ಉದ್ಯೋಗದ ಭರವಸೆ ನೀಡಿ 1 ಕೋಟಿ ವಂಚಿಸಿದ್ದ ಮುಖ್ಯಪೇದೆ ಅಮಾನತು; ಗೆಳೆಯನ ಮಗಳ ಮೇಲೆ ಅತ್ಯಾಚಾರ ಎಸಗಿದ್ದವ ಬಂಧನ
Karnataka Crime: ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿರುವ ಮುಖ್ಯ ಪೇದೆಯೊಬ್ಬರು ಅಮಾನತು ಆಗಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸ್ನೇಹಿತನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನವಾಗಿದೆ. (ಎಚ್ ಮಾರುತಿ)

ಬೆಂಗಳೂರು: ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸುಮಾರು 1 ಕೋಟಿ ರೂ. ವಂಚಿಸಿದ್ದ ಪೊಲೀಸ್ ಮುಖ್ಯ ಪೇದೆಯೊಬ್ಬರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಪ್ರಶಾಂತ್ ಕುಮಾರ್ ಎಚ್ಆರ್ ಎಂಬಾತನೇ ವಂಚಕ ಪೊಲೀಸ್ ಹೆಡ್ ಕಾನ್ಸ್ಟೇಬಲ್. ನಗರ ಶಸಸ್ತ್ರಪಡೆಯಲ್ಲಿ ಮುಖ್ಯ ಪೇದೆಯಾಗಿರುವ ಈತ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಉಮೇಶ್ ಕುಮಾರ್ ಅವರ ಕಾರು ಚಾಲಕನಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೋಪಿ ಪ್ರಶಾಂತ್, ಭಾಗ್ಯ ಎಂಬುವರಿಗೆ ನಿಮ್ಮ ಇಬ್ಬರೂ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 60 ಲಕ್ಷ ರೂ. ಮೌಲ್ಯದ 857 ಗ್ರಾಂ ಚಿನ್ನಾಭರಣ ಮತ್ತು 47 ಲಕ್ಷ ರೂ. ವಂಚಿಸಿದ್ದಾನೆ. ಭಾಗ್ಯ ಅವರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ನಿವಾಸಿಯಾದ ಭಾಗ್ಯ ಅವರು ಪ್ರಶಾಂತ್ ಮತ್ತು ಆತನ ಸಹಚರರು 2021ರ ನವಂಬರ್ ನಿಂದ ಇದುವರೆಗೂ ಹಂತ ಹಂತವಾಗಿ ಹಣ ಸಂಗ್ರಹಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಶಾಂತ್ ಸಹಚರರಾದ ದೀಪಾ ಮತ್ತು ಮಂಜುನಾಥ್ ಅವರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಈತ 30 ಮತ್ತು 36 ವರ್ಷದ ತನ್ನ ಇಬ್ಬರು ಮಕ್ಕಳಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ವರ್ಷದ ಜೂನ್ 12ರಂದು ಪ್ರಶಾಂತ್ ಕುಮಾರ್ ಭಾಗ್ಯ ಅವರ ಮನೆಗೆ ಆಗಮಿಸಿ ನಿಮ್ಮ ಇಬ್ಬರೂ ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ ಎಂದು ನಕಲಿ ಆಯ್ಕೆ ಪಟ್ಟಿಯನ್ನು ತೋರಿಸಿ ಅಂದೂ 5 ಲಕ್ಷ ರೂ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ವಿಚಾರಿಸಿದಾಗ ನಿಮ್ಮ ಮಕ್ಕಳು ಆಯ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆಗ ಕೊಟ್ಟಿರುವ ಹಣ ಹಿಂತಿರುಗಿಸುವಂತೆ ಕೇಳಿದಾಗ ಪ್ರಶಾಂತ್ 58 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ. ಆದರೆ ಚೆಕ್ ಬೌನ್ಸ್ ಆಗಿದೆ. ಮತ್ತೆ ಸಂಪರ್ಕಿಸಿದಾಗ ಪ್ರಶಾಂತ್ ಹಣ ಮರಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಶಾಂತ್ ಕುಮಾರ್ ತಲೆ ಮರೆಸಿಕೊಂಡಿದ್ದು ಆತನನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತನ ಪುತ್ರಿಯ ಮೇಲೆ ಅತಾಚಾರ; ಆರೋಪಿ ಬಂಧನ
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೋಟದಗುಡ್ಡದಹಳ್ಳಿಯ 44 ವರ್ಷದ ನಿವಾಸಿ ರವಿ ಎಂಬಾತನೇ ಆರೋಪಿ. ಈತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಸಾಲ ಪಡೆದಿರುತ್ತಾರೆ. ಈ ಪೈಕಿ 30 ಸಾವಿರ ರೂ. ಸಾಲ ತೀರಿಸಿ ಉಳಿದ ಹಣ ಮತ್ತು ಬಡ್ಡಿಯನ್ನು ತೀರಿಸಿರುವುದಿಲ್ಲ. ಸಾಲ ವಸೂಲಿ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಬರುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬಾಲಕಿ ಮೇಲೆ ಅತ್ಯಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.