ಬೆಂಗಳೂರಲ್ಲಿ ಆಂಬುಲೆನ್ಸ್ ಸಂಚಾರಕ್ಕೆ ಇ-ಪಾತ್; ಸಂಚಾರ ನಿರ್ವಹಣೆಯೂ ಸುಲಭವಂತೆ; ಹೊಸ ಉಪಕ್ರಮದ ಬಗ್ಗೆ ನಮಗೆ ತಿಳಿದಿರೋದು ಇಷ್ಟು
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇರುವ ಕಾರಣ ಆಂಬುಲೆನ್ಸ್ ಸಂಚಾರ ಸುಗಮಗೊಳಿಸುವುದಕ್ಕೆ ಇ ಪಾತ್ ಅನ್ನು ಪರಿಚಯಿಸಲು ಸಂಚಾರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇದರಿಂದ ಸಂಚಾರ ನಿರ್ವಹಣೆಯೂ ಸುಲಭವಾಗಬಹುದು ಎಂಬ ನಿರೀಕ್ಷೆ ಇದೆ. ಹೊಸ ಉಪಕ್ರಮದ ಬಗ್ಗೆ ನಮಗೆ ತಿಳಿದಿರುವ ವಿವರ ಇಲ್ಲಿದೆ.
ಬೆಂಗಳೂರು: ಸಂಚಾರ ದಟ್ಟಣೆ ಎಂದ ಕೂಡಲೆ ನೆನಪಾಗುವ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಬೆಂಗಳೂರಿನ ಸಂಚಾರ ದಟ್ಟಣೆ ಕಾರಣ ತುರ್ತು ವಾಹನಗಳು ಅಂದರೆ ಆಂಬುಲೆನ್ಸ್, ಅಗ್ನಿಶಾಮಕ ಸೇವೆ ಮುಂತಾದ ವಾಹನಗಳ ಸಂಚಾರಕ್ಕೂ ತೊಂದರೆ ಆಗುತ್ತಿರುವುದು ಗೊತ್ತಿರುವಂಥದ್ದೇ ಅಗಿದೆ. ಆಂಬುಲೆನ್ಸ್ ಸಂಚಾರವನ್ನು ಸುಗಮಗೊಳಿಸುವ ಪ್ರಯತ್ನ ನಡೆಯುತ್ತಲೇ ಇದ್ದು, ಈಗ ಬೆಂಗಳೂರು ನಗರ ಸಂಚಾರ ಪೊಲೀಸರು ಹೊಸ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನು ಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಆಂಬುಲೆನ್ಸ್ ಸಂಚಾರಕ್ಕಾಗಿ ಇ-ಪಾತ್ ಎಂಬ ಮೊಬೈಲ್ ಆಪ್ ಅನ್ನು ಬೆಂಗಳೂರು ಸಂಚಾರ ಪೊಲೀಸರು ಅಭಿವೃದ್ಧಿ ಪಡಿಸಿದ್ಧಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಅದರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಅದು ವಿವರಿಸಿದೆ.
ಏನಿದು ಇ ಪಾತ್, ಬೆಂಗಳೂರಿಗರ ಗಮನಸೆಳೆದಿರುವ ಹೊಸ ಮೊಬೈಲ್ ಆಪ್
ಬೆಂಗಳೂರು ನಗರ ಸಂಚಾರ ಪೊಲೀಸರು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಶ್ ಇ ಪಾತ್. ಬೆಂಗಳೂರು ನಗರದಲ್ಲಿ ಆಂಬುಲೆನ್ಸ್ ಸಂಚಾರವನ್ನು ಸುಗಮಗೊಳಿಸುವುದಕ್ಕಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ತೆರವುಗೊಳಿಸಿ ಆಂಬುಲೆನ್ಸ್ ಚಾಲಕರಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಇ ಪಾತ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೊಬೈಲ್ ಅಪ್ಲಿಕೇಶನ್ ನೋಂದಾಯಿತ ಆಂಬ್ಯುಲೆನ್ಸ್‌ಗಳನ್ನು ಟ್ರ್ಯಾಕ್ ಮಾಡಲು ಕೇಂದ್ರ ಸಂಚಾರ ನಿಯಂತ್ರಣ ಕೇಂದ್ರದೊಂದಿಗೆ ಸಂಯೋಜಿಸುತ್ತದೆ, ರಸ್ತೆ ತಡೆಗಳನ್ನು ನಿವಾರಿಸಿಕೊಂಡು ಆಂಬುಲೆನ್ಸ್ ಚಲಾಯಿಸಿಕೊಂಡು ಹೋಗುವುದಕ್ಕೆ ಸಹಾಯ ಮಾಡಲು ಆದ್ಯತೆಯ ಎಚ್ಚರಿಕೆಗಳನ್ನು ನೀಡುತ್ತದೆ. ಆಂಬ್ಯುಲೆನ್ಸ್ ಚಾಲಕರು ತಕ್ಷಣದ ಸಹಾಯಕ್ಕಾಗಿ ಅಪ್ಲಿಕೇಶನ್‌ನ SOS ಫೀಚರ್ ಅನ್ನು ಬಳಸಬಹುದು, ಕ್ಷಿಪ್ರ, ಸುರಕ್ಷಿತ ತುರ್ತು ಪ್ರತಿಕ್ರಿಯೆಗಳನ್ನು ಖಾತ್ರಿಪಡಿಸಿಕೊಳ್ಳಬಹುದು.
