ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ ವೈಟ್ ಟಾಪಿಂಗ್, ಸಂಚಾರ ನಿರ್ಬಂಧ; ವಿಧಾನಸೌಧ, ಮೆಜೆಸಿಕ್ಟ್ ತಲುಪುವವರಿಗೆ ಪರ್ಯಾಯ ಮಾರ್ಗ ಹೀಗಿದೆ ಗಮನಿಸಿ
ಬೆಂಗಳೂರಿನ ಜೆಸಿ ರಸ್ತೆಗೆ ವೈಟ್ ಟ್ಯಾಪಿಂಗ್ ಮಾಡಲಿರುವ ಕಾರಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜೆಸಿ ಮೂಲಕ ಟೌನ್‌ಹಾಲ್, ವಿಧಾನಸೌಧ, ಮೆಜೆಸಿಕ್ಟ್ ತಲುಪುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಇದರಿಂದ ಮುಂದಿನ ಕೆಲವು ದಿನಗಳ ಕಾಲ ವಾಹನ ಸವಾರರಿಗೆ ಸಂಕಷ್ಟ ಎದುರಾಗಲಿದೆ. ಇದರಿಂದ ಪರ್ಯಾಯ ಮಾರ್ಗಗಳಲ್ಲಿ ಟ್ರಾಫಿಕ್ ಹೆಚ್ಚುವ ಸಾಧ್ಯತೆ ಇದೆ (ವರದಿ: ಎಚ್. ಮಾರುತಿ)
ಬೆಂಗಳೂರು: ನಗರದ ದಕ್ಷಿಣ ಭಾಗದ ಜಯನಗರ, ಜೆಪಿ ನಗರ ಭಾಗದ ವಾಹನಗಳೆಲ್ಲಾ ಜೆ.ಸಿ. ರಸ್ತೆ ಮೂಲಕವೇ ಟೌನ್‌ಹಾಲ್, ವಿಧಾನಸೌಧ ಕಡೆಗೆ ಪ್ರವೇಶಿಸುತ್ತವೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರ ಇಳಿಮುಖ ಆಗುವುದೇ ಇಲ್ಲ. ಇದೀಗ ಈ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಲಾಗಿದ್ದು, ರಸ್ತೆ ತಾತ್ಕಾಲಿಕವಾಗಿ ಬಂದ್ ಆಗಲಿದೆ.
ಜೆ.ಸಿ. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಸಿ. ರಸ್ತೆಯಲ್ಲಿ ನಾಲಾ ರಸ್ತೆ ಜಂಕ್ಷನ್‌ನಿಂದ ಪುರಭವನ ಜಂಕ್ಷನ್‌ವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಸಲು ಬಿಬಿಎಂಪಿ ಉದ್ದೇಶಿಸಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಭಾಗಶಃ ನಿಷೇಧಿಸಲಾಗುತ್ತದೆ.
ಇಂದಿನಿಂದ ಕಾಮಗಾರಿ ಆರಂಭವಾಗಲಿದ್ದು, ಮುಕ್ತಾಯ ಆಗುವವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇರಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸುವಂತೆ ಸಂಚಾರಿ ಪೊಲೀಸರು ಕೋರಿದ್ದಾರೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ಮಾರ್ಗ ಹೀಗಿದೆ
ಹೊಸೂರು ರಸ್ತೆಯಿಂದ ಜೆ.ಸಿ. ರಸ್ತೆ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಬಲಕ್ಕೆ ತಿರುವು ಪಡೆದು ಕೆ.ಎಚ್. ರಸ್ತೆ, ಶಾಂತಿನಗರ, ರಿಂಡ್ ಆರ್.ಆರ್. ರಸ್ತೆಯ ಮೂಲಕ ಹಡ್ನನ್ ವೃತ್ತ ತಲುಪಬಹುದಾಗಿದೆ.
ಸೌತ್ ಎಂಡ್ ವೃತ್ತದಿಂದ ಜೆ.ಸಿ. ರಸ್ತೆಯ ಮೂಲಕ ಮೆಜೆಸ್ಟಿಕ್ ಹಾಗೂ ಬೆಂಗಳೂರು ಉತ್ತರ ದಿಕ್ಕಿನ ಕಡೆಗೆ ಸಂಚರಿಸುತ್ತಿದ್ದ ವಾಹನಗಳು, ಮಿನರ್ವ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಲಾಲ್‌ಬಾಗ್ ಪೋರ್ಟ್ ರಸ್ತೆ ಹಾಗೂ ಕೆಆರ್ ರಸ್ತೆ ಮೂಲಕ ಕೆಆರ್ ಮಾರುಕಟ್ಟೆ ತಲುಪಿ ಎಸ್‌ಜೆಪಿ ರಸ್ತೆ ಪುರಭವನ ತಲುಪಬಹುದಾಗಿದೆ.
ಸಂಚಾರ ನಿಯಮ ಉಲ್ಲಂಘನೆ; ಒಂದೇ ದಿನ 10 ಲಕ್ಷ ರೂ. ದಂಡ ಸಂಗ್ರಹ
ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರು ಹಾಗೂ ಬೈಕ್ ಸವಾರರ ವಿರುದ್ಧ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಬುಧವಾರ ಒಂದೇ ದಿನ 1,980 ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ಬೆಳಿಗ್ಗೆ 11ರಿಂದ ಸಂಜೆ 4ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಷ್ಟೂ ಪ್ರಕರಣಗಳಿಂದ ಒಟ್ಟು 9.96 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿದ್ದ 352 ಮಂದಿಯಿಂದ 1.77 ಲಕ್ಷ ದಂಡ ಸಂಗ್ರಹಿಸಲಾಗಿದೆ.
ನಿರ್ಬಂಧಿತ ರಸ್ತೆಯಲ್ಲಿ ಸಂಚರಿಸಿದ ವಾಹನ ಸವಾರರ ವಿರುದ್ಧ 471 ಪ್ರಕರಣ ದಾಖಲಿಸಿಕೊಂಡು, 2.39 ಲಕ್ಷ ದಂಡ ಸಂಗ್ರಹಿಸಲಾಗಿದೆ. ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದವರ ವಿರುದ್ಧ 178 ಪ್ರಕರಣ ದಾಖಲಿಸಿಕೊಂಡು, 90 ಸಾವಿರ ದಂಡ ವಿಧಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಮೂವರು ಕುಳಿತು ಪ್ರಯಾಣಿಸುತ್ತಿದ್ದ 60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 30 ಸಾವಿರ ರೂ ದಂಡ ಸಂಗ್ರಹಿಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಹಾಗೂ ಹೆಲ್ಮಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 919 ಪ್ರಕರಣ ದಾಖಲಿಸಿಕೊಂಡು, 4.50 ಲಕ್ಷ ರೂ ದಂಡ ವಿಧಿಸಲಾಗಿದೆ.
ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇನ್ನು ಮುಂದೆಯೂ ಇದೇ ರೀತಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಎಚ್ಚರಿಕೆ ನೀಡಿದ್ದಾರೆ.