ಬೆಂಗಳೂರು ಲಾಲ್‌ಬಾಗ್‌ನ ಪ್ರವೇಶ ದರ, ವಾಹನ ನಿಲುಗಡೆ ಶುಲ್ಕ ಹೆಚ್ಚಳ; ನಿರ್ವಹಣೆ ಇಲ್ಲದೆ ಶುಲ್ಕ ಏರಿಕೆಗೆ ಸಾರ್ವಜನಿಕರ ಅಸಮಾಧಾನ
ಬೆಂಗಳೂರಿನ ಪ್ರವಾಸಿ ಆಕರ್ಷಣೆಯಾಗಿರುವ ಲಾಲ್‌ಬಾಗ್ ಸಸ್ಯತೋಟದ ಪ್ರವೇಶ ದರ ಮತ್ತು ವಾಹನ ನಿಲುಗಡೆ ಶುಲ್ಕ ಹೆಚ್ಚಳವಾಗಿದೆ. ಈ ಬಗ್ಗೆ ನಿತ್ಯ ನಡಿಗೆದಾರರು, ಸಾರ್ವಜನಿಕರ ಅಸಮಾಧಾನ ವ್ಯಕ್ತವಾಗಿದ್ದು, ನಿರ್ವಹಣೆ ಇಲ್ಲದೇ ಶುಲ್ಕ ಏರಿಸಿದ್ದು ಯಾಕೆ ಎಂದು ಪ್ರಶ್ನಿಸತೊಡಗಿದ್ದಾರೆ.
ಬೆಂಗಳೂರು: ವಾಯು ವಿಹಾರ ಮಾಡುವವರ, ಪ್ರವಾಸಿಗರ ನೆಚ್ಚಿನ ತಾಣ ಬೆಂಗಳೂರಿನ ಲಾಲ್‌ಬಾಗ್ ಸಸ್ಯತೋಟ. ಇಲ್ಲಿನ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಏರಿಕೆ ಮಾಡಿರುವ ವಿಚಾರ ಸದ್ಯ ಹೆಚ್ಚು ಚರ್ಚೆಯಲ್ಲಿದ್ದು, ತೋಟಗಾರಿಕೆ ಇಲಾಖೆಯ ನಿರ್ಣಯವು ಸಾರ್ವಜನಿಕ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಲಾಲ್‌ಬಾಗ್‌ನಲ್ಲಿ ಯಾವುದೆ ರೀತಿ ಅಭಿವೃದ್ಧಿ ಇಲ್ಲ. ನಿರ್ವಹಣೆಯೂ ಇಲ್ಲ. ಹೀಗಿರುವಾಗ ನಿರ್ವಹಣಾ ವೆಚ್ಚ ಹೆಚ್ಚಳದ ನೆಪದಲ್ಲಿ ಪ್ರವೇಶ ಶುಲ್ಕ ಮತ್ತು ವಾಹನ ನಿಲುಗಡೆ ಶುಲ್ಕ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದಿದೆ.
ಲಾಲ್‌ಬಾಗ್ ಸಸ್ಯತೋಟದ ಪ್ರವೇಶ ಶುಲ್ಕ ಎಷ್ಟು; ಹೊಸ ಶುಲ್ಕ ವಿವರ
ಹೆಚ್ಚುತ್ತಿರುವ ನಿರ್ವಹಣಾ ವೆಚ್ಚವನ್ನು ಉಲ್ಲೇಖಿಸಿ ಲಾಲ್‌ಬಾಗ್‌ನಲ್ಲಿ ಪ್ರವೇಶ ಶುಲ್ಕವನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ 30 ರಿಂದ 50 ರೂಪಾಯಿಗೆ ಮತ್ತು 6-12 ವರ್ಷ ವಯಸ್ಸಿನ ಮಕ್ಕಳಿಗೆ 10 ರೂಪಾಯಿಯಿಂದ 20 ರೂಪಾಯಿಗೆ ಹೆಚ್ಚಿಸಲಾಗಿದೆ. ವಾಹನ ನಿಲುಗಡೆ ದರವೂ ಹೆಚ್ಚಾಗಿದೆ. ಕಾರು ನಿಲುಗಡೆಗೆ 40 ರೂಪಾಯಿಯಿಂದ 60 ರೂಪಾಯಿಗೆ, ಟೆಂಪೋ ಟ್ರಾವೆಲ್ 80 ರೂಪಾಯಿಯಿಂದ100 ರೂಪಾಯಿಗೆ ಮತ್ತು ಬಸ್‌ಗಳಿಗೆ 120 ರೂಪಾಯಿಂದ 200 ರೂಪಾಯಿಗೆ ಏರಿಸಲಾಗಿದೆ. ಆದರೆ, ದ್ವಿಚಕ್ರ ವಾಹನ ನಿಲುಗಡೆ ದರ ಬದಲಾವಣೆಯಾಗಿಲ್ಲ. ಈ ಹೆಚ್ಚಳವು ಅಕ್ಟೋಬರ್ 23 ರಿಂದ ಸದ್ದಿಲ್ಲದೇ ಜಾರಿಗೆ ಬಂದಿದೆ. ತೋಟಗಾರಿಕಾ ಇಲಾಖೆ ಈ ದಿಢೀರ್ ದರ ಏರಿಕೆಯ ಕ್ರಮ ಬೆಳಗ್ಗೆ ನಡಿಗೆಗೆ ಬರುವವರ ಅಸಮಾಧಾನಕ್ಕೆ ಕಾರಣವಾಯಿತು. ಅದೇ ರೀತಿ ಪ್ರವಾಸಿಗರ ಅಸಮಾಧಾನಕ್ಕೂ ಕಾರಣವಾಗಿದೆ.
ಲಾಲ್‌ಬಾಗ್‌ನ ಜಿಂಕೆ ಪಾರ್ಕ್ ಅನ್ನು ಕೆಲವು ದಿನಗಳಿಂದ ಮುಚ್ಚಲಾಗಿದ್ದು, ಗ್ರಂಥಾಲಯ, ಬೋನ್ಸಾಯ್ ಗಾರ್ಡನ್ ಸೇರಿ ಕೆಲವೆಡೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಬ್ಯಾಂಡ್ ಸ್ಟ್ಯಾಂಡ್ ಕೂಡ ದುಸ್ಥಿತಿಯಲ್ಲಿದೆ. ಇವೆಲ್ಲವನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ, ನಿತ್ಯ ಸಂದರ್ಶಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವ ಬದಲು ನಿರ್ವಹಣೆ ವೆಚ್ಚ ನೆಪವಾಗಿಟ್ಟುಕೊಂಡು ಶುಲ್ಕ ಏರಿಸಿರುವುದು ಸರಿಯಲ್ಲ ಎಂದು ನಿತ್ಯ ನಡಿಗೆದಾರರಾದ ಮುನೇಶ್ವರ ಬ್ಲಾಕ್‌ನ ಮಹೇಶ್ ಅಸಮಾಧಾನ ತೋಡಿಕೊಂಡರು.
ಲಾಲ್‌ಬಾಗ್ ಸಸ್ಯತೋಟಕ್ಕೆ ನಿತ್ಯವೂ 5,000 ದಿಂದ 6000 ಸಂದರ್ಶಕರು
ಲಾಲ್‌ಬಾಗ್ ಸಸ್ಯತೋಟಕ್ಕೆ ಸಾಮಾನ್ಯ ದಿನಗಳಲ್ಲಿ ನಿತ್ಯವೂ 5-6 ಸಾವಿರ ಸಂದರ್ಶಕರಿರುತ್ತಾರೆ. ವಾರಾಂತ್ಯದಲ್ಲಿ ಸಂದರ್ಶಕರ ಸಂಖ್ಯೆ 10,000ದ ಆಸುಪಾಸಿನಲ್ಲಿರುತ್ತದೆ. ಹಬ್ಬ ಸೇರಿ ಇತರ ಸರ್ಕಾರಿ ರಜಾ ದಿನಗಳಲ್ಲಿ 12,000 ಮೀರುತ್ತದೆ. ವರ್ಷಕ್ಕೆರಡು ಬಾರಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ಲಾಲ್‌ಬಾಗ್‌ನ ನಿರ್ವಹಣೆಗೆ ಹೆಚ್ಚು ಖರ್ಚಾಗುತ್ತಿದೆ ಎಂಬ ಕಾರಣ ನೀಡಿ ಇಲಾಖೆ ದರ ಹೆಚ್ಚಳ ಮಾಡಿದೆ.
ಕಳೆದ 6 ವರ್ಷದಿಂದ ಪ್ರವೇಶ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಈ ಅವಧಿಯಲ್ಲಿ ಎಲ್ಲ ವೆಚ್ಚಗಳೂ ಏರಿಕೆಯಾಗಿವೆ. ವಿದ್ಯುತ್ ಬಿಲ್, ನೀರಿನ ಶುಲ್ಕ, ಕಾರ್ಮಿಕರ ವೇತನ ಸೇರಿ ಎಲ್ಲವೂ ಹೆಚ್ಚಾಗಿದೆ. ಖರ್ಚು ವೆಚ್ಚ ಸರಿದೂಗಿಸುವುದಕ್ಕೆ ಪ್ರವೇಶ ಶುಲ್ಕ ಹೆಚ್ಚಳ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುಮತಿ ಸಿಕ್ಕ ಬಳಿಕ ಶುಲ್ಕ ಏರಿಸಲಾಗಿದೆ. 4.5 ಕೋಟಿ ರೂಪಾಯಿಗೆ ಇದನ್ನು ಕೆಸಿಐಸಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಕರ್ನಾಟಕ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ ಎಂ ಜಗದೀಶ್ ತಿಳಿಸಿದ್ದಾಗಿ ವಿಜಯವಾಣಿ ವರದಿ ಮಾಡಿದೆ.
2018 ಮತ್ತು 2020ರಲ್ಲಿ ದೊಡ್ಡವರಿಗೆ 25 ರೂಪಾಯಿ ಪ್ರವೇಶ ಶುಲ್ಕ ನಿಗದಿಯಾಗಿತ್ತು. 2021ರ ಫೆಬ್ರವರಿಯಲ್ಲಿ ಇದು 5 ರೂಪಾಯಿ ಹೆಚ್ಚಾಗಿದ್ದು, 30 ರೂಪಾಯಿ ಆಗಿದೆ. ಇದಲ್ಲದೆ, ದ್ವಿಚಕ್ರ ವಾಹನಗಳಿಗೆ 30 ರೂಪಾಯಿ, ಕಾರುಗಳಿಗೆ 60 ರೂಪಾಯಿ, ಟೆಂಪೋ ಟ್ರಾವೆಲ್ಲರ್‌ಗಳಿಗೆ 100 ರೂಪಾಯಿ, ಬಸ್‌ಗಳಿಗೆ 200 ರೂಪಾಯಿ ನಿಲುಗಡೆ ಶುಲ್ಕ ನಿಗದಿ ಮಾಡಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.