ಗೂಗಲ್ ಟ್ರಾನ್ಸ್‌ಲೇಷನ್ ಯಾಕೆ, ಕನ್ನಡ ಕಸ್ತೂರಿ ಬಳಸೋಕೆ ಸಜ್ಜಾಗಿ: ಹೊಸ ಅನುವಾದ ತಂತ್ರಾಂಶ ಶೀಘ್ರವೇ ಲೋಕಾರ್ಪಣೆ ಆಗಲಿದೆ ಅಂದ್ರು ಡಾ ಬಿಳಿಮಲೆ
ಗೂಗಲ್ ಟ್ರಾನ್ಸ್‌ಲೇಷನ್ ಯಾಕೆ, ಕರ್ನಾಟಕ ಸರ್ಕಾರವೇ ಸಿದ್ಧಪಡಿಸಿರುವ ಸಮರ್ಥ ಅನುವಾದ ತಂತ್ರಾಂಶ ಕನ್ನಡ ಕಸ್ತೂರಿ ಶೀಘ್ರ ಲೋಕಾರ್ಪಣೆಗೆ ಸಜ್ಜಾಗಿದೆ. ಅದನ್ನು ಬಳಸೋದಕ್ಕೆ ಈಗ ಸಿದ್ಧರಾಗಬೇಕಾಗಿದೆ. ಈ ವಿಷಯವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಖಚಿತಪಡಿಸಿದ್ದಾರೆ.
ಬೆಂಗಳೂರು: ಕನ್ನಡದ ತಂತ್ರಜ್ಞಾನವು ಹೊಸ ತಲೆಮಾರಿನ ಆದ್ಯತೆಗಳನ್ನು ಅರ್ಥೈಸಿಕೊಂಡು ರೂಪುಗೊಳ್ಳದೇ ಹೋದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು. ಅವರು, ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು. ಎಲ್ಲ ಬಿಕ್ಕಟ್ಟುಗಳ ನಡುವೆ ಕನ್ನಡ ತಂತ್ರಜ್ಞಾನವು ಜನ ಸಾಮಾನ್ಯರ ದೈನಂದಿನ ಬದುಕಿನ ಭಾಗವಾಗಬೇಕಾದಲ್ಲಿ ಆಡಳಿತ ಯಂತ್ರದ ಕಾಳಜಿ ಮತ್ತು ಜವಾಬ್ದಾರಿ ಮುಖ್ಯವಾಗುತ್ತದೆ. ಕೃತಕಬುದ್ಧಿಮತ್ತೆಯ ತಂತ್ರಜ್ಞಾನವು ಬದುಕಿನ ಎಲ್ಲ ಆಯಾಮಗಳನ್ನು ಆವರಿಸಿಕೊಳ್ಳುವಾಗ ಸರ್ಕಾರಿ ಯಂತ್ರಗಳು ತಮ್ಮ ಕಾರ್ಯಗಳಲ್ಲಿ ಇನ್ನಷ್ಟು ವೃತ್ತಿಪರತೆ ರೂಢಿಸಿಕೊಳ್ಳಬೇಕು. ಆ ಮೂಲಕ ಕನ್ನಡ ಭಾಷಾ ಸೇವೆಯನ್ನು ನೆರವೇರಿಸಬೇಕಾದ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ತಂತ್ರಾಂಶಗಳ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಣೆಯಲ್ಲಿ ಸಾರ್ವಜನಿಕ ಬದ್ಧತೆಯ ಕೊರತೆ ಇದೆ. ತಂತ್ರಾಂಶಗಳನ್ನು ಮುಕ್ತವಾಗಿ ಜನ ಸಾಮಾನ್ಯರೆಡೆಗೆ ಕೊಂಡ್ಯೊಯುವ ನಿಟ್ಟಿನಲ್ಲಿ ಸರ್ಕಾರದ ಹೊಣೆಗಾರಿಕೆ ಹೆಚ್ಚು. ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ವಲಯದ ಅಭಿವೃದ್ಧಿ ಮತ್ತು ಪ್ರಗತಿಗೆ ಅನುಗುಣವಾಗಿ ಸರ್ಕಾರದ ಉಪಕ್ರಮಗಳಲ್ಲಿ ಬದಲಾವಣೆಯಾದಾಗ ಮಾತ್ರ ಹೊಸ ತಲೆಮಾರಿನ ಕನ್ನಡದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಡಾ ಬಿಳಿಮಲೆ ವಿವರಿಸಿದರು.
