲು ಹೆಚ್ಚಿದ ಬೇಡಿಕೆ

ಕರ್ನಾಟಕ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರಯಾಣಿಕರು ಮಹಾ ಕುಂಭಮೇಳಕ್ಕೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಅವರಲ್ಲಿ ಶೇ.25ರಷ್ಟು ಮಂದಿ ಟಿಕೆಟ್ ರದ್ದು ಅಥವಾ ಪ್ರಯಾಣ ಮುಂದೂಡಿಕೆಗೆ ಕೇಳುತ್ತಿದ್ದಾರೆ.

ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು
ಕಾಲ್ತುಳಿತ ನಂತರ ಪ್ರಯಾಗ್‌ರಾಜ್‌ ಕುಂಭಮೇಳಕ್ಕೆ ಹೋಗಲು ಶೇ 25 ರಷ್ಟು ಪ್ರಯಾಣಿಕರ ಹಿಂದೇಟು (PTI)

ಬೆಂಗಳೂರು: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರಾಜ್ಯದ ಬೆಳಗಾವಿಯ ನಾಲ್ವರು ಸೇರಿ 30 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ದುರಂತ ಸಂಭವಿಸಿದ ನಂತರ ಮಹಾ ಕುಂಭಮೇಳಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ವಾಯುಯಾನ ಮತ್ತು ರೈಲ್ವೆ ಮೂಲಗಳಿಂದ ತಿಳಿದುಬಂದಿದೆ. ಅದರಲ್ಲೂ ಬೆಳಗಾವಿಯ ನಾಲ್ವರು ಅಸುನೀಗಿದ ಹಿನ್ನೆಲೆಯಲ್ಲಿ ರಾಜ್ಯದಿಂದ ತೆರಳುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲಿಗೆ ಹೋಗಬೇಕು ಎಂದು ಅಂದುಕೊಂಡವರು ತಮ್ಮ ಪ್ರವಾಸವನ್ನು ಮುಂದೂಡಿರುವುದು ಮಾತ್ರವಲ್ಲ, ಈಗಾಗಲೇ ಟೂರ್ ಪ್ಯಾಕೇಜ್ ಸಂಸ್ಥೆಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದವರೂ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಅವರ ಪ್ರಕಾರ ಶೇ. 25ರಿಂದ 30ರಷ್ಟು ಮಂದಿ ಟಿಕೆಟ್ ಕ್ಯಾನ್ಸಲ್ ಮಾಡಿಸಿದ್ದಾರೆ.

ಟೂರ್ ಪ್ಯಾಕೇಜ್ ದರ 30 ಸಾವಿರದಿಂದ 1.50 ಲಕ್ಷ ರೂಪಾಯಿವರೆಗೆ ನಿಗದಿಯಾಗಿತ್ತು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್, ರೈಲು ಮತ್ತು ವಿಮಾನ ಸಂಚಾರಕ್ಕೆ ಪ್ರವಾಸವನ್ನು ಕಾಯ್ದಿರಿಸಿದ್ದರು. ಪ್ರಯಾಗ್‌ರಾಜ್‌ಗೆ ವಿಮಾನ ಪ್ರಯಾಣ ದರ ದುಪ್ಪಟ್ಟಾಗಿದ್ದರಿಂದ ಬಹುತೇಕ ಮಂದಿ ರೈಲು ಅಥವಾ ರಸ್ತೆ ಪ್ರಯಾಣವನ್ನೇ ಆಯ್ಕೆ ಮಾಡಿಕೊಂಡಿದ್ದರು. ಇಲ್ಲವೇ ವಾರಣಾಸಿ-ಅಲಹಾಬಾದ್‌ಗೆ ವಿಮಾನದಲ್ಲಿ ತೆರಳಿ ಅಲ್ಲಿಂದ ರಸ್ತೆ ಮೂಲಕ ಪ್ರಯಾಗ್‌ರಾಜ್‌ಗೆ ಹೋಗಲು ಕೆಲವರು ಯೋಜನೆ ರೂಪಿಸಿಕೊಂಡಿದ್ದರು ಎಂದು ಟೂರ್ ಪ್ಯಾಕೇಜ್ ಸಂಸ್ಥೆಯೊಂದರ ಮುಖ್ಯಸ್ಥರು ಹೇಳುತ್ತಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರಯಾಣಿಕರು ಪ್ರಯಾಗ್‌ರಾಜ್‌ಗೆ ಟಿಕೆಟ್ ಕಾಯ್ದಿರಿಸಿದ್ದರು. ಅವರಲ್ಲಿ ಶೇ.25ರಷ್ಟು ಮಂದಿ ಟಿಕೆಟ್ ರದ್ದು ಇಲ್ಲವೇ ಪ್ರಯಾಣ ಮುಂದೂಡಿಕೆಗೆ ಕೇಳುತ್ತಿದ್ದಾರೆ. ವಿಮಾನದ ಟಿಕೆಟ್ ಬುಕ್ ಮಾಡಿದ್ದವರು ಹಣ ಕಳೆದುಕೊಳ್ಳಲು ಇಷ್ಟಪಡದೆ ಪರ್ಯಾಯ ಸ್ಥಳಗಳಿಗೆ ಬುಕ್ಕಿಂಗ್ ಮಾಡಲು ಕೇಳುತ್ತಿದ್ದಾರೆ ಎಂದು ಹೇಳುತ್ತಾರೆ.

