ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಹೆಸರಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣ; ಆರೋಪಿ ಐಶ್ವರ್ಯಾ ಗೌಡ ದಂಪತಿ ಬಿಡುಗಡೆಗೆ ಕೋರ್ಟ್ ಆದೇಶ
ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಹೆಸರಿನಲ್ಲಿ ಬಹುಕೋಟಿ ಚಿನ್ನ ಖರೀದಿ ವಂಚನೆ ಪ್ರಕರಣದ ಆರೋಪಿ ದಂಪತಿ ಬಿಡುಗಡೆಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಪ್ರತ್ಯೇಕ ಪ್ರಕರಣದಲ್ಲಿ ಬೆಲೆ ಬಾಳುವ ದ್ವಿಚಕ್ರ ವಾಹನ ಕಳ್ಳನ ಬಂಧಿಸಿದ ಪೊಲೀಸರು 15 ಲಕ್ಷ ರೂಪಾಯಿ ಮೌಲ್ಯದ ವಾಹನಗಳ ಜಪ್ತಿ ಮಾಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಕೋಟಿ, ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಕೆ.ಎನ್.ಹರೀಶ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ. ಮಾಜಿ ಸಂಸದ ಡಿಕೆ ಶುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ, ರಾಜ್ಯದ ಹಲವು ಚಿನ್ನಾಭರಣ ಅಂಗಡಿಗಳಿಗೆ ವಂಚಿಸಿದ್ದರು. ಈ ಸಂಬಂಧ ಜೈಲಿನಲ್ಲಿರುವ 32 ವರ್ಷದ ಐಶ್ವರ್ಯಾ ಗೌಡ ಹಾಗೂ ಅವರ ಪತಿ ಕೆ.ಎನ್.ಹರೀಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ
ವಿಚಾರಣೆ ವೇಳೆ ಐಶ್ವರ್ಯಾ ಗೌಡ ಹಾಗೂ ಹರೀಶ್ ಪರ ಹಾಜರಾಗಿದ್ದ ಹಿರಿಯ ವಕೀಲ ಸಂದೇಶ್ ಜೆ.ಚೌಟ ಹಾಗೂ ಎಸ್. ಸುನಿಲ್ ಕುಮಾರ್ ಅವರು, ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟಿಸ್ ಅನುಸಾರ ಅರ್ಜಿದಾರರು ಸ್ವ ಇಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದಾರೆ. ಆದರೆ ಪೊಲೀಸರು ಏಕಾಕಿ ಅವರನ್ನು ಬಂಧಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಆರೋಪಿಗಳಿಗೆ ಪೊಲೀಸರು ಕಾನೂನುಬದ್ಧವಾಗಿ ನೀಡಬೇಕಾದ ಬಂಧನಕ್ಕೆ ಕಾರಣವಾಗುವ ಅಂಶಗಳನ್ನು ಲಿಖಿತ ರೂಪದಲ್ಲಿ ಒದಗಿಸಿಲ್ಲ. ಇದು ಅರ್ಜಿದಾರರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದ್ದು, ಅವರ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಇಬ್ಬರನ್ನೂ ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ವಾದಿಸಿದರು.
ಈ ವಾದಕ್ಕೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಅಂಗಡಿ ಮಾಲೀಕರಾದ ವನಿತಾ ಎಸ್. ಐತಾಳ್ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲ ಪಿ.ಅರವಿಂದ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದೊಂದು ಬಹುಕೋಟಿ ರೂಪಾಯಿ ವಂಚನೆಯ ಹಗರಣವಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸುವ ಪೂರ್ವ ಮತ್ತು ನಂತರ ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಯಗಳನ್ನು ಅನುಸರಿಸಿದ್ದಾರೆ ಎಂದು ವಾದಿಸಿದರು.
ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಕುರಿತು ವಾದ ಮಂಡಿಸಿದ್ದು ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಹಾಗೆಯೇ ಇದು ಪ್ರತಿಯೊಬ್ಬ ನಾಗರೀಕನ ಸಾಂವಿಧಾನಿಕ ಹಕ್ಕಿನ ರಕ್ಷಣೆ ವಿಷಯವೂ ಆಗಿದೆ. ಆದ್ದರಿಂದ, ಈ ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ಅರ್ಜಿದಾರರು ಕಾಲಕಾಲಕ್ಕೆ ತನಿಖೆಗೆ ಸಹಕರಿಸಬೇಕು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿ ಕೂಡಲೇ ಇಬ್ಬರನ್ನೂ ಬಿಡುಗಡೆ ಮಾಡುವಂತೆ ಆದೇಶ ನೀಡಿತು.
ಬೆಲೆ ಬಾಳುವ ದ್ವಿಚಕ್ರ ವಾಹನ ಕಳ್ಳನ ಬಂಧನ; ರೂ. 15 ಲಕ್ಷ ಮೌಲ್ಯದ ವಾಹನಗಳ ಜಪ್ತಿ
ಬೆಂಗಳೂರಿನ ವಿವಿಧ ಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿ, ಆತನಿಂದ 15 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಗಡಿ ತಾಲೂಕು ತಾವರೆಕೆರೆ ನಿವಾಸಿ ಸಿರಾಜ್ ಶೇಖ್ ಬಂಧಿತ ಆರೋಪಿ. ಈತನಿಂದ ಏಳು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ವಾಹನ ಕಳುವಾಗಿದೆ ಎಂದು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮತ್ತು ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಆರೋಪಿಯನ್ನು ಕೃಷ್ಣಮೂರ್ತಿ ಲೇ ಔಟ್‌ನಲ್ಲಿ ಬಂಧಿಸಿದ್ದಾರೆ .
ಆರೋಪಿಯು ತನ್ನ ಮತ್ತಿಬ್ಬರು ಸಹಚರರ ಜತೆ ಸೇರಿಕೊಂಡು ಮನೆ ಹಾಗೂ ಪೇಯಿಂಗ್ ಗೆಸ್ಟ್ ಹೌಸ್‌ಗಳ ಮುಂಭಾಗ ನಿಲ್ಲಿಸುತ್ತಿದ್ದ ಹ್ಯಾಂಡಲ್ ಲಾಕ್ ಹಾಕದ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಕದ್ದ ವಾಹನಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ವಾಹನಗಳ ದಾಖಲೆ ಇಲ್ಲದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳನ್ನು ಕೆಲವೇ ಸಾವಿರ ರೂ.ಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಷಾರಾಮಿ ಜೀವನ ನಡೆಸಲು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿ ಕಳ್ಳತನ ಮಾಡಲು ಆರಂಭಿಸಿದ್ದ. ಈತನ ಸಹಚರರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ ಹಾಗೂ ಹಲವು ಕಡೆ ಬಚ್ಚಿಟ್ಟಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈತನ ಬಂಧನದಿಂದ ಸುದ್ದಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಏಳು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆ ನಡೆಯುತ್ತಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)