Bengaluru Dharwad Vande Bharat: ಬೆಂಗಳೂರು-ಧಾರವಾಡ ವಂದೇಭಾರತ್ ರೈಲು ಜೂನ್ 27ರಂದು ಉದ್ಘಾಟನೆ: ವರ್ಚುಯಲ್ ಆಗಿ ಚಾಲನೆ ನೀಡುವ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಿಂದಲೇ ಬೆಂಗಳೂರು-ಧಾರವಾಡ ಸೇರಿದಂತೆ ಐದು ವಂದೇಭಾರತ್ ರೈಲುಗಳಿಗೆ ಮಂಗಳವಾರವೇ ಚಾಲನೆ ನೀಡುವರು. ಅಂದು ಮಧ್ಯಪ್ರದೇಶದಲ್ಲಿ ಇಂದೋರ್ ಭೋಪಾಲ್, ಜಬಲಪುರ್-ರಾಣಿ ಕಮಲಾಪತಿ, ಬಿಹಾರದಲ್ಲಿ ಪಾಟ್ನಾ-ರಾಂಚಿ, ಗೋವಾದಲ್ಲಿ ಮುಂಬೈ-ಮಡಗಾಂವ್ ವಂದೇಭಾರತ್ ರೈಲುಗಳೂ ಸೇವೆಯನ್ನು ಆರಂಭಿಸುತ್ತಿವೆ.
ಬೆಂಗಳೂರು: ಉತ್ತರ ಹಾಗೂ ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಬೆಂಗಳೂರು-ಧಾರವಾಡ ವಂದೇಭಾರತ್ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಜೂನ್ 27ರ ಮಂಗಳವಾರ ಈ ರೈಲು ತನ್ನ ಅಧಿಕೃತ ಸೇವೆಯನ್ನು ಆರಂಭಿಸಲಿದೆ. ಜೂನ್ 28ರಿಂದ ವಾಣಿಜ್ಯ ಸಂಚಾರ ಶುರುವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯಿಂದಲೇ ಬೆಂಗಳೂರು-ಧಾರವಾಡ ಸೇರಿದಂತೆ ಐದು ವಂದೇಭಾರತ್ ರೈಲುಗಳಿಗೆ ಮಂಗಳವಾರವೇ ಚಾಲನೆ ನೀಡುವರು. ಅಂದು ಮಧ್ಯಪ್ರದೇಶದಲ್ಲಿ ಇಂದೋರ್ ಭೋಪಾಲ್, ಜಬಲಪುರ್-ರಾಣಿ ಕಮಲಾಪತಿ, ಬಿಹಾರದಲ್ಲಿ ಪಾಟ್ನಾ-ರಾಂಚಿ, ಗೋವಾದಲ್ಲಿ ಮುಂಬೈ-ಮಡಗಾಂವ್ ವಂದೇಭಾರತ್ ರೈಲುಗಳೂ ಸೇವೆಯನ್ನು ಆರಂಭಿಸುತ್ತಿವೆ.
ಐದು ನಿಲ್ದಾಣ, ಆರೂವರೆ ಗಂಟೆ ಸಂಚಾರ
ಬೆಂಗಳೂರು -ಧಾರವಾಡ ವಂದೇ ಭಾರತ್ ರೈಲು ಐದು ನಿಲ್ದಾಣಗಳಲ್ಲಿ ನಿಲುಗಡೆ ಮಾತ್ರ ಅವಕಾಶ ನೀಡಲಾಗಿದೆ. ಆರೂವರೆ ಗಂಟೆಯಲ್ಲಿಯೇ ಬೆಂಗಳೂರಿನಿಂದ ಧಾರವಾಡ( ರೈಲು ಸಂಖ್ಯೆ 20661) ಹಾಗೂ ಧಾರವಾಡದಿಂದ ಬೆಂಗಳೂರಿಗೆ( ರೈಲು ಸಂಖ್ಯೆ 20662) ಸಂಚರಿಸಲಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ತಲುಪಲು ಆರು ಗಂಟೆ ಸಾಕು. ಅದೇ ರೀತಿ ದಾವಣಗೆರೆಗೆ ಬರೀ ಮೂರೂವರೆ ಗಂಟೆಯಲ್ಲಿ ಬರಲಿದ್ದು, ಬೆಂಗಳೂರಿಗೆ ತಲುಪಲು ನಾಲ್ಕು ಗಂಟೆ ತೆಗೆದುಕೊಳ್ಳಲಿದೆ. ಒಟ್ಟು ಎಂಟು ಕೋಚ್‌ಗಳು ಇರಲಿವೆ. ಮಂಗಳವಾರ ರೈಲು ಸಂಚಾರ ಇರುವುದಿಲ್ಲ.
ಸಮಯ ಹೇಗಿದೆ?
