ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್‌ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್‌ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣ

ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬೃಹತ್‌ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಪೂರ್ಣ

Kacharakanahalli Hanuman Statue: ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಸಂಪನ್ನವಾಗಿದೆ. ಪ್ರತಿಷ್ಠಾಪನಾ ಕಾರ್ಯ ಪ್ರಗತಿಯಲ್ಲಿದ್ದು, ಎರಡು ತಿಂಗಳು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

ಬೆಂಗಳೂರು ಕೆ ಆರ್‌ ಪುರಂ ಸಮೀಪ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ 72 ಅಡಿ ಎತ್ತರದ ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನೆ ಸಂಪನ್ನವಾಗಿದೆ.
ಬೆಂಗಳೂರು ಕೆ ಆರ್‌ ಪುರಂ ಸಮೀಪ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ 72 ಅಡಿ ಎತ್ತರದ ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನೆ ಸಂಪನ್ನವಾಗಿದೆ. (PC- Video Grab)

Kacharakanahalli Hanuman Statue: ಏಷ್ಯಾದಲ್ಲೇ ಅತಿ ಎತ್ತರದ ಏಕಶಿಲಾ ಮೂರ್ತಿ ಎಂಬ ಹೆಗ್ಗಳಿಕೆ ಹೊಂದಿದ 72 ಅಡಿ ಎತ್ತರದ ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ಬುಧವಾರ (ಜನವರಿ 14) ಕಾಚರಕನಹಳ್ಳಿಯಲ್ಲಿ ಸಂಪನ್ನಗೊಂಡಿದೆ. ಬೃಹತ್ ಏಕಶಿಲಾ ಮೂರ್ತಿಯನ್ನು ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನೆ; 2 ತಿಂಗಳು ಕಾರ್ಯಕ್ರಮ

ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿಯು 480 ಟನ್ ತೂಕ ಹೊಂದಿದ್ದು, ಬೃಹತ್ ಕ್ರೇನ್‌ಗಳ ಸಹಾಯದೊಂದಿಗೆ ಸ್ಥಾಪಿಸಲಾಗಿದೆ. ಇದರ ಪ್ರತಿಷ್ಠಾಪನಾ ಕಾರ್ಯಗಳು ಪೂರ್ಣಗೊಳ್ಳುವುದಕ್ಕೆ ಇನ್ನೂ ಎರಡು ತಿಂಗಳು ಬೇಕು. ವಿಶ್ವಕ್ಷೇನ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿವಾಚನ, ನವಗ್ರಹ ಪೂಜೆ, ರಾಮತಾರಕ ಹೋಮ, ಮಹಾಲಕ್ಷ್ಮಿ ಶ್ರೀಸೂಕ್ತ ಹೋಮ, ಮಹಾಪೂರ್ಣಾಹುತಿ, ಸರ್ವತೋಭದ್ರ ಮಂಡಲ ಆರಾಧನೆ, ಪವಮಾನ ಹೋಮದ ನಂತರ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಯಿತು ಎಂದು ಶ್ರೀರಾಮ ಚೈತನ್ಯ ವರ್ಧಿನಿ ಸಭಾ ಟ್ರಸ್ಟ್ ಮತ್ತು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೃಹದ್ರೂಪಿ ಹನುಮ ಮೂರ್ತಿ ಪ್ರತಿಷ್ಠಾಪನಾ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.

ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿ ರಚನೆಗೆ ಏಕಶಿಲೆ

'ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿ ರಚನೆಗೆ ಏಕಶಿಲೆಯನ್ನು ಗುರುತಿಸಿ ಅದನ್ನು ಹೊಸಕೋಟೆ ಸಮೀಪದ ಪ್ರದೇಶದಿಂದ ತರುವುದಕ್ಕೆ 30 ದಿನಗಳು ಬೇಕಾಯಿತು. ಖ್ಯಾತ ಸ್ತಪತಿಗಳು ಮೂರು ವರ್ಷ ಕಾಲ ಮೂರ್ತಿ ಕೆತ್ತನೆ ಮಾಡಿದ್ದು, ಇದಕ್ಕೆ ಯಂತ್ರಗಳ ನೆರವನ್ನೂ ಪಡೆಯಲಾಗಿದೆ. ಪ್ರತಿಷ್ಠಾಪನಾ ಕಾರ್ಯ ಮುಗಿದ ಬಳಿಕ ಭಕ್ತರ ದರ್ಶನಕ್ಕೆ ಪೂರ್ತಿ ಅವಕಾಶ ಒದಗಿಸಲಾಗುತ್ತದೆ ಎಂದು ಶ್ರೀರಾಮ ಚೈತನ್ಯ ವರ್ಧಿನಿ ಸಭಾ ಟ್ರಸ್ಟ್ ಮತ್ತು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ರೆಡ್ಡಿ ಹೇಳಿದರು.

ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಬೈರತಿ ಬಸವರಾಜ, ಧೀರಜ್ ಮುನಿರಾಜು, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಗರ ಘಟಕದ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ, ಸಪ್ತಗಿರಿಗೌಡ, ಬಿಬಿಎಂಪಿ ಮಾಜಿ ಸದಸ್ಯ ಪದ್ಮನಾಭರೆಡ್ಡಿ ಪಾಲ್ಗೊಂಡಿದ್ದರು.

ದಕ್ಷಿಣ ಅಯೋಧ್ಯೆ ಕೋದಂಡರಾಮ ದೇವಸ್ಥಾನದ ಇತಿಹಾಸ

ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ದಕ್ಷಿಣ ಅಯೋಧ್ಯೆಯ ಕೋದಂಡರಾಮ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದೆ. ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ವರದಿ ಪ್ರಕಾರ, ಕ್ರಿ.ಶ.1500 - ಕ್ರಿ.ಶ.1600ರ ನಡುವೆ ದೇವಸ್ಥಾನ ವೈಭವದ ಅವಧಿಯನ್ನು ಕಂಡಿತ್ತು. ಸಾಂಸ್ಕೃತಿಕ ಶ್ರೀಮಂತಿಕೆಯ ವಿಜಯನಗರ - ನಾಯಕರ ಅವಧಿ ಇದಾಗಿತ್ತು. ನಂತರ ಅವನತಿ ಕಂಡಿತು. 1990-92ರ ಅವಧಿಯಲ್ಲಿ ಸ್ಥಳೀಯರು ಮತ್ತು ಸಮಾಜದ ನಾಯಕರು ಕಾಚರಕಹಳ್ಳಿಯಲ್ಲಿ ಕಸಾಯಿಖಾನೆ ಸ್ಥಾಪಿಸದಂತೆ ಸ್ಥಳೀಯಾಡಳಿತದ ಜತೆಗೆ ಹೋರಾಟ ನಡೆಸಿತು. ಅದು ದೇವಸ್ಥಾನದ ಜಾಗವಾದ ಕಾರಣ, ದೇವಾಲಯದ ಪುನರುತ್ಥಾನವಾಗಬೇಕು ಎಂಬ ಹೋರಾಟ ಶುರುವಾಯಿತು. ಅದರಂತೆ ಪುನಸ್ಥಾಪನೆಗೊಂಡ ದೇವಾಲಯ ಇದು.

Whats_app_banner