ಕೋಟ್ಯಂತರ ರೂ. ಹೂಡಿಕೆ ನೆಪದಲ್ಲಿ ಸೈಬರ್ ವಂಚನೆ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧಿಸಿದ ಗೋವಾ ಪೊಲೀಸರು; ತನಿಖೆ ಚುರುಕು
ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಹಣ ಹೂಡಿಕೆಗೆ ಉತ್ತೇಜಿಸಿ ಮೋಸ ಮಾಡಿದ್ದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಸೈಬರ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: 2.3 ಕೋಟಿ ರೂ.ಗಳನ್ನು ವಂಚಿಸಿ ಅಂತರರಾಜ್ಯ ಸೈಬರ್ ಹಗರಣ ನಡೆಸುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 2.3 ಕೋಟಿ ರೂ.ಗಳ ಹೂಡಿಕೆ ಹಗರಣದಲ್ಲಿ ಬೆಂಗಳೂರಿನ ಕುಮಾರ್ ಉತ್ಲಾಸರ್ (50) ಎಂಬಾತನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. 2.3 ಕೋಟಿ ರೂ.ಗಳ ಹೂಡಿಕೆ ಹಗರಣದ ಆರೋಪದ ಮೇಲೆ ಖಚಿತ ಮಾಹಿತಿ ಮೇರೆ ಗೋವಾ ಪೊಲೀಸರ ತಂಡ ದಾಳಿ ನಡೆಸಿ ಬೆಂಗಳೂರು ನಿವಾಸಿ ಆಗಿರುವ ಕುಮಾರ್ ಉತ್ಲಾಸರ್ (50) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಂಧಿಸಿದೆ. ಗೋವಾ ಪೊಲೀಸ್ ಸೈಬರ್ ಅಪರಾಧ ವಿಭಾಗ ಈ ಕುರಿತು ಅಧಿಕೃತವಾಗಿಯೇ ಮಾಹಿತಿ ನೀಡಿದೆ.
ಷೇರುಗಳಲ್ಲಿ ಹೆಚ್ಚಿನ ಆದಾಯದ ಹೂಡಿಕೆಯನ್ನು ಉತ್ತೇಜಿಸುವ ಸರಣಿ ವಾಟ್ಸಾಪ್ ಸಂದೇಶಗಳ ಮೂಲಕ ಮೋಸ ಹೋಗಿರುವುದಾಗಿ ವಾಲ್ಪೊಯಿ ನಿವಾಸಿಯೊಬ್ಬರು ನೀಡಿದ ದೂರಿನ ನಂತರ ಈ ಬಂಧನ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಪರಾಧ ವಿಭಾಗದ ಎಸ್ಪಿ ರಾಹುಲ್ ಗುಪ್ತಾ, ದೂರುದಾರನನ್ನು "ಎ -33 ಹೈ-ಕ್ವಾಲಿಟಿ ಸ್ಟಾಕ್ಸ್ ಎಕ್ಸ್ಚೇಂಜ್ ಗ್ರೂಪ್" ಎಂಬ ವಾಟ್ಸಾಪ್ ಗುಂಪಿಗೆ ಆಕರ್ಷಿಸಿದ ನಂತರ ಅಕ್ಟೋಬರ್ 22 ರಂದು ಪ್ರಕರಣ ದಾಖಲಿಸಲಾಗಿದೆ. ಅಲ್ಲಿ ಎಸ್ಎಂಐಎಫ್ಎಸ್ಮ್ಯಾಕ್ಸ್ ಅಪ್ಲಿಕೇಶನ್ ಮೂಲಕ ಲಾಭದಾಯಕ ಐಪಿಒಗಳು ಮತ್ತು ಅಪ್-ಸರ್ಕ್ಯೂಟ್ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲು ಮನವೊಲಿಸಿ ನಂತರ ವಂಚಿಸಲಾಗಿದೆ ಎಂದು ಹೇಳಿದರು.