ಪ್ರಯಾಣ ರದ್ದು

ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಲ್ತುಳಿತ ಮತ್ತು ಅಲ್ಲಿನ ಜನದಟ್ಟಣೆ ನೋಡಿದ ನಂತರ ಪ್ರಯಾಗ್‌ರಾಜ್‌ಗೆ 8-10 ದಿನ ಪ್ರಯಾಣ ಮುಂದೂಡಲು ಬೇಡಿಕೆ ಹೆಚ್ಚುತ್ತಿದೆ. ಕೇವಲ ಕಾಲ್ತುಳಿತ ಮಾತ್ರ ಕಾರಣ ಅಲ್ಲ, ಅಲ್ಲಿ ಸೇರಿರುವ ಅಪಾರ ಜನ, ಊಟ ವಸತಿಗೆ ತೊಂದರೆ ಎದುರಾದೀತು ಎಂಬ ಭಯವೂ ಕಾರಣವಾಗಿದೆ. ಈಗಾಗಲೇ ಅಲ್ಲಿಗೆ ಹೋಗಿ ಬಂದವರ ಅನುಭವದ ಆಧಾರದ ಮೇಲೆ ಕೆಲವರು ಪ್ರಯಾಣವನ್ನು ರದ್ದು ಮಾಡಿದ್ದಾರೆ. ಅಲ್ಲಿ ಟೆಂಟ್‌ಗಳು, ಜಾಹೀರಾತುಗಳಲ್ಲಿ ತೋರಿಸುವ ಹಾಗೆ ಇರುವುದಿಲ್ಲ. ಊಟಕ್ಕೂ ತೊಂದರೆ ಇದ್ದೇ ಇದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಕಷ್ಟ ಎಂಬ ಅನುಭವದ ಮಾತುಗಳನ್ನು ಕೇಳಿದ ಮೇಲೆ ಪ್ರವಾಸವನ್ನು ಬದಲು ಮಾಡಿಕೊಂಡಿದ್ದೇವೆ. ವಾರಣಾಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗುವವರಿದ್ದೆವು. ಆದರೆ ಈಗ ವಾರಣಸಿಯಲ್ಲೇ ಗಂಗಾ ನದಿಯಲ್ಲಿ ಮಿಂದು ಬರಲು ತೀರ್ಮಾನಿಸಿದ್ದೇವೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಎಷ್ಟೇ ಕಷ್ಟವಾದರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಖಚಿತ

ಮತ್ತೊಬ್ಬರು ಪ್ರತಿಕ್ರಿಯಿಸಿ ಈ ಹಿಂದೆಯೇ ನಿರ್ಧಾರ ಮಾಡಿದ್ದಂತೆ ಪ್ರಯಾಗ್‌ರಾಜ್‌ಗೆ ಹೊರಟಿದ್ದೇವೆ. ಇದೊಂದು ಅಪರೂಪದ ಕುಂಭಮೇಳ. ಇಂತಹ ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ. ಎಷ್ಟೇ ಕಷ್ಟವಾದರೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುವುದಿಲ್ಲ. ಊಟ ವಸತಿಯಲ್ಲಿ ಏರು ಪೇರು ಆದರೂ ಅಡ್ಡಿಯಿಲ್ಲ ಎನ್ನುತ್ತಾರೆ. ಇದು ಕೇವಲ ಕರ್ನಾಟಕದ ಜನರ ಅಭಿಪ್ರಾಯ ಮಾತ್ರವಲ್ಲ, ಹತ್ತಾರು ರಾಜ್ಯಗಳ ಪ್ರವಾಸಿಗರೂ ಇದೇ ಅಭಿಪ್ರಾಯ ಹೊಂದಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

Whats_app_banner