ಚಿನ್ನ ಕಳ್ಳಸಾಗಣೆ ಕೇಸ್: ನಟಿ ರನ್ಯಾ ರಾವ್ ಸ್ನೇಹಿತ ನಟ ತರುಣ್ ರಾಜು ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ಕೋರ್ಟ್, 5 ಮುಖ್ಯ ಅಂಶಗಳು
Gold Smuggling Case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್ ಸ್ನೇಹಿತ ತರುಣ್ ರಾಜು ಅಲಿಯಾಸ್ ತೆಲುಗು ನಟ ವಿರಾಟ್ ಕೊಂಡೂರು ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಈ ಚಿನ್ನ ಕಳ್ಳಸಾಗಣೆ ಕೇಸ್‌ನ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Gold Smuggling Case: ನಟಿ ರನ್ಯಾ ರಾವ್ (ಹರ್ಷವರ್ಧಿನಿ) ಜತೆಗೆ ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ಎರಡನೇ ಆರೋಪಿಯಾಗಿ ಬಂಧಿತರಾಗಿರುವ ತರುಣ್ ರಾಜು ಅಲಿಯಾಸ್ ತೆಲುಗು ನಟ ವಿರಾಟ್ ಕೊಂಡೂರು ಅವರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆ ಅರ್ಜಿಯನ್ನು ವಜಾಗೊಳಿಸಿದೆ.
ಆರ್ಥಿಕ ಅಪರಾಧ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ ಚನ್ನಬಸಪ್ಪ ಗೌಡರ್ ಅವರು ಬುಧವಾರ ಜಾಮೀನು ನಿರಾಕರಿಸಿ, ತರುಣ್ ರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದರು. ರೆವಿನ್ಯೂ ಗುಪ್ತಚರ ಅಧಿಕಾರಿಗಳು (ಡಿಆರ್‌ಐ) ಮಾರ್ಚ್ 9ರಂದು ತರುಣ್ ಅವರನ್ನು ಬಂಧಿಸಿ, ಐದು ದಿನ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇದರಂತೆ, ತರುಣ್ ರಾಜು ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಚಿನ್ನ ಕಳ್ಳಸಾಗಣೆ ಕೇಸ್ ವಿಶೇಷ ನ್ಯಾಯಾಲಯದಲ್ಲಿ ಏನಾಯಿತು
ಆರೋಪಿ ತರುಣ್ ರಾಜು ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಡಿಆರ್‌ಐ ಪರ ಎಸ್‌ಪಿಪಿ (ವಿಶೇಷ ಸರ್ಕಾರಿ ಅಭಿಯೋಜಕ) ಮಧು ಎನ್. ರಾವ್ ಅವರು ಚಿನ್ನ ಕಳ್ಳಸಾಗಣೆ ಕೇಸ್ ಹಾಗೂ ದುಬೈ ಪ್ರಯಾಣದಲ್ಲಿ ರನ್ಯಾ ರಾವ್ (ಹರ್ಷವರ್ಧಿನಿ) ಹಾಗೂ ತರುಣ್ ರಾಜು ಅವರ ನಂಟನ್ನು ನ್ಯಾಯಾಲಯಕ್ಕೆ ವಿವರಿಸಿದರು.
2023 ಹಾಗೂ 2025ರ ನಡುವಣ ಅವಧಿಯಲ್ಲಿ ರನ್ಯಾ ರಾವ್ ಒಟ್ಟು 26 ಬಾರಿ ತರುಣ್ ರಾಜು ಒಟ್ಟಿಗೆ ದುಬೈಗೆ ಹೋಗಿ ಬಂದಿದ್ದಾರೆ. ಮಾರ್ಚ್ 3ರಂದು ರನ್ಯಾ ಅವರು ತರುಣ್‌ಗೂ ದುಬೈಗೆ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿದ್ದು, ಇಬ್ಬರೂ ಒಟ್ಟಿಗೆ ತೆರಳಿದ್ದರು. ತರುಣ್, ಅಲ್ಲಿಂದ ಚಿನ್ನ ಖರೀದಿಸಿ ವಾಪಸ್ ಬರುವಾಗ ದುಬೈ ವಿಮಾನ ನಿಲ್ದಾಣದಲ್ಲಿ ಜಿನೀವಾಕ್ಕೆ ತೆರಳುತ್ತಿರುವುದಾಗಿ ಮಾಹಿತಿ ನಮೂದಿಸಿದ್ದರು. ಆದರೆ, ಚಿನ್ನವನ್ನು ರನ್ಯಾಗೆ ನೀಡಿದ್ದ ತರುಣ್, ಹೈದರಾಬಾದ್‌ಗೆ ತೆರಳಿದ್ದರು’ ಎಂದು ಎಸ್‌ಪಿಪಿ (ವಿಶೇಷ ಸರ್ಕಾರಿ ಅಭಿಯೋಜಕ) ಮಧು ಎನ್. ರಾವ್ ನ್ಯಾಯಾಲಯಕ್ಕೆ ಹೇಳಿದರು.
