ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್, ಅಧಿಕಾರಿಗಳ ಕಚೇರಿ ಮೇಲೆ ಇಡಿ ದಾಳಿ
ಕೋಟಿ ಕೋಟಿ ರೂಪಾಯಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಹಾಗೂ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ 'ಇಡಿ' ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸುವಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯವು (ಇಡಿ) ಮಂಗಳವಾರ (ಜನವರಿ 7) ಬಿಬಿಎಂಪಿಯ ಹಲವು ಅಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿದೆ. 2016–2019ರ ಅವಧಿಯಲ್ಲಿ ಸುಮಾರು 960 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಕೊಳವೆಬಾವಿಗಳನ್ನು ಕೊರೆಸಲಾಗಿತ್ತು. ಜೊತೆಗೆ ನೀರು ಶುದ್ಧೀಕರಣ ಘಟಕಗಳನ್ನು ಆರಂಭಿಸಲಾಗಿತ್ತು. ಈ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂದು 2021ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಯಲಹಂಕ, ಮಹದೇವಪುರ, ದಾಸರಹಳ್ಳಿ, ಮಹದೇವಪುರ ವ್ಯಾಪ್ತಿಯಲ್ಲಿ 9,588 ಕೊಳವೆ ಬಾವಿ ಕೊರೆಸಲಾಗಿದೆ.
ಈ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್, ಎಂಜಿನಿಯರ್‌ಗಳ ನಿವಾಸಗಳು ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮುಂಜಾನೆ 7 ಗಂಟೆಯಿಂದ ಆರಂಭವಾದ ಶೋಧಕಾರ್ಯ ಈಗಲೂ ಮುಂದುವರೆದಿದೆ. ಇಡಿ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದು, ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗುತ್ತಿದೆ.
ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರ ಸಮ್ಮುಖದಲ್ಲಿ 2016ರಿಂದ ಕೊರೆಸಿರುವ ಬೋರ್‌ವೆಲ್, ಆರ್‌ಒ ಪ್ಲಾಂಟ್‌ಗಳ ಬಗ್ಗೆ ಇಡಿ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ಅವರ ನಿವಾಸದಲ್ಲಿ 45 ಕೋಟಿ ರೂಪಾಯಿಯಷ್ಟು ನಗದು ಪತ್ತೆಯಾಗಿತ್ತು. ಈ ಹಣಕ್ಕೂ ಪಾಲಿಕೆಯ ಅವ್ಯವಹಾರಕ್ಕೂ ಸಂಬಂಧ ಇದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.
ದಾಖಲೆ ಒದಗಿಸಲು ಹೆಣಗಾಟ
ಪಾಲಿಕೆಯು 2016, 2017, 2018ನೇ ಸಾಲಿನಲ್ಲಿ 968 ಕೋಟಿ ಖರ್ಚು ಮಾಡಿ 9558 ಕೊಳವೆ ಬಾವಿಗಳನ್ನು ಕೊರೆಸಿತ್ತು. ನಂತರ 976 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ 9,588 ಕೊಳವೆಬಾವಿಗಳಲ್ಲಿ ಕನಿಷ್ಠ ಒಂದು ಸಾವಿರ ಕೊಳವೆಬಾವಿಗಳ ದಾಖಲೆಗಳನ್ನು ಒದಗಿಸಲೂ ಬಿಬಿಎಂಪಿ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ವಿವಿಧ ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 9,558 ಕೊಳವೆ ಬಾವಿ ಕೊರೆಯುವ ಯೋಜನೆ ಇದಾಗಿದೆ. ಒಂದು ಆರ್‌ಒ ಪ್ಲಾಂಟ್‌ಗೆ 25ರಿಂದ 28 ಲಕ್ಷ ರೂಪಾಯಿ ಬಿಲ್ ಮಾಡಲಾಗಿದೆ. ಕೇವಲ 100 ಅಡಿ ಆಳದ ಕೊಳವೆಬಾವಿ ಕೊರೆದು 2 ಸಾವಿರ ಅಡಿ ಕೊರೆಯಲಾಗಿದೆ ಎಂದು ದಾಖಲೆ ಹುಟ್ಟು ಹಾಕಲಾಗಿದೆ. ಈ ಯೋಜನೆಗೆ 956 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ
ಈ ಸಂಬಂಧ 2019ರಲ್ಲೇ ಎಸಿಬಿಗೆ ಬಿಜೆಪಿ ದೂರು ನೀಡಿತ್ತು. ಪಾಲಿಕೆಯ 25ಕ್ಕೂ ಅಧಿಕ ಅಧಿಕಾರಿಗಳಿಗೆ ಇಡಿ ನೋಟೀಸ್ ನೀಡಿತ್ತು. ಕೆಲವು ಕಡೆ ಕೊಳವೆ ಬಾವಿ ಕೊರೆಸದೆಯೇ ಬಿಲ್ ಮಾಡಿರುವುದು ಪತ್ತೆಯಾಗಿದೆ. ನಂತರ ಈ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಂತಿಮವಾಗಿ ಲೋಕಾಯುಕ್ತ 2022ಲ್ಲಿ ಈ ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು.
ವರದಿ: ಎಚ್.ಮಾರುತಿ, ಬೆಂಗಳೂರು.