ಆರೋಪಿಗಳು ಗಣನೀಯ ಆದಾಯದ ಭರವಸೆ ನೀಡಿದ್ದರು. ಇದನ್ನು ನಂಬಿದವರು ವಿವಿಧ ವಹಿವಾಟುಗಳ ಮೂಲಕ ಹಲವಾರು ಬ್ಯಾಂಕ್ ಖಾತೆಗಳಿಗೆ 1 ಕೋಟಿ ರೂ.ಗಳನ್ನು ವರ್ಗಾಯಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಇನ್ನೂ ಹಲವರು ಹೂಡಿಕೆಗೆ ಮುಂದೆ ಬಂದಿದ್ದರು. ಆದರೆ ಇದರಲ್ಲಿ ವಂಚನೆ ಇರುವುದು ಬಯಲಾಗಿತ್ತು. ಈ ವಹಿವಾಟುಗಳು ಉತ್ಲಾಸರ್ ಅವರ ಕಂಪನಿ ಆರಿಂಕೊ ಡೈನ್ಸ್ಟನ್‌ಗೆ ಸಂಬಂಧಿಸಿದ್ದವು. ಇದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿ ಮೋಸದ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ವಿವರಿಸಿದರು.
ಉತ್ಲಾಸರ್ ಹಣದ ಒಂದು ಭಾಗವನ್ನು ಇತರ ಖಾತೆಗಳಿಗೆ ವರ್ಗಾಯಿಸಿದ್ದಲ್ಲದೆ, ದೂರುದಾರರ ಖಾತೆಯಿಂದ 6 ಲಕ್ಷ ರೂ.ಗಳನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಿದ್ದಾರೆ ಎಂದು ಎಸ್ಪಿ ಗುಪ್ತಾ ಬಹಿರಂಗಪಡಿಸಿದ್ದಾರೆ. ಅವರ ಬ್ಯಾಂಕ್ ವಹಿವಾಟುಗಳ ವಿಶ್ಲೇಷಣೆಯು ಭಾರತದ ಒಂಬತ್ತು ರಾಜ್ಯಗಳಲ್ಲಿ ವ್ಯಾಪಿಸಿರುವ ಸೈಬರ್ ವಂಚನೆ ಪ್ರಕರಣಗಳೊಂದಿಗೆ ಸಂಪರ್ಕ ವಿಸ್ತರಣೆಯಾಗಿರುವ ಮಾಹಿತಿಯಿದೆ.
ಒಟ್ಟು 2.3 ಕೋಟಿ ರೂ.ಗಳು ವಿವಿಧ ಹಗರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯಿದ್ದು, ತನಿಖೆ ಮುಂದುವರಿದಿದೆ. ಮೋಸ ಹೋದವರ ಮಾಹಿತಿ ಪಡೆದು ಹಣ ಹಿಂತಿರುಗಿಸಲು ಪೊಲೀಸರು ಕಾನೂನಾತ್ಮಕ ಕ್ರಮಗಳಿಗೆ ಮುಂದಾಗಿದ್ದಾರೆ.
ಪ್ರಸ್ತುತ ಗೋವಾ ಪೊಲೀಸ್ ಕಸ್ಟಡಿಯಲ್ಲಿರುವ ಉತ್ಲಾಸರ್ ತನಿಖೆಯಲ್ಲಿದ್ದು, ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ತನಿಖೆಯ ಮೇಲ್ವಿಚಾರಣೆಯನ್ನು ಮತ್ತೊಬ್ಬ ಪೊಲೀಸ್ ಅಧಿಕಾರಿ ನೋಡಿಕೊಳ್ಳುತ್ತಿದ್ದಾರೆ. ವಿಚಾರಣೆ ಬಳಿಕವೇ ಇನ್ನಷ್ಟು ಮಾಹಿತಿ ಗೊತ್ತಾಗಬಹುದು. ಮೋಸದ ಆಳ ತಿಳಿಯಬಹುದು ಎನ್ನುವುದು ಪೊಲೀಸರ ವಿವರಣೆ.
ವಿಭಾಗ