ಬೆಂಗಳೂರು: 4 ತಿಂಗಳು ಗೀಸರ್ ಆನ್ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕ, ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳಿದ್ರು ಜನ
ಬೆಂಗಳೂರು: ಬ್ಯಾಚುಲರ್ ಲೈಫ್ ಅಂದ್ರೆ ಹಾಗೇನೆ. ಎಲ್ಲವೂ ವ್ಯವಸ್ಥಿತವಾಗಿರುವುದು ಅಪರೂಪ. ಅವಾಂತರಗಳೇ ಹೆಚ್ಚು. ಅಂತಹ ಒಂದು ಅವಾಂತರ ಇದು. 4 ತಿಂಗಳು ಗೀಸರ್ ಆನ್ ಇತ್ತು ಎಂದು ಸ್ನೇಹಿತನ ಅವಾಂತರ ಹಂಚಿಕೊಂಡ ಯುವಕನ ಬಳಿ ಜನ ಕೇಳಿದ್ದಿಷ್ಟು ಕರೆಂಟ್ ಬಿಲ್ ಎಷ್ಟು ಬಂತು!, ಆತ ಕೊಟ್ಟ ಉತ್ತರ ಮತ್ತು ಹಲವರ ಕಾಮೆಂಟ್‌ಗಳ ವಿವರ ಇಲ್ಲಿದೆ.

ಬೆಂಗಳೂರು: ಬ್ಯಾಚುಲರ್ ಬದುಕೇ ಹಾಗೆ. ಒಂದಿಲ್ಲೊಂದು ಅವಾಂತರಗಳು ನಡೆಯುತ್ತಲೇ ಇರುತ್ತವೆ. ಕೆಲವು ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವು ಮರೆಯಾಗಿಬಿಡುತ್ತವೆ. ಇನ್ನು ಕೆಲವು ವೈರಲ್ ಆಗಿ ಬಿಡೋದು ಇದೆ. ಅಂತಹ ಒಂದು ಅವಾಂತರವನ್ನು ಬೆಂಗಳೂರು ಯುವಕನೊಬ್ಬ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದಲ್ಲದೇ, ಅನೇಕರು ಅದನ್ನು ಛೇಡಿಸುವುದಕ್ಕೂ ಬಳಸಿಕೊಂಡರು. ಆದಿತ್ಯದಾಸ್ ಎಂಬ ಯುವಕ ತನ್ನ ಎಕ್ಸ್ ಖಾತೆಯಲ್ಲಿ ಈ ಅವಾಂತರ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.
4 ತಿಂಗಳು ಗೀಸರ್ ಆನ್ ಇತ್ತು; ಸ್ನೇಹಿತನ ಅವಾಂತರ ಹಂಚಿಕೊಂಡ ಬೆಂಗಳೂರು ಯುವಕ
ಬ್ಯಾಚುಲರ್ ಲೈಫ್‌ನ ಅವಾಂತರಗಳ ಪೈಕಿ ಇದು ಗಮನಸೆಳೆಯುವಂಥದ್ದು. ಬೆಂಗಳೂರಿನ ಯುವಕ ಆದಿತ್ಯದಾಸ್ ತನ್ನ ಫ್ಲಾಟ್‌ಮೇಟ್ ಮಾಡಿದ ಅವಾಂತರದ ಬಗ್ಗೆ ಗಮನಸೆಳೆದಿದ್ದಾರೆ. ಅವರು ಊರಿಗೆ ಹೋಗುವಾಗ ಗೀಸರ್ ಸ್ವಿಚ್ ಆಫ್ ಮಾಡುವುದನ್ನು ಮರೆತಿದ್ದ. ನಾವಿಬ್ಬರೂ ಊರಿಗೆ ಹೋಗಿ ವಾಪಸ್ ಬೆಂಗಳೂರಿಗೆ ನಾಲ್ಕು ತಿಂಗಳ ಬಳಿಕ ಬಂದು ನೋಡಿದಾಗ ಈ ಅವಾಂತರ ಗಮನಕ್ಕೆ ಬಂತು ಅಂತ ಅವರು ಹೇಳಿಕೊಂಡಿದ್ದಾರೆ.