ಇ - ಪಾತ್ ಆಪ್ ಹೇಗೆ ಕೆಲಸ ಮಾಡುತ್ತೆ
ಇ-ಪಾತ್ ಸೇವೆಯನ್ನು ಬಳಸಬೇಕಾದರೆ ಆಂಬುಲೆನ್ಸ್ ಚಾಲಕರು ಈ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್‌ಗೆ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯ ಇರಲಿದ್ದು, ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್‌ಸ್ಟಾಲ್ ಆದ ಆಪ್‌ನಲ್ಲಿ ಪ್ರಯಾಣ ಆರಂಭಿಸುವ ಸ್ಥಳ ಮತ್ತು ತಲುಪಬೇಕಾದ ಸ್ಥಳವನ್ನು ನಮೂದಿಸಿ, ಯಾವ ಪ್ರಮಾಣದ ತುರ್ತು ಎಂಬುದನ್ನು ನಮೂದಿಸಬೇಕು. ಅತ್ಯಂತ ಆದ್ಯತೆಯ ಕೇಸ್ ಅಂದರೆ ಹೃದಯಾಘಾತ, ಭೀಕರ ಅಪಘಾತವಾದ ಸಂದರ್ಭದಲ್ಲಿ ಸಂದೇಶಗಳು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ರವಾನೆಯಾಗುತ್ತದೆ. ಅಲ್ಲಿಂದ ಕೂಡಲೇ ಜಿಪಿಎಸ್ ಆಧಾರಿತ ಸಿಗ್ನಲ್‌ಗಳು ಆಂಬುಲೆನ್ಸ್ ಸಂಚಾರಕ್ಕೆ ಅಗತ್ಯ ಸಿಗ್ನಲ್ ಕ್ಲಿಯರ್ ಮಾಡಿಕೊಟ್ಟು ಅನುಕೂಲ ಮಾಡಿಕೊಡುತ್ತದೆ. ಸರಳವಾಗಿ ಹೇಳಬೇಕು ಅಂದರೆ, ಆಂಬುಲೆನ್ಸ್ ಟ್ರಾಫಿಕ್ ಸಿಗ್ನಲ್ ಸಮೀಪ ಹೋಗುತ್ತಿರುವಂತೆ ಹಸಿರು ಲೈಟ್ ಉರಿದು ಅದರ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ಅದೇ ರೀತಿ ಸಂಚಾರ ನಿರ್ವಹಣೆಯನ್ನೂ ಸುಗಮಗೊಳಿಸಿಕೊಡುತ್ತದೆ ಎಂದು ವರದಿ ವಿವರಿಸಿದೆ.
ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಗಂಟೆಗೆ 5 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದ್ದರೆ ಆಗ ಇ ಪಾತ್ ಆಪ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ. ಸಂಚಾರ ಪೊಲೀಸರು ಕೂಡಲೆ, ವಾಹನ ದಟ್ಟಣೆ ತೆರವುಗೊಳಿಸಿ ಆಂಬುಲೆನ್ಸ್ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯಲ್ಲಿ ಆಂಬುಲೆನ್ಸ್ ಸಂಚಾರ ನಿಧಾನವಾಗದಂತೆ, ಅದರ ಸಂಚಾರ ಅವಧಿ ವಿಸ್ತರಣೆಯಾಗದಂತೆ ಇ ಪಾತ್ ನೋಡಿಕೊಳ್ಳುತ್ತದೆ. ಈ ತಿಂಗಳ ಕೊನೆಗೆ ಬೆಂಗಳೂರು ನಗರದ ಎಲ್ಲ ಆಂಬುಲೆನ್ಸ್‌ಗಳಲ್ಲೂ ಇದು ಬಳಕೆಗೆ ಬರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಎಂಎನ್ ಅನುಚೇತ್ ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಹೇಳಿದೆ.