ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗ್ತಿದೆ ಬೆಂಗಳೂರಿನ ಬಾಡಿಗೆ ಮನೆಗಳ ಕಥೆ; 40 ಸಾವಿರ ಬಾಡಿಗೆ, 5 ಲಕ್ಷ ಅಡ್ವಾನ್ಸ್‌, ಹೀಗಿದೆ ಸ್ಥಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗ್ತಿದೆ ಬೆಂಗಳೂರಿನ ಬಾಡಿಗೆ ಮನೆಗಳ ಕಥೆ; 40 ಸಾವಿರ ಬಾಡಿಗೆ, 5 ಲಕ್ಷ ಅಡ್ವಾನ್ಸ್‌, ಹೀಗಿದೆ ಸ್ಥಿತಿ

ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗ್ತಿದೆ ಬೆಂಗಳೂರಿನ ಬಾಡಿಗೆ ಮನೆಗಳ ಕಥೆ; 40 ಸಾವಿರ ಬಾಡಿಗೆ, 5 ಲಕ್ಷ ಅಡ್ವಾನ್ಸ್‌, ಹೀಗಿದೆ ಸ್ಥಿತಿ

ಮಹಾನಗರಿ ಬೆಂಗಳೂರು ಹಲವು ವಿಷಯಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಇದೀಗ ನಗರದಲ್ಲಿ ಗಗನಕ್ಕೇರಿರುವ ಬಾಡಿಗೆ ಮನೆಗಳ ಕಥೆಯೂ ಭಾರಿ ಚರ್ಚೆ ಹುಟ್ಟುಹಾಕಿದೆ. ಬೆಂಗಳೂರು ಬಾಡಿಗೆ ಮನೆ ಕೇಳಿ ಶಾಕ್ ಆಗಿರುವ ದೆಹಲಿ ಮೂಲದ ಉದ್ಯೋಗಿಯೊಬ್ಬರು ಎಕ್ಸ್‌ನಲ್ಲಿ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. ಅವರ ಪೋಸ್ಟ್‌ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಬಾಡಿಗೆ ಮನೆ ಕಥೆ ವ್ಯಥೆ (ಸಾಂಕೇತಿಕ ಚಿತ್ರ)
ಬೆಂಗಳೂರು ಬಾಡಿಗೆ ಮನೆ ಕಥೆ ವ್ಯಥೆ (ಸಾಂಕೇತಿಕ ಚಿತ್ರ)

ಬೆಂಗಳೂರು: ರಾಜ್ಯ ರಾಜಧಾನಿ, ದೇಶದ ಮಾಹಿತಿ ತಂತ್ರಜ್ಞಾನ ಕೇಂದ್ರ ಬೆಂಗಳೂರು ಐಟಿ–ಬಿಟಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಬೆಳೆಯುತ್ತಿದೆ. ಆರ್ಥಿಕವಾಗಿ ಬೆಳೆದಂತೆಲ್ಲಾ ಇಲ್ಲಿ ಮನೆ ಬಾಡಿಗೆಯೂ ಸಹಜವಾಗಿಯೇ ಹೆಚ್ಚು. ಅದರಲ್ಲೂ ವಾಣಿಜ್ಯ ಮುಂಗಟ್ಟುಗಳ ಬಾಡಿಗೆ ಚದರ ಅಡಿ ಲೆಕ್ಕದಲ್ಲಿ ನಿಗದಿಯಾಗುತ್ತದೆ. ಇದೆಲ್ಲಾ ಉದ್ಯಾನ ನಗರಿಯಲ್ಲಿ ಹುಟ್ಟಿ ಬೆಳೆದವರಿಗೆ ಅಥವಾ ರಾಜ್ಯದ ಜನತೆಗೆ ಬೆಂಗಳೂರಿನ ಪರಿಸ್ಥಿತಿ ಏನು ಎತ್ತ ಎನ್ನುವುದರ ಅರಿವಿದೆ. ಆದರೆ ಹೊರ ರಾಜ್ಯದವರಿಗೆ ಅಷ್ಟಾಗಿ ಅರಿವಿರುವುದಿಲ್ಲ. ಇಲ್ಲಿನ ಬಾಡಿಗೆ ಕೇಳಿಯೇ ಬೆಚ್ಚಿ ಬೀಳುತ್ತಾರೆ.

ದೆಹಲಿ ಮೂಲದ ಮಹಿಳಾ ಉದ್ಯೋಗಿಯೊಬ್ಬರು ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ವೊಂದನ್ನು ಬಾಡಿಗೆಗೆ ನೋಡಿದ್ದಾರೆ. ಮನೆಯ ಮಾಲೀಕರು 40 ಸಾವಿರ ರೂ ಬಾಡಿಗೆ ಮತ್ತು 5 ಲಕ್ಷ ರೂ. ಮುಂಗಡ ಕೇಳಿದ್ದಾರೆ. ಇದು ಆ ಮಹಿಳೆಗೆ ಅಚ್ಚರಿ ಮೂಡಿಸಿದೆ. ಬೆಂಗಳೂರು ಇಷ್ಟೊಂದು ದುಬಾರಿಯೇ ಎಂದು ಬಾಡಿಗೆಯನ್ನೇ ರದ್ದುಗೊಳಿಸಿದ್ದಾರೆ. ತಮ್ಮ ಅನುಭವವನ್ನು ಆಕೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಅನುಭವವಾಗಿರುವುದು ದೆಹಲಿ ಮೂಲದ ಹರ್ನಿಧ್‌ ಕೌರ್‌ ಅವರಿಗೆ.

ಹರ್ನಿಧ್‌ ಕೌರ್‌ ಅವರು ಬೆಂಗಳೂರಿನಲ್ಲಿ ಬಾಡಿಗೆ ನಿಯಂತ್ರಣವೇ ಇಲ್ಲ. ಬೆಂಗಳೂರು ದುಬಾರಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ದೆಹಲಿಯಂತಹ ನಗರದಲ್ಲಿ ಒಂದು ಅಥವಾ ಎರಡು ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಬಾಡಿಗೆ ಗಗನಮುಖಿಯಾಗುತ್ತಿದೆ. ಮನೆ ಬಾಡಿಗೆ ಜತೆಗೆ 10-12 ತಿಂಗಳ ಮನೆ ಬಾಡಿಗೆಯನ್ನು ಮುಂಗಡವಾಗಿ ಕೊಡಬೇಕೇ ಎಂದು ಪ್ರಶ್ನಿಸಿದ್ದಾರೆ.

ಕೌರ್‌ ಅವರು ಎಕ್ಸ್‌ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಚರ್ಚೆಗೆ ಗ್ರಾಸವಾಗಿದೆ. ಇವರ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಅಭಿಪ್ರಾಯಗಳ ಮಹಾಪೂರವೇ ಹರಿದು ಬರುತ್ತಿದೆ. ಬೆಂಗಳೂರಿನ ಮನೆಗಳ ಗುಣಮಟ್ಟಕ್ಕೆ 5 ಲಕ್ಷ ರೂಪಾಯಿ ಮುಂಗಡ ಅತಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಒಂದು ವರ್ಷದ ಅಡ್ವಾನ್ಸ್‌ ? ಯಾವ ನಗರ ಇದು? ಇದು ಸಾಮಾನ್ಯ ಸ್ಥಿತಿಗೆ ಮರಳುವುದು ಯಾವಾಗ? ಇಂತಹ ಅನೈತಿಕ ಅಭ್ಯಾಸ ಆರಂಭವಾಗಿದ್ದು ಎಲ್ಲಿಂದ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಮನೆ ಮಾಲೀಕರು ನಿಜಕ್ಕೂ ಕಳ್ಳರು. ಮುಂಗಡ ಹಿಂತಿರುಗಿಸುವಾಗ ಕಾಡಿಸುತ್ತಾರೆ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಹೌದು, ಬೆಂಗಳೂರಿನ ಮಾಲೀಕರು ಹೊಟ್ಟೆಕಿಚ್ಚಿನ ಜನ ಎಂದೂ ಒಬ್ಬರು ತಮ್ಮ ಅಭಿಪ್ರಾಯವನ್ನು ತೇಲಿ ಬಿಟ್ಟಿದ್ದಾರೆ. ಹೀಗೆ ಚರ್ಚೆ ಮುಂದುವರೆಯುತ್ತಿದ್ದಂತೆ ದೇಶದಲ್ಲಿ ಉತ್ತಮ ನಗರ ಯಾವುದು ಎನ್ನುವತ್ತ ಚರ್ಚೆ ಸಾಗಿದೆ. ವಾಸಕ್ಕೆ ದೆಹಲಿ ಉತ್ತಮ ನಗರ ಎಂದು ಕೆಲವರು

ಹೇಳಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಇಲ್ಲಿನ ಊಟವೂ ಚೆನ್ನ. ರಾತ್ರಿ ಜೀವನಕ್ಕೂ ಹೇಳಿ ಮಾಡಿಸಿದ ನಗರ ದೆಹಲಿ. ಹಸಿರು ನಗರ ಎಂದರೆ ತಪ್ಪಾಗಲಿಕ್ಕಿಲ್ಲ. ಕಡಿಮೆ ಟ್ರಾಫಿಕ್‌ ಮತ್ತು ಕೈಗೆಟಕುವ ಜೀವನಗುಣಮಟ್ಟ ಇಲ್ಲಿ ಲಭ್ಯ. ವಾಯು ಗುಣಮಟ್ಟ ಮಾತ್ರ ಸುಧಾರಿಸಬೇಕಿದೆ ಎಂದು ಮೆಚ್ಚುಗೆಯನ್ನೇ ಹರಿಸಿದ್ದಾರೆ.

ದೆಹಲಿ ಹೊರತುಪಡಿಸಿದರೆ ಜೀವನ ಸಾಗಿಸಲು ಮುಂಬೈ ಉತ್ತಮ ನಗರ. ಮುಂಬೈನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ.ಆದರೆ ದೆಹಲಿಗಿಂತ ಬೆಂಗಳೂರು ಯಾವುದರಲ್ಲೂ ಮುಂದಿಲ್ಲ ಎಂದೂ ಹೇಳುವವರಿದ್ದಾರೆ.

ಇಷ್ಟೊಂದು ಬಾಡಿಗೆ ಮತ್ತು ಅಡ್ವಾನ್ಸ್‌ ಕೊಟ್ಟು ವಾಸಿಸುವುದಕ್ಕಿಂತ ಮನೆಯನ್ನೇ ಖರೀದಿ ಮಾಡಬಹುದಲ್ಲವೇ ಎಂಬ ಸಲಹೆಯೂ ಕೇಳಿ ಬಂದಿದೆ. ಬೆಂಗಳೂರಿನಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿ ಬಾಡಿಗೆ ಕೊಡುವುದು ಸುಲಭ ಅಲ್ಲ. ಸಣ್ಣ ಮನೆಯ ನಿರ್ಮಾಣಕ್ಕೂ ಕೋಟಿ ರೂ ಬಂಡವಾಳ ಕಡಿಮೆಯೇ ಎಂದು ಹೇಳಬೇಕು. ಇನ್ನು ಮನೆ ಕಟ್ಟಿ ಬಾಡಿಗೆ ಕೊಡುವವರ ಸಂಕಷ್ಟಗಳೇನೂ ಕಡಿಮೆ ಇಲ್ಲ. ಅವರು ಕೊಡುವ ಬಾಡಿಗೆ ಸುಣ್ಣ ಬಣ್ಣ ರಿಪೇರಿಗೆ ಹೋಗುತ್ತದೆ. ಒಂದು ಬಾರಿ ಮನೆ ಖಾಲಿಯಾದರೆ ಎರಡು ತಿಂಗಳು ಖಾಲಿ ಉಳಿಯುತ್ತದೆ ಎಂದು ಮನೆ ಮಾಲೀಕರು ತಮ್ಮ ಕಷ್ಟಗಳ ಸರಮಾಲೆ ಹೆಣೆಯುತ್ತಾರೆ.

Whats_app_banner