ಉತ್ತರ ಬೆಂಗಳೂರು ಕ್ಯಾಸನಹಳ್ಳಿ ಅಪಾರ್ಟ್‌ಮೆಂಟಲ್ಲಿ ಹೆಚ್ಚಾಗಿದೆ ಭೇದಿ ಸಮಸ್ಯೆ, ಮಳೆ ನೀರು ಟ್ಯಾಂಕ್ ಮಲಿನಗೊಂಡು ನೀರು ಕಲುಷಿತವಾಗಿರುವ ಶಂಕೆ
Diarrhoea Cases: ಉತ್ತರ ಬೆಂಗಳೂರು ಕ್ಯಾಸನಹಳ್ಳಿಯ ಪೂರ್ವ ಪಾಮ್ ಬೀಚ್ ನಿವಾಸಿಗಳು ಕಲುಷಿತ ನೀರು ಸೇವಿಸಿ ಭೇದಿ ಸಮಸ್ಯೆ ಎದುರಿಸಿದ್ದಾರೆ. ಬಿಬಿಎಂಪಿ ಮಳೆ ನೀರು ಸಂಗ್ರಹದ ಟ್ಯಾಂಕ್‌ನಿಂದ ನೀರು ಪೂರೈಸುತ್ತಿದ್ದು, ಅದು ಮಲಿನಗೊಂಡಿರುವ ಶಂಕೆ ವ್ಯಕ್ತವಾಗಿದೆ.

Diarrhoea Cases: ಉತ್ತರ ಬೆಂಗಳೂರು ಭಾಗದ ಕ್ಯಾಸನಹಳ್ಳಿಯ ಪೂರ್ವ ಪಾಮ್ ಬೀಚ್ ನಿವಾಸಿಗಳು ಕಲುಷಿತ ನೀರು ಸೇವಿಸಿ ಭೇದಿ ಸಮಸ್ಯೆ ಎದುರಿಸಿದ್ದಾರೆ. ಮಳೆ ನೀರು ಸಂಗ್ರಹದ ಟ್ಯಾಂಕ್ ಮಲಿನಗೊಂಡು ಹೀಗಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. 15 ಮಹಡಿಯ ಅಪಾರ್ಟ್‌ಮೆಂಟ್ ಇದಾಗಿದ್ದು, 3,500ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಈ ವಸತಿ ಸಂಕೀರ್ಣದ ಮಳೆ ನೀರು ಸಂಗ್ರಹದ ಟ್ಯಾಂಕ್ 1.5 ಲಕ್ಷ ಲೀಟರ್ ಸಾಮರ್ಥ್ಯದ್ದಾಗಿದ್ದು, ಎಲ್ಲರೂ ಇದೇ ನೀರನ್ನು ಅವಲಂಬಿಸಿದ್ದಾರೆ. ಬೋರ್‌ವೆಲ್ ನೀರು ಪೂರೈಕೆ ಇಲ್ಲ ಎಂದು ವರದಿ ಹೇಳಿದೆ.
ಉತ್ತರ ಬೆಂಗಳೂರು ಕ್ಯಾಸನಹಳ್ಳಿ ಅಪಾರ್ಟ್‌ಮೆಂಟಲ್ಲಿ ಭೇದಿ ಸಮಸ್ಯೆ
ಉತ್ತರ ಬೆಂಗಳೂರು ಕ್ಯಾಸನಹಳ್ಳಿ ಅಪಾರ್ಟ್‌ಮೆಂಟಲ್ಲಿ ಭೇದಿ ಸಮಸ್ಯೆ ಹೆಚ್ಚಾಗಿದೆ. ಮಳೆ ನೀರು ಸಂಗ್ರಹದ ಟ್ಯಾಂಕ್ ಸ್ವಚ್ಛಗೊಳಿಸದೇ ಬಹುಕಾಲವಾಯಿತು. ಅದರಲ್ಲಿ ಕೆಸರು, ಹುಳಹುಪ್ಪಟೆಗಳು ಸೇರಿಕೊಂಡಿವೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ದೂರಿದ್ದಾಗಿ ವರದಿ ಹೇಳಿದೆ.
ಎರಡು ಶನಿವಾರಗಳ ಹಿಂದೆ ಭಾರಿ ಮಳೆ ಸುರಿದ ನಂತರದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಬುಧವಾರ ನನ್ನ ಪತ್ನಿ ವಾಂತಿ ಶುರುಮಾಡಿದರು. ಮಗಳು ಶುಕ್ರವಾರ ಕಾಯಿಲೆ ಬಿದ್ದಳು. ಅಪಾರ್ಟ್‌ಮೆಂಟ್‌ನ ಟೆರೇಸ್ ಮೇಲೆ ಬಿದ್ದ ಮಳೆ ನೀರು ಹರಿದು ಮೂರು ಟ್ಯಾಂಕ್‌ಗಳಿಗೆ ಹೋಗುತ್ತದೆ. ಅದನ್ನು ಕ್ಲೀನ್ ಮಾಡಿಲ್ಲ ಎಂದು ಸ್ಥಳೀಯ ನಿವಾಸಿ ರವಿ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಅರಿಂಜೋಯ್ ಘೋಷ್ ಎಂಬುವವರು ಈ ಸಂಬಂಧ ಟ್ವೀಟ್ ಮಾಡಿದ್ದು, ಈ ಕಲುಷಿತ ನೀರು ಸೇವನೆ ಬಳಿಕ ಕನಿಷ್ಠ 70 ರಿಂದ 80 ಭೇದಿ ಪ್ರಕರಣಗಳು ವರದಿಯಾಗಿವೆ. ಈ ನೀರು ಶುದ್ಧೀಕರಣಗೊಳ್ಳದೇ ನೇರವಾಗಿ ಕುಡಿಯಲು ಬಳಕೆಯಾಗುತ್ತಿರುವ ಕಾರಣ ಹೀಗಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಇನ್ನೊಬ್ಬ ನಿವಾಸಿ ಜೈದೀಪ್ ಎಂ ಎಂಬುವವರು ಕೂಡ ಈ ವಿಚಾರ ಹಂಚಿಕೊಂಡಿದ್ದು, ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ಹೇಳಿಕೊಂಡಿದ್ದಾರೆ. ಸೋಮವಾರ ರಾತ್ರಿ ಮತ್ತೊಬ್ಬ ನಿಅಸಿ, ಅವರ ಎರಡು ವರ್ಷದ ಪುತ್ರಿಗೆ ಭೇದಿಯಾದ ವಿಚಾರ ಹೇಳಿಕೊಂಡಿದ್ದಾರೆ.
ಸ್ಥಳಕ್ಕಾಗಮಿಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ
ಭೇದಿ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಂಡ ಶುಕ್ರವಾರ (ಏಪ್ರಿಲ್ 4) ಅಪಾರ್ಟ್‌ಮೆಂಟ್ ಬಳಿ ಬಂದಿದ್ದು, ಮಲಿನಗೊಂಡ ಮಳೆ ನೀರು ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವುದಕ್ಕೆ ಕ್ರಮತೆಗೆದುಕೊಂಡಿದೆ. ಅಲ್ಲದೆ, ನಾಲ್ಕು ಸ್ಯಾಂಪಲ್ಸ್ ಅನ್ನು ತಗೊಂಡಿದ್ದು ಪರೀಕ್ಷೆಗೆ ಕಳುಹಿಸಿದೆ. ಅದರ ವರದಿ ಬಹಿರಂಗವಾಗಿಲ್ಲ. ಈ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡದಂತೆ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಬೆದರಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.