ಕನ್ನಡ ಕಸ್ತೂರಿ ಶೀಘ್ರ ಲೋಕಾರ್ಪಣೆ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ಸಮರ್ಥ ತಂತ್ರಾಂಶವನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಕನ್ನಡ ಕಸ್ತೂರಿ ಎಂಬ ಈ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಡಾ ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಉದ್ದೇಶಿತ ತಂತ್ರಾಂಶವು ಈಗ ಬಳಕೆಯಲ್ಲಿರುವ ಖಾಸಗಿ ತಂತ್ರಾಂಶಗಳಿಗಿಂತ ಅತಿ ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಸುಮಾರು 2.3 ಕೋಟಿ ಆಂಗ್ಲ ಮತ್ತು ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಂಡಿದೆ. ಈ ತಂತ್ರಾಂಶವು ಲೋಕಾರ್ಪಣೆಗೊಂಡಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದ ಬಹುದೊಡ್ಡ ಕೊಡುಗೆ ನೀಡುವುದರ ಜೊತೆಗೆ ಖಾಸಗಿ ವಲಯದ ತಂತ್ರಾಂಶಕ್ಕೆ ತೀವ್ರ ಪೈಪೋಟಿ ನೀಡುವಂತೆ ಇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
200ಕ್ಕೂ ಹೆಚ್ಚು ಪದಕೋಶ/ ನಿಘಂಟುಗಳನ್ನು ಬಳಸಿ ಅತ್ಯಾಧುನಿಕ ಪದಕಣಜ ತಂತ್ರಾಂಶವನ್ನು ಕರ್ನಾಟಕ ಸರ್ಕಾರವು ಸಾರ್ವಜನಿಕ ಬಳಕೆಗೆ ನೀಡಿದ್ದು, ಸುಮಾರು 2.20 ಲಕ್ಷ ಕನ್ನಡ ಪದಗಳು ಹಾಗೂ 1.20 ಲಕ್ಷ ಆಂಗ್ಲ ಮೂಲ ಪದಗಳು ಈ ತಂತ್ರಾಂಶದಲ್ಲಿ ಲಭ್ಯವಿದೆ. ಪದಕಣಜ ಮೊಬೈಲ್ ತಂತ್ರಾಂಶವನ್ನು ಸಹ ಬಳಕೆಗೆ ನೀಡಲಾಗಿದ್ದು, ಸಾರ್ವಜನಿಕರು ಈ ತಂತ್ರಾಂಶದ ಸದುಪಯೋಗ ಪಡೆಯಬಹುದು ಎಂದು ಡಾ.ಬಿಳಿಮಲೆ ಹೇಳಿದರು.
ಇ-ಕಲಿಕಾ ಕನ್ನಡ ಪೋರ್ಟಲ್
ಜಗತ್ತಿನ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ, ಕನ್ನಡ ಕಲಿಯಲು ಉತ್ಸಾಹ ಇರುವವರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಉದ್ದೇಶದಿಂದ ಸರ್ಕಾರವು ಇ-ಕಲಿಕಾ ಕನ್ನಡ ಪೊರ್ಟಲ್ ರೂಪಿಸಿದ್ದು, ಇದು ಪ್ರಾಧಿಕಾರದ ಆಶಯಕ್ಕೆ ಪೂರಕವಾಗಿದೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯುವಲ್ಲಿ ಇ-ಕಲಿಕಾ ಕನ್ನಡ ಪೋಟರ್ಲ್ ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಡಾ.ಬಿಳಿಮಲೆ ಮಾಹಿತಿ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಇ-ಕನ್ನಡ ಯೋಜನೆಯ ಯೋಜನಾ ನಿರ್ದೇಶಕರು ನಂದಿನಿ ಪಿ.ಎಂ ಹಾಗೂ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿದ್ದರು.