ಕ್ಲಿನಿಕಲ್ ಟ್ರಯಲ್‌ನಲ್ಲಿ ಪಾಲ್ಗೊಂಡ ಬಳಿಕ ಬೆಂಗಳೂರು ವ್ಯಕ್ತಿ ಸಾವು; ಔಷಧಗಳ ಅಡ್ಡಪರಿಣಾಮಗಳೇ ಸಾವಿಗೆ ಕಾರಣವೆಂದು ಆರೋಪಿಸಿದ ಕುಟುಂಬ
Clinical trial death: ಸಿಂಜಿನ್ ಸಂಸ್ಥೆಯ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್ ಟ್ರಯಲ್)ದಲ್ಲಿ ಭಾಗವಹಿಸಿದ ಬೆಂಗಳೂರಿನ ನಾಗೇಶ್ ವೀರಣ್ಣ (33 ವರ್ಷ) ಮೃತ ಪಟ್ಟಿದ್ದಾರೆ. ಪ್ರಾಯೋಗಿಕ ಔಷಧಗಳಿಂದ ಉಂಟಾದ ಅಡ್ಡಪರಿಣಾಮಗಳು ಸಾವಿಗೆ ಕಾರಣವೆಂದು ಮೃತರ ಸಹೋದರ ರೇವಣ್ಣ ಸಿದ್ದಪ್ಪ ಆರೋಪಿಸಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ 33 ವರ್ಷದ ವ್ಯಕ್ತಿಯೊಬ್ಬರು ಈ ವಾರ ಅಸ್ವಾಭಾವಿಕವಾಗಿ ಮೃತಪಟ್ಟಿದ್ದು, ಇವರ ಸಾವಿಗೆ ಸಿಂಜಿನ್ ಜೊತೆ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸಿದ್ದೇ ಕಾರಣ ಎಂದು ಆರೋಪಿಸಲಾಗಿದೆ. “ನಾಗೇಶ್ ವೀರಣ್ಣ ಎಂಬ ವ್ಯಕ್ತಿ ಇದೇ ಬುಧವಾರ ಬೆಳಗ್ಗೆ ಸಹೋದರ ರೇವಣ್ಣ ಸಿದ್ಧಪ್ಪನ ಮನೆಯಲ್ಲಿ ಮೃತಪಟ್ಟಿದ್ದಾರೆ. ಕ್ಲಿನಿಕಲ್ ಟ್ರಯಲ್ ಸಮಯದಲ್ಲಿ ನೀಡಲಾದ ಔಷಧಗಳಿಂದ ವೀರಣ್ಣ ಅವರಿಗೆ ಅನೇಕ ಅಡ್ಡಪರಿಣಾಮಗಳು ಉಂಟಾಗಿದ್ದವು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 'ಅಸ್ವಾಭಾವಿಕ ಸಾವು' ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. “ವೈದ್ಯಕೀಯ ಪ್ರಯೋಗದ ಸಂದರ್ಭದಲ್ಲಿ ನೀಡಲಾದ ಔಷಧಗಳಿಂದ ಉಂಟಾದ ಅಡ್ಡಪರಿಣಾಮಗಳಿಂದ ನನ್ನ ಸಹೋದರ ಮೃತಪಟ್ಟಿದ್ದಾರೆ. ಈ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗುವ ತನಕ ಸಹೋದರನಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ” ಎಂದು ಸುದ್ದಿ ಸಂಸ್ಥೆ ಪಿಟಿಐಗೆ ರೇವಣ್ಣ ಸಿದ್ದಪ್ಪ ತಿಳಿಸಿದ್ದಾರೆ.
ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಕಂಪನಿಯು ನಾಗೇಶ್ ಈರಣ್ಣನನ್ನು ಐಸಿಯುಗೆ ದಾಖಲಿಸಿದ ಬಳಿಕ ಸಹೋದರನಿಗೆ ಮಾಹಿತಿ ನೀಡಿತ್ತು. ಟ್ರಯಲ್ ಹಂತದಲ್ಲಿರುವ ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳನ್ನು ಇದೇ ಡಿಸೆಂಬರ್ ತಿಂಗಳಲ್ಲಿ ನಾಗೇಶ್ ವೀರಣ್ಣ ಅವರಿಗೆ ನೀಡಲಾಗಿತ್ತು.
ಘಟನೆಯ ವಿವರ
ಡಿಸೆಂಬರ್ 9ರಂದು ಮೊದಲ ಬಾರಿಗೆ ಸಿಂಜಿನ್ ಕಂಪನಿಯನ್ನು ನಾಗೇಶ್ ವೀರಣ್ಣ ಭೇಟಿ ಮಾಡಿದ್ದರು. ಡಿಸೆಂಬರ್ 12ರಂದು ಎರಡನೇ ಬಾರಿ ಭೇಟಿಯಾಗಿದ್ದರು. ಅಂದು ಹೆಚ್ಚು ಸಮಯ ಸಿಂಜಿನ್ ಸಂಸ್ಥೆಯಲ್ಲಿದ್ದರು. ರಾತ್ರಿ ಮನೆಗೆ ವಾಪಸ್ಸಾಗಿದ್ದರು. ಡಿಸೆಂಬರ್ 18ರಂದು ರೇವಣ ಸಿದ್ದಪ್ಪ ಅವರಿಗೆ ಸಿಂಜಿನ್ ಕಂಪನಿಯಿಂದ ಕರೆ ಬಂದಿದೆ. ಸಹೋದರನನ್ನು ಆರೋಗ್ಯ ಸಮಸ್ಯೆಗಳಿಂದಾಗಿ ನಾರಾಯಣ ಹೃದಯಾಲಯದ ಐಸಿಯುಗೆ ದಾಖಲಿಸಲಾಗಿದೆ ಎಂದು ಸಿಂಜಿನ್ ರೇವಣ್ಣ ಸಿದ್ದಪ್ಪನಿಗೆ ಮಾಹಿತಿ ನೀಡಿತ್ತು.
ಕಂಪನಿಯು ಇಂಜೆಕ್ಷನ್ ಮತ್ತು ಮಾತ್ರೆಗಳನ್ನು ನೀಡಿದ 24 ಗಂಟೆಗಳ ನಂತರ ಸಹೋದರನ ಆರೋಗ್ಯ ಹದಗೆಟ್ಟಿದೆ ಎಂದು ರೇವಣ ಸಿದ್ದಪ್ಪ ಅವರಿಗೆ ತಿಳಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೀವ್ರ ಹೊಟ್ಟೆ ನೋವಿನ ಸಮಸ್ಯೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿಸೆಂಬರ್ 26ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇವರನ್ನು ಸಿಂಜಿನ್ ನಿಯಮಿತವಾಗಿ ತಪಾಸಣೆ ಮಾಡುತ್ತಿತ್ತು.
ಜನವರಿ 21 ರಂದು ಇಬ್ಬರು ಸಹೋದರರು ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದ್ದರು. ಆದರೆ ಬೆಳಿಗ್ಗೆ ವೀರಣ್ಣ ಅವರ ಸಹೋದರ ನಾಗೇಶ್‌ನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಿದ್ದಪ್ಪ ಅವರು ಸಿಂಜಿನ್ ಆರ್ & ಡಿ ಸಂಸ್ಥೆಯ ವೈದ್ಯರನ್ನು ಸಂಪರ್ಕಿಸಿ ಅವರು ನೀಡಿರುವ ಸೂಚನೆಗಳ ಪ್ರಕಾರ ನಾಗೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಸಹೋದರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದ ವರದಿಗಳು ತಿಳಿಸಿವೆ.
