BBMP E Khata: ಬೆಂಗಳೂರಲ್ಲಿ ಇ ಖಾತಾ ಪಡೆಯುವುದು ಹೇಗೆ ಎಂದು ಚಿಂತಿಸಬೇಡಿ, ಖಾತಾ ಇಲ್ಲದ ಆಸ್ತಿ ಮಾಲೀಕರಾಗಿದ್ದರೆ ಹೀಗೆ ಮಾಡಿ
BBMP E Khata System: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಐದು ಲಕ್ಷ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಇ-ಖಾತಾಗಳನ್ನು ನೀಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಆದ್ದರಿಂದ ಬೆಂಗಳೂರಲ್ಲಿ ಇ ಖಾತಾ ಪಡೆಯುವುದು ಹೇಗೆ ಎಂದು ಚಿಂತಿಸಬೇಡಿ, ಖಾತಾ ಇಲ್ಲದ ಆಸ್ತಿ ಮಾಲೀಕರಾಗಿದ್ದರೆ ಹೀಗೆ ಮಾಡಬಹುದು ನೋಡಿ.

BBMP E Khata System: ಬೆಂಗಳೂರಿನಲ್ಲಿರುವ ಅಂದಾಜು 5 ಲಕ್ಷ ಆಸ್ತಿಗಳ ಆಸ್ತಿ ನೋಂದಣಿ ಪ್ರಕ್ರಿಯೆ ಸರಳಗೊಳಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸದಾಗಿ ಆನ್‌ಲೈನ್ ಇ ಖಾತಾ ವ್ಯವಸ್ಥೆಯನ್ನು ಪರಿಚಯಿಸಿದೆ. ಸರಳವಾಗಿ ಹೇಳಬೇಕು ಎಂದರೆ ಖಾತಾ ಇಲ್ಲದ ಆಸ್ತಿ ಮಾಲೀಕರು ಬಿಬಿಎಂಪಿ ಕಚೇರಿಗೆ ಅಲೆದಾಡದೇ ತಾವಿರುವಲ್ಲಿಂದಲೇ ಈಗ ಬಿಬಿಎಂಪಿ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನಲ್ಲೇ ಇ ಖಾತಾ ಪಡೆಯಬಹುದು.
ಬಿಬಿಎಂಪಿ ಇ ಖಾತಾ ವ್ಯವಸ್ಥೆ- ಪ್ರಯೋಜನಗಳೇನು
ಈ ಹೊಸ ಉಪಕ್ರಮದಿಂದಾಗಿ ಬಿಬಿಎಂಪಿ ಕಚೇರಿಯಲ್ಲಿ ಎದುರಾಗುತ್ತವೆ ಎಂದು ಆರೋಪಿಸಲಾಗುವ ವಿಳಂಬ, ಸಿಬ್ಬಂದಿಗಳ ಕಿರುಕುಳ ಮುಂತಾದ ಸಮಸ್ಯೆಗಳು ನಿವಾರಣೆಯಾಗಲಿವೆ. ಅನಗತ್ಯ ಮತ್ತು ಹೆಚ್ಚುವರಿ ಭೇಟಿಗಳ ಮೂಲಕ ಆಸ್ತಿ ಮಾಲೀಕರಿಗೆ ಆಗುತ್ತಿದ್ದ ಸಮಯ, ಹಣಕಾಸು ನಷ್ಟಗಳನ್ನು ಕಡಿಮೆ ಮಾಡಲಿದೆ. ಆಸ್ತಿ ಮಾಲೀಕರು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನೇರವಾಗಿ ಖಾತಾ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇ ಖಾತಾ ಪಡೆಯಬಹುದು. ಇದು ಬಿಬಿಎಂಪಿಯ ಆಸ್ತಿ ತೆರಿಗೆ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ಬಿಬಿಎಂಪಿ ಇ ಖಾತಾ ಪಡೆಯಲು ಬೇಕಾದ ದಾಖಲೆಗಳಿವು
ಬಿಬಿಎಂಪಿ ಇ ಖಾತಾ ಪಡೆಯಲು ಬಯಸುವ ಖಾತಾ ಇಲ್ಲದ ಆಸ್ತಿ ಮಾಲೀಕರು, ತಮ್ಮ ಆಧಾರ್ ಸಂಖ್ಯೆ, ಮಾರಾಟ ಅಥವಾ ನೋಂದಾಯಿತ ದಾಖಲೆ ಸಂಖ್ಯೆ, ಆಸ್ತಿಯ ಭಾವಚಿತ್ರ ಮತ್ತು ಆಸ್ತಿಯ ನೋಂದಣಿ ದಿನಾಂಕದಿಂದ 2024ರ ಅಕ್ಟೋಬರ್ 31 ರವರೆಗಿನ ಅವಧಿಯನ್ನು ಒಳಗೊಂಡಿರುವ ಎನ್‌ಕಂಬರೆನ್ಸ್ ಪ್ರಮಾಣಪತ್ರದಂತಹ ಪ್ರಮುಖ ದಾಖಲೆಗಳನ್ನು ಮಾತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ.
ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜನವರಿ 16 ರಂದು ಟ್ವೀಟ್ ಮಾಡಿ, "ಪ್ರಸ್ತುತ ಖಾತಾ ಹೊಂದಿಲ್ಲದೇ ಇರುವ ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಇ-ಖಾತಾ ವ್ಯವಸ್ಥೆ ಪರಿಚಯಿಸಲು ಸಂತೋಷವಿದೆ. ಈ ಉಪಕ್ರಮವು ಮೂಲಕ 5 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ನೆರವಾಗಲಿದೆ. ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡದೇ ತಾವು ಇರುವಲ್ಲಿಂದಲೇ ಖಾತಾ ನೋಂದಣಿ ಮಾಡಿಸಿಕೊಳ್ಳಬಹುದು. ಇದು ಪಾರದರ್ಶಕ ಮತ್ತು ವೇಗವಾಗಿ ನಡೆಯಲಿದೆ ಎಂದು ಹೇಳಿದ್ದರು.
ಬಿಬಿಎಂಪಿ ಇ ಖಾತಾ ಪಡೆಯಲು ಖಾತಾ ಇಲ್ಲದ ಆಸ್ತಿ ಮಾಲೀಕರು ಮಾಡಬೇಕಾದ್ದೇನು
ಬಿಬಿಎಂಪಿ ಇ ಖಾತಾ ಪಡೆಯುವುದಕ್ಕಾಗಿ ಖಾತಾ ಇಲ್ಲದ ಆಸ್ತಿ ಮಾಲೀಕರು, ಬಿಬಿಎಂಪಿಯ “BBMP New Khata Creation System”ನ ಅಧಿಕೃ ವೆಬ್‌ಸೈಟ್ https://BBMP.karnataka.gov.in/NewKhata ಗೆ ಭೇಟಿ ನೀಡಬೇಕು. ಮೊಬೈಲ್ ನಂಬರ್ ಮತ್ತು ಒಟಿಪಿ ನಮೂದಿಸಿ ಲಾಗಿನ್ ಆಗಿ, ಆಧಾರ್ ಸಂಖ್ಯೆ, ಮಾರಾಟ ಅಥವಾ ನೋಂದಾಯಿತ ದಾಖಲೆ ಸಂಖ್ಯೆ, ಆಸ್ತಿಯ ಭಾವಚಿತ್ರ ಮತ್ತು ಆಸ್ತಿಯ ನೋಂದಣಿ ದಿನಾಂಕದಿಂದ 2024ರ ಅಕ್ಟೋಬರ್ 31 ರವರೆಗಿನ ಅವಧಿಯನ್ನು ಒಳಗೊಂಡಿರುವ ಎನ್‌ಕಂಬರೆನ್ಸ್ ಪ್ರಮಾಣಪತ್ರ ದಾಖಲೆಗಳನ್ನು ಒದಗಿಸಬೇಕು. ಆಗ ಇ ಖಾತಾ ರೆಡಿಯಾಗುತ್ತದೆ.
ಆದಾಗ್ಯೂ, ಈ ಹೊಸ ವ್ಯವಸ್ಥೆಯು ಖಾತಾ ಇಲ್ಲದ ಆಸ್ತಿ ಮಾಲೀಕರಿಗೆ ಮಾತ್ರ ಅನುಕೂಲ ಮಾಡಿಕೊಡುವಂಥದ್ದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. 'ಖಾತಾ' ಎನ್ನುವುದು ಆಸ್ತಿ ಮಾಲೀಕರು ಬಿಬಿಎಂಪಿಗೆ ಸಂಬಂಧಿಸಿದ ಆಸ್ತಿ ತೆರಿಗೆಯನ್ನು ಸರಿಯಾಗಿ ಪಾವತಿಸಿದ್ದಾರೆ ಮತ್ತು ಕಾನೂನುಬದ್ಧ ಆಸ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಪ್ರಮಾಣೀಕರಿಸುವ ದಾಖಲೆಯಾಗಿದೆ.
ಬಿಬಿಎಂಪಿ ಇ ಖಾತಾಕ್ಕೆ ಅರ್ಜಿ ಸಲ್ಲಿಸುವುದು ಹೇಗೆ; ವಿಡಿಯೋ ವಿವರಣೆ
ಬಿಬಿಎಂಪಿಯಿಂದ ಖಾತಾ ಹೊಂದಿರದ ಆಸ್ತಿ ಮಾಲೀಕರು ಇ ಖಾತಾ ಪಡೆಯುವುದು ಹೇಗೆ ಎಂಬ ಸಂದೇಹ ನಿವಾರಣೆಗಾಗಿ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಬಳಕೆದಾರರಿಗೆ ಸಹಾಯ ಮಾಡಲು ಬಿಬಿಎಂಪಿಯು ಹಂತ ಹಂತದ ವಿವರಣೆ ಒಳಗೊಂಡ ಯೂಟ್ಯೂಬ್ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಆ ವಿಡಿಯೋ ಇಲ್ಲಿದೆ ನೋಡಿ.
