ಬೆಂಗಳೂರು: ಹಾಲ್‌ಮಾರ್ಕ್‌ಗೆ ಕಳುಹಿಸಿದ ಚಿನ್ನಾಭರಣ ಕಳವು, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ದೂರು
Bengaluru Crime: ಬೆಂಗಳೂರು ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಹಾಲ್‌ಮಾರ್ಕ್‌ಗೆ ಕಳುಹಿಸಿದ್ದ ಚಿನ್ನಾಭರಣ ಕಳುವಾಗಿದೆ ಎಂದು ಚಿನ್ನದ ಮಳಿಗೆ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.

Bengaluru Crime: ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಟಿಎ ಶರವಣ ಮಾಲೀಕತ್ವದ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಹಾಲ್ ಮಾರ್ಕ್ ಸೀಲ್ ಹಾಕಿಸಲು ಕಳುಹಿಸಿದ ಚಿನ್ನಾಭರಣ ಕಳುವಾಗಿದೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಾಲ್‌ಮಾರ್ಕ್ ಹಾಕುವುದಕ್ಕೆ 1.249 ಕಿಲೋ ಗ್ರಾಂ ಚಿನ್ನಾಭರಣ ಕೊಡಲಾಗಿತ್ತು. ಆದರೆ, ಅದನ್ನು ಹಾಲ್‌ಮಾರ್ಕ್ ಹಾಕುವ ಸಂಸ್ಥೆಯ ಉದ್ಯೋಗಿ ಕಳವು ಮಾಡಿರುವುದಾಗಿ ಹೇಳಿರುವ ಕಾರಣ ಈ ದೂರು ದಾಖಲಿಸಲಾಗಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹಾಲ್‌ಮಾರ್ಕ್‌ಗೆ ಕಳುಹಿಸಲಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ ಚಿನ್ನಾಭರಣಗಳು ಕಳವು
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಭೀಮರಾಜು ಅವರು ಜನವರಿ 14 ರಂದು ಸಂಜೆ 5.30ಕ್ಕೆ ಪ್ಯಾಲೇಸ್‌ನ ನೌಕರ ಭರತ್ ಕುಮಾರ್ ರಾವಲ್ ಎಂಬುವವರಿಗೆ 1.249 ಕಿಲೋ ಚಿನ್ನಾಭರಣವನ್ನು (ಚಿನ್ನದ ಬಳೆಗಳು) ಕೊಟ್ಟು, ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ಹೋಗಿ ಹಾಲ್‌ಮಾರ್ಕ್ ಹಾಕಿಸಿಕೊಂಡು ಬರುವಂತೆ ಸೂಚಿಸಿ ಕಳುಹಿಸಿದ್ದರು. ಅದರಂತೆ, ಭರತ್ ಕುಮಾರ್ ಅಲ್ಲಿಗೆ ಹೋಗಿ ಚಿನ್ನಾಭರಣ ಕೊಟ್ಟು ಹಾಲ್‌ಮಾರ್ಕ್ ಸೀಲ್ ಹಾಕಿಕೊಡುವಂತೆ ಸೂಚಿಸಿದ್ದರು. ಮಾರನೇ ದಿನ ಬರಲು ಸೂಚಿಸಿದ ಪ್ರಕಾರ, ಜನವರಿ 15 ರಂದು ಭರತ್ ಕುಮಾರ್ ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್‌ಗೆ ಹೋಗಿ ಹಾಲ್‌ಮಾರ್ಕ್ ಮಾಡಿದ ಚಿನ್ನಾಭರಣ ಕೊಡುವಂತೆ ಕೇಳಿದ್ದಾರೆ. ಆಗ, ನಗರತ್ ಪೇಟೆಯ ಕೊನಾರ್ಕ್ ಹಾಲ್ ಮಾರ್ಕಿಂಗ್ ಸೆಂಟರ್ ಮಾಲೀಕ ಭರತ್ ಚಟಡ್, ಚಿನ್ನದ ಬಳೆಗಳನ್ನು ಉದ್ಯೋಗಿ ಕಳವು ಮಾಡಿಕೊಂಡುಹೋಗಿರುವುದಾಗಿ ಹೇಳಿದ್ದಾರೆ.