‘ರನ್ಯಾ ರಾವ್ (ಹರ್ಷವರ್ಧಿನಿ) ಅವರ ಮೊಬೈಲ್ ಪರಿಶೀಲಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವಿಶ್ಲೇಷಣಾ ವರದಿಯಲ್ಲಿ ತರುಣ್ ಜತೆ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಸಾಕ್ಷ್ಯ ದೊರೆತಿದೆ. ತರುಣ್ ರಾಜು ಅಮೆರಿಕ ಪೌರತ್ವ ಹೊಂದಿದ್ದಾರೆ. ರನ್ಯಾ ರಾವ್ ಬಂಧನವಾಗುತ್ತಿದ್ದಂತೆ ಮಾರ್ಚ್ 8ರಂದು ಅಮೆರಿಕಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಆರೋಪಿ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದರಿಂದ ಅನಿವಾರ್ಯವಾಗಿ ಅವರು ಬೆಂಗಳೂರಿಗೆ ಹಿಂದಿರುಗಿದ್ದರು. ಆರೋಪಿ ತರುಣ್ ರಾಜು ಅವರು ಅಮೆರಿಕ ಪೌರತ್ವ ಹೊಂದಿರುವುದು ಹಾಗೂ ನಿರಂತರ ವಿದೇಶ ಪ್ರವಾಸಗಳ ಹಿಂದೆ ಹಲವು ಅನುಮಾನಗಳಿದ್ದು, ಈ ಬಗ್ಗೆಯೂ ಹೆಚ್ಚಿನ ತನಿಖೆ ಮುಂದುವರಿದಿದೆ’ ಎಂದು ಎಸ್‌ಪಿಪಿ (ವಿಶೇಷ ಸರ್ಕಾರಿ ಅಭಿಯೋಜಕ) ಮಧು ಎನ್. ರಾವ್ ಹೇಳಿದರು.
ತರುಣ್ ರಾಜು ಪರ ವಾದ ಮಂಡಿಸಿದ ವಕೀಲರು, ‘ತರುಣ್ ರಾಜು ಅವರ ಬಂಧನದ ವೇಳೆ ಡಿಆರ್‌ಐ, ಬಂಧನದ ನಿಯಮಗಳನ್ನು ಉಲ್ಲಂಘಿಸಿದೆ. ರನ್ಯಾ ರಾವ್ ಹಾಗೂ ತರುಣ್ ರಾಜು ಒಟ್ಟಿಗೆ ಹಲವು ಬಾರಿ ದುಬೈಗೆ ಹೋಗಿ ಬಂದಿದ್ದಾರೆ ಎನ್ನುವ ಮಾತಿನಲ್ಲಿ ಸತ್ಯವಿದೆ ಎಂದಾದರೆ, ಆಗೆಲ್ಲ ಡಿಆರ್‌ಐ ಏನು ಮಾಡುತ್ತಿತ್ತು’ ಎಂದು ಸವಾಲು ಹಾಕಿರುವುದಾಗಿ ಮೂಲಗಳು ತಿಳಿಸಿವೆ.
ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ನಟಿ ರನ್ಯಾ ರಾವ್ (ಹರ್ಷವರ್ಧಿನಿ) ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರು ನಗರದ ಸೆಷನ್ಸ್ ನ್ಯಾಯಾಲಯ ಶುಕ್ರವಾರಕ್ಕೆ (ಮಾರ್ಚ್ 21) ಮುಂದೂಡಿದೆ. ಆಕ್ಷೇಪಣೆ ಸಲ್ಲಿಸಲು ಡಿಆರ್‌ಐ ಪರ ವಕೀಲರು ಕಾಲಾವಕಾಶ ಕೇಳಿದ ಕಾರಣ, ನ್ಯಾಯಾಧೀಶರು ವಿಚಾರಣೆ ಮುಂದೂಡಿ ಆದೇಶ ನೀಡಿದ್ದರು.
