ಕಳಪೆ ರಸ್ತೆ ಕಾರಣ ಬೆನ್ನು ನೋವು ಶುರುವಾಗಿದೆ, 50 ಲಕ್ಷ ರೂ ಪರಿಹಾರ ಕೊಡಿ; ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆಂಗಳೂರಿಗ
ಕನ್ನಡ ಸುದ್ದಿ  /  ಕರ್ನಾಟಕ  /  ಕಳಪೆ ರಸ್ತೆ ಕಾರಣ ಬೆನ್ನು ನೋವು ಶುರುವಾಗಿದೆ, 50 ಲಕ್ಷ ರೂ ಪರಿಹಾರ ಕೊಡಿ; ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆಂಗಳೂರಿಗ

ಕಳಪೆ ರಸ್ತೆ ಕಾರಣ ಬೆನ್ನು ನೋವು ಶುರುವಾಗಿದೆ, 50 ಲಕ್ಷ ರೂ ಪರಿಹಾರ ಕೊಡಿ; ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸಿದ ಬೆಂಗಳೂರಿಗ

ರಸ್ತೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕಾದ್ದು ಹಾಗೂ ಅವುಗಳನ್ನು ಸರಿಯಾಗಿ ನಿರ್ವಹಿಸಬೇಕಾದ್ದು ಸ್ಥಳೀಯಾಡಳಿತ ಸಂಸ್ಥೆಗಳ ಹೊಣೆಗಾರಿಕೆ. ಈಗ ಕಳಪೆ ರಸ್ತೆ ಕಾರಣ ಬೆನ್ನು ನೋವು ಶುರುವಾಗಿದೆ, 50 ಲಕ್ಷ ರೂ ಪರಿಹಾರ ಕೊಡಿ ಎಂದು ಬೆಂಗಳೂರಿಗನೊಬ್ಬ ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸಿ ಗಮನಸೆಳೆದಿದ್ದಾರೆ.

ಕಳಪೆ ರಸ್ತೆ ಕಾರಣ ಬೆನ್ನು ನೋವು, 50 ಲಕ್ಷ ರೂ ಪರಿಹಾರ ಕೊಡಿ ಎಂದು ಬೆಂಗಳೂರಿಗರೊಬ್ಬರು ಬಿಬಿಎಂಪಿಗೆ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ. (ಸಾಂಕೇತಿಕ ಚಿತ್ರ)
ಕಳಪೆ ರಸ್ತೆ ಕಾರಣ ಬೆನ್ನು ನೋವು, 50 ಲಕ್ಷ ರೂ ಪರಿಹಾರ ಕೊಡಿ ಎಂದು ಬೆಂಗಳೂರಿಗರೊಬ್ಬರು ಬಿಬಿಎಂಪಿಗೆ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ. (ಸಾಂಕೇತಿಕ ಚಿತ್ರ) (AFP)

ಕರ್ನಾಟಕದ ರಾಜಧಾನಿ ಬೆಂಗಳೂರು ಇನ್ನೂ ಬೆಳೆಯುತ್ತಲೇ ಇದೆ. ಈ ವೇಗಕ್ಕೆ ತಕ್ಕಂತೆ ಮೂಲ ಸೌಕರ್ಯ ಅಭಿವೃದ್ಧಿ ಕಡೆಗೆ ಸರ್ಕಾರ ಗಮನಹರಿಸಿಲ್ಲ. ಎರಡನೇ ಸ್ತರ ಮತ್ತು ಮೂರನೇ ಸ್ತರದ ನಗರಗಳ ಅಭಿವೃದ್ಧಿ ಕಡೆಗೂ ಅಗತ್ಯ ಗಮನಹರಿಸಿಲ್ಲ ಎಂಬುದು ವೇದ್ಯ ವಿಚಾರ. ಈ ನಡುವೆ, ನಗರದ ಕಳಪೆ ರಸ್ತೆಗಳ ಕಾರಣ ಬೆನ್ನು ನೋವು ಶುರುವಾಗಿದೆ. ಮಾನಸಿಕವಾಗಿಯೂ ಕುಗ್ಗಿದ್ದೇನೆ. ಪರಿಹಾರವಾಗಿ 50 ಲಕ್ಷ ರೂಪಾಯಿ ನೀಡಬೇಕು ಎಂದು ಬೆಂಗಳೂರಿಗನೊಬ್ಬ ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳುಹಿಸದ್ದು ಈಗ ಗಮನಸೆಳೆದಿದೆ.