“ಫ್ಲಾಟ್‌ಮೇಟ್ ಗೀಸರ್ ಆನ್ ಮಾಡಿಟ್ಟಿದ್ದ. ನಾವು ನಮ್ಮ ಊರಿಗೆ ಹೋಗಿದ್ದೆವು. ನಾಲ್ಕು ತಿಂಗಳ ಬಳಿಕ ಬಂದು ನೋಡಿದರೆ ಗೀಸರ್ ಆನ್ ಆಗೇ ಇತ್ತು” ಎಂದು ದಾಸ್ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಬಹುಬೇಗ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆಗಳನ್ನೂ ಆಹ್ವಾನಿಸಿತು. ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ಛೇಡಿಸಿದರು. ಇನ್ನು ಕೆಲವರು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲರೂ ಕರೆಂಟ್ ಬಿಲ್ ಎಷ್ಟು ಬಂತು ಅಂತ ಕೇಳ್ತಿದ್ದೀರಿ. ಕಳೆದ ಅಕ್ಟೋಬರ್ ತಿಂಗಳಿಂದೀಚೆಗೆ ನನಗೆ ಕರೆಂಟ್ ಬಿಲ್ ಬಂದಿಲ್ಲ. ಬಂದರೆ ಬಹುಶಃ ಸಾಲ ಪಡೆಯಬೇಕಾಬಹುದೋ ಏನೋ ಎಂದು ದಾಸ್ ಜೋಕ್ ಮಾಡಿದ್ದಾರೆ.
ಹಾಗಾದರೆ ಈಗ ನಿಮಗೆ ಬಿಸಿ ನೀರು ಸಿಗುತ್ತೆ ಅಂತ ಒಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬ ವ್ಯಕ್ತಿ “ನಿಜವಾದ ಭಾರತೀಯನ ಗುಣ” ಎಂದು ಜೋಕ್ ಮಾಡಿದ್ದಾರೆ. ಮತೊಬ್ಬ ವ್ಯಕ್ತಿ, “ನಾನು ಇದನ್ನು ಓದಿದೆ, ಕೂಡಲೇ ಎದ್ದು ಹೋಗಿ ನನ್ನ ಗೀಸರ್ ಆಫ್ ಮಾಡಿದೆ. ಸಾರ್ವಜನಿಕ ಸದುದ್ದೇಶದ ಪೋಸ್ಟ್” ಎಂದು ಕಾಮೆಂಟ್ ಮಾಡಿದ್ದಾರೆ.
ಈ ಪರಿಸ್ಥಿತಿಯು ಅನೇಕರನ್ನು ರಂಜಿಸಿದರೂ, ಗೀಸರ್‌ಗಳು ಮತ್ತು ಅವುಗಳ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ಚರ್ಚೆಗಳಿಗೆ ಕಾರಣವಾಯಿತು. ಆಧುನಿಕ ವಾಟರ್ ಹೀಟರ್‌ಗಳು ತಾಪಮಾನ ಸಂವೇದಕಗಳನ್ನು ಹೊಂದಿದ್ದು, ನೀರು ಬಯಸಿದ ತಾಪಮಾನವನ್ನು ತಲುಪಿದ ನಂತರ ಸ್ವಯಂಚಾಲಿತವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ ಎಂದು ಕೆಲವು ಬಳಕೆದಾರರು ಸೂಚಿಸಿದರು.
"ಪ್ರಸ್ತುತ ವಾಟರ್ ಹೀಟರ್‌ಗಳು ತಾಪಮಾನ ಸಂವೇದಕಗಳನ್ನು ಹೊಂದಿರುವುದಿಲ್ಲವೆ, ಅವುಗಳು ನೀರು ನಿರ್ದಿಷ್ಟ ಬಿಸಿಯಾದ ನಂತರ ಆಫ್ ಆಗುವುದಿಲ್ಲವೆ?" ಒಬ್ಬ ಬಳಕೆದಾರರು ಕೇಳಿದರಲ್ಲದೆ, “ಹಿಂದೆಲ್ಲ ವಾಟರ್ ಹೀಟರ್‌ಗಳಲ್ಲಿ ಸೆನ್ಸರ್ ಇರಲಿಲ್ಲ. ಹಾಗಾಗಿ ಕಾಯಿಲ್ ಹೀಟ್ ಆಗಿ, ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗಿ ಹಾನಿಯಾಗುವುದು ಸಾಮಾನ್ಯವಾಗಿತ್ತು” ಎಂದು ನೆನಪಿಸಿಕೊಂಡಿದ್ದಾರೆ.
ಥರ್ಮೋಸ್ಟಾಟ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಆಗಬಹುದಾದ ಸಂಭವನೀಯ ಅಪಾಯಗಳನ್ನು ಇತರರು ಎತ್ತಿ ತೋರಿಸಿದ್ದಾರೆ. "ಥರ್ಮೋಸ್ಟಾಟ್ ಕೆಲಸ ಮಾಡದೇ ಇದ್ದಾಗ ಅಥವಾ ದೋಷಪೂರಿತವಾದಾಗ ಸಮಸ್ಯೆಗಳು ಉದ್ಭವಿಸಬಹುದು" ಎಂದು ಒಬ್ಬರು ಹೇಳಿದರೆ, "ಇದು ನೀರು ಬಿಸಿಯಾಗದೇ ಇರುವುದಕ್ಕೆ ಕಾರಣವಾಗಬಹುದು. ರಿಪೇರಿ ಅಥವಾ ಗೀಸರ್ ಅನ್ನು ಬದಲಿಸುವ ಅಗತ್ಯ ಬರಬಹುದು. 3 ಅಥವಾ 4 ದಿನಗಳಿಗಿಂತ ಹೆಚ್ಚು ಕಾಲ ಬಳಕೆಯಲ್ಲಿಲ್ಲದಿದ್ದಾಗ ಉಪಕರಣಗಳನ್ನು ಸ್ವಿಚ್ ಆಫ್ ಮಾಡುವುದು ಉತ್ತಮ" ಎಂದು ಮತ್ತೊಬ್ಬರು ಹೇಳಿದ್ದಾರೆ.
ಕರೆಂಟ್ ಬಿಲ್ ಬಗ್ಗೆ ಅನೇಕರು ಕುತೂಹಲಿಗಳಾಗಿರುವುದು ಕಂಡುಬಂದಿದೆ. ಆ ನಾಲ್ಕು ತಿಂಗಳ ಅವಧಿಗೆ ಎಷ್ಟು ಕರೆಂಟ್ ಬಿಲ್ ಬಂತು?, ಹಾಗೇನಾದರೂ ಆದರೆ ಎಷ್ಟು ವಿದ್ಯುತ್ ಬಿಲ್ ಬರಬಹುದು ಎಂಬ ಕುತೂಹಲವಿದೆ ಎಂದು ಒಬ್ಬರು ಕೇಳಿದ್ದಾರೆ. ಇದಕ್ಕೆ ಪೂರಕವಾಗಿ ಮತ್ತೊಬ್ಬರು, ಸಂಭಾವ್ಯ ಬಿಲ್ ಲೆಕ್ಕವನ್ನು ಜನರ ಮುಂದಿಟ್ಟಿದ್ದಾರೆ.
ಆಟೋ-ಕಟ್ ಸೌಲಭ್ಯವಿರುವ 2kW ಗೀಸರ್ ಅನ್ನು ಊಹಿಸಿದರೆ, ನೀರಿನ ತಾಪಮಾನವನ್ನು ನಿರ್ವಹಿಸುವುದಕ್ಕಾಗಿ ನಿತ್ಯವೂ 4 ಗಂಟೆ ಕಾಲ ಕೆಲಸ ಮಾಡಿರಬಹುದು. ಇದರ ಪ್ರಕಾರ ದಿನಕ್ಕೆ 8 kWh ಖರ್ಚಾಗಿರಬಹುದು. ಪ್ರತಿ ಯೂನಿಟ್‌ಗೆ 8 ರೂಪಾಯಿ ದರ ಪ್ರಕಾರದ ಪ್ರಕಾರ ದಿನಕ್ಕೆ 64 ರೂಪಾಯಿ ಆಗಿರುತ್ತದೆ. ತಿಂಗಳಿಗೆ 2000 ರೂಪಾಯಿ. ನಿಗದಿತ ವೆಚ್ಚು ಮತ್ತು ಇತರೆ ಶುಲ್ಕ ಸೇರಿಸಿ ಒಟ್ಟು 4000 ರೂಪಾಯಿ ಕರೆಂಟ್ ಬಿಲ್ ತಿಂಗಳಿಗೆ ಬರಬಹುದು ಎಂದು ಹೇಳಿದ್ದಾರೆ.