ಬೆಳಿಗ್ಗೆ 5.45ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟು 5.55ಕ್ಕೆ ಯಶವಂತಪುರಕ್ಕೆ ಬರಲಿದೆ. ಯಶವಂತಪುರದಿಂದ ಬೆಳಿಗ್ಗೆ 5.57ಕ್ಕೆ ಹೊರಟು ದಾವಣಗೆರೆ ಬೆಳಗ್ಗೆ 9.15ಕ್ಕೆ ತಲುಪಲಿದೆ. ದಾವಣಗೆರೆಯಿಂದ ಬೆಳಿಗ್ಗೆ 9.17ಕ್ಕೆ ಹೊರಟು ಹುಬ್ಬಳ್ಳಿಗೆ ಬೆಳಿಗ್ಗೆ 11.30ಕ್ಕೆ ತಲುಪುವುದು. ಅಲ್ಲಿಂದ 11.35ಕ್ಕೆ ಹೊರಟು ಧಾರವಾಡವನ್ನು ಮಧ್ಯಾಹ್ನ 12. 10ಕ್ಕೆ ತಲುಪುವುದು. ಮಧ್ಯಾಹ್ನ 1.15ಕ್ಕೆ ಧಾರವಾಡವನ್ನು ವಂದೇ ಭಾರತ್ ರೈಲು ಬಿಡಲಿದ್ದು. ಹುಬ್ಬಳ್ಳಿಗೆ ಮಧ್ಯಾಹ್ನ 1.35ಕ್ಕೆ ಆಗಮಿಸುವುದು. ಹುಬ್ಬಳ್ಳಿಯಿಂದ ಮಧ್ಯಾಹ್ನ 1.40 ಹೊರಟು ದಾವಣಗೆರೆಗೆ ಮಧ್ಯಾಹ್ನ 3.38ಕ್ಕೆ ತಲುಪುವುದು. ಮಧ್ಯಾಹ್ನ 3.40ಕ್ಕೆ ದಾವಣಗೆರೆ ಬಿಟ್ಟು ಯಶವಂತಪುರಕ್ಕೆ ಸಂಜೆ 7.13ಕ್ಕೆ ಬರುವುದು. ಯಶವಂತಪುರದಿಂದ ಸಂಜೆ 7.15ಕ್ಕೆ ಹೊರಟು ಬೆಂಗಳೂರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ರಾತ್ರಿ 7.45ಕ್ಕೆ ತಲುಪಲಿದೆ.
ಧಾರವಾಡದಲ್ಲಿ ಉದ್ಘಾಟನೆ
ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಮಂಗಳವಾರ ಧಾರವಾಡದಿಂದ ಸೇವೆ ಆರಂಭಿಸಲಿದೆ. ಅಂದು ಪ್ರಧಾನಿ ಉದ್ಘಾಟನೆ ಬಳಿಕ ಬೆಳಿಗ್ಗೆ 10.30ಕ್ಕೆ ಧಾರವಾಡದಿಂದ ಹೊರಡಲಿದೆ. ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ. ಚಿಕ್ಕಜಾಜೂರು, ಬೀರೂರು, ಕಡೂರು, ಅರಸಿಕೆರೆ, ತಿಪಟೂರು, ತುಮಕೂರಿನಲ್ಲಿ ಅಂದು ನಿಲುಗಡೆಗೆ ಅವಕಾಶ ನೀಡಲಾಗಿದೆ. ಕೆಲವು ಕಡೆ ಉದ್ಘಾಟನೆ ಕಾರ್ಯಕ್ರಮಗಳನ್ನೂ ಆಯಾ ನಿಲ್ದಾಣದವರು ಹಮ್ಮಿಕೊಂಡಿದ್ದಾರೆ. ಮೊದಲ ದಿನ ರೈಲು ಪ್ರಯಾಣ ಸಂಪೂರ್ಣ ಉಚಿತವಾಗಿರಲಿದೆ.
ದರ ಎಷ್ಟು?
ಬೆಂಗಳೂರು-ಧಾರವಾಡ ನಡುವೆ ರೈಲು ಸಂಚಾರಕ್ಕೆ 1200 ರೂ. ಆಗಲಿದ್ದು, ಬೆಂಗಳೂರು-ದಾವಣಗೆರೆ ನಡುವೆ 900 ರೂ. ಆಗಬಹುದು. ದರ ಕುರಿತು ರೈಲ್ವೆಯಿಂದ ಪ್ರಕಟಣೆ ಬರಬಹುದು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ವಾರವೇ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಮುಗಿದಿತ್ತು. ಆರು ಗಂಟೆಗಿಂತ ಕಡಿಮೆ ಅವಧಿಯಲ್ಲಿಯೇ ಎರಡು ಕಡೆಯ ದೂರವನ್ನು ರೈಲು ಕ್ರಮಿಸಿತ್ತು.
ಇದನ್ನೂ ಓದಿರಿ..
ವಿಭಾಗ