50 ಲಕ್ಷ ರೂ ಪರಿಹಾರ ಕೊಡಿ; ಬಿಬಿಎಂಪಿಗೆ ಲೀಗಲ್ ನೋಟಿಸ್‌

ಮಹಾನಗರದ ಕಳಪೆ ರಸ್ತೆಗಳ ಕಾರಣ ಬೆನ್ನು ನೋವು ಶುರುವಾಗಿದೆ. ಮಾನಸಿಕವಾಗಿಯೂ ಕುಗ್ಗಿದ್ದೇನೆ. ಅದ್ದರಿಂದ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ರಿಚ್ಮಂಡ್ ಟೌನ್‌ನ 43 ವರ್ಷದ ವ್ಯಕ್ತಿಯೊಬ್ಬರು ಲೀಗಲ್ ನೋಟಿಸ್ ಕಳುಹಿಸಿದ್ದು ಗಮನಸೆಳೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಧಿವ್ಯ ಕಿರಣ್ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ವ್ಯಕ್ತಿ, ತಾನು ನಿಯತವಾಗಿ ತೆರಿಗೆ ಪಾವತಿಸುತ್ತಿದ್ದು, ಕಾನೂನು ಚೌಕಟ್ಟಿನಲ್ಲೇ ಬದುಕುತ್ತಿದ್ದೇನೆ. ಸ್ಥಳೀಯಾಡಳಿತ ಸಂಸ್ಥೆ ಬಿಬಿಎಂಪಿ ಸುರಕ್ಷಿತ ಮತ್ತು ಸುಗಮ ವಾಹನ ಸಂಚಾರಕ್ಕೆ ಅಗತ್ಯ ಮಾರ್ಗವನ್ನು ಒದಗಿಸುವಲ್ಲಿ ವಿಫಲವಾದ ಕಾರಣ ಬೆನ್ನು ನೋವು ಮತ್ತು ಇತರೆ ಶಾರೀರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಪದೇಪದೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಹಲವು ಸುತ್ತಿನ ಚಿಕಿತ್ಸೆಯ ಹೊರತಾಗಿ ಮಾನಸಿಕವಾಗಿ ಕೂಡ ಸಂಘರ್ಷಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಲೀಗಲ್‌ ನೋಟಿಸ್‌ನಲ್ಲಿ ಕೇಳಿಕೊಂಡಿರುವುದಾಗಿ ಎನ್‌ಡಿಟಿವಿ ವರದಿ ಹೇಳಿದೆ.

ಕೆವಿ ಲವೀನ್ ಎಂಬ ಅಡ್ವೋಕೇಟ್ ಈ ಲೀಗಲ್ ನೋಟಿಸ್ ಅನ್ನು ಧಿವ್ಯ ಕಿರಣ್ ಪರವಾಗಿ ಮೇ 14ರಂದು ಬಿಬಿಎಂಪಿಗೆ ಕಳುಹಿಸಿದ್ದು, ಬಿಬಿಎಂಪಿ ನಿರ್ಲಕ್ಷ್ಯವನ್ನು ಎತ್ತಿ ತೋರಿಸಲಾಗಿದೆ. ಅಲ್ಲದೇ ಪರಿಹಾರ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಕಳಪೆ ರಸ್ತೆ ಕಾರಣ ಉಂಟಾದ ಆರೋಗ್ಯ ಸಮಸ್ಯೆಗಳೇನು

ಧಿವ್ಯ ಕಿರಣ್ ಅವರಿಗೆ ಬೆಂಗಳೂರಿನ ಕಳಪೆ ರಸ್ತೆಗಳ ವಿಶೇಷವಾಗಿ ಗುಂಡಿ ಬಿದ್ದ ಹಾಗೂ ಮಳೆ ಬಂದಾಗ ನೀರು ತುಂಬಿ ನಿಂತ ಕಿತ್ತು ಹೋದ ರಸ್ತೆಗಳ ಕಾರಣ, ಕತ್ತು ನೋವು ಮತ್ತು ಬೆನ್ನು ನೋವು ಉಂಟಾಗಿದೆ. ಕೀಲು ನೋವು ಕೂಡ ಕಾಡುತ್ತಿದ್ದು, ಮಳೆಗಾಲದಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ನಾಲ್ಕು ಸಲ ತುರ್ತಾಗಿ ಭೇಟಿ ನೀಡಬೇಕಾಗಿ ಬಂದಿತ್ತು. ಐದು ಸಲ ಮೂಳೆ ಮತ್ತು ಕೀಲು ತಜ್ಞರನ್ನು ಭೇಟಿ ಮಾಡಿ ಸಮಾಲೋಚಿಸಬೇಕಾಗಿ ಬಂತು. ನಿರಂತರ ಔಷಧೋಪಚಾರ ಪಡೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ದೈಹಿಕ ನೋವಿನ ಭಾವನಾತ್ಮಕ ನೋವುಗಳನ್ನೂ ನೋಟಿಸ್‌ನಲ್ಲಿ ವಿವರಿಸಲಾಗಿದೆ. ಕಿರಣ್ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದು, ನಿತ್ಯ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆಲಸ ಬದ್ಧತೆಗಳು, ಹಣಕಾಸಿನ ಹೊಣೆಗಾರಿಕೆಗಳು ಎಲ್ಲದರ ಮೇಲೂ ಕೆಟ್ಟ ಪರಿಣಾಮವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ದ್ವಿಚಕ್ರ ವಾಹನ ಅಥವಾ ಆಟೋದಲ್ಲಿ ಪ್ರಯಾಣಿಸಲಾಗದು. ಅದು ಬೆನ್ನು ಹುರಿ ಮೇಲೆ ಪರಿಣಾಮ ಉಂಟುಮಾಡುವುದಾಗಿದ್ದು, ಕ್ಯಾಬ್‌ಗಳನ್ನೇ ಅವಲಂಬಿಸಬೇಕಾಗಿದೆ. ಇದು ಅವರ ಆರ್ಥಿಕ ಪರಿಸ್ಥಿತಿ ಮೀರಿದ್ದಾಗಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ಹೀಗಾಗಿ 50 ಲಕ್ಷ ರೂಪಾಯಿ ಪರಿಹಾರ ಹಾಗೂ 10,000 ರೂಪಾಯಿ ಲೀಗಲ್ ನೋಟಿಸ್ ಖರ್ಚು ವೆಚ್ಚವನ್ನು ಭರಿಸಬೇಕು ಎಂದು ಬಿಬಿಎಂಪಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ವರದಿ ಹೇಳಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.