Mpox virus: ಕರ್ನಾಟಕದ ಮೊದಲ ಶಂಕಿತ ಎಂಪಾಕ್ಸ್ ವೈರಸ್ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
Bengaluru Mpox virus Case: ದುಬೈನಿಂದ ಕರ್ನಾಟಕಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ (ಎಂಪೋಕ್ಸ್) ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ. ಆದರೆ, ಈ ಕುರಿತು ವಿಕ್ಟೋರಿಯಾ ಆಸ್ಪತ್ರೆ ಅಥವಾ ರಾಜ್ಯ ಸರಕಾರ ಯಾವುದೇ ಅಧಿಕೃತ ಪ್ರಕಟಣೆ/ಮಾಹಿತಿ ಹೊರಡಿಸಿಲ್ಲ.

ಬೆಂಗಳೂರು: ಇತ್ತೀಚೆಗೆ ದುಬೈನಿಂದ ಕರ್ನಾಟಕಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ವೈರಸ್ (ಈ ಹಿಂದೆ ಮಂಕಿಫಾಕ್ಸ್ ವೈರಸ್ ಎಂದು ಕರೆಯಲಾಗುತ್ತಿತ್ತು) ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. "40 ವರ್ಷದ ರೋಗಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಯಪಡುವ ಅಗತ್ಯವಿಲ್ಲ" ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ ಎಂದು ವರದಿಗಳು ತಿಳಿಸಿವೆ.
ಈ ಕುರಿತು ವಿಕ್ಟೋರಿಯಾ ಆಸ್ಪತ್ರೆ ಅಥವಾ ರಾಜ್ಯ ಸರಕಾರ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. “ಈ ಶಂಕಿತ ಪ್ರಕರಣವು ಎಂಪೋಕ್ಸ್ ಪ್ರಕರಣವೇ ಎಂದು ದೃಢೀಕರಿಸಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷವೇ ಎಂಪಾಕ್ಸ್‌ಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರು ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ನೀಡಿತ್ತು. ಎಂಪೋಕ್ಸ್ ಹರಡುವುದನ್ನು ತಡೆಯಲು ಹಲವು ಸೂಚನೆಗಳನ್ನು ಈ ಮೂಲಕ ನೀಡಲಾಗಿತ್ತು.
ಎಂಪಾಕ್ಸ್ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 2024ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷಾ ಘಟಕ ಸ್ಥಾಪಿಸಿತ್ತು. ಆಸ್ಪತ್ರೆಯ ಎಚ್ ಬ್ಲಾಕ್‌ನಲ್ಲಿ ನಿರ್ದಿಷ್ಟವಾಗಿ ಎಂಪೋಕ್ಸ್ ಪ್ರಕರಣಗಳಿಗಾಗಿ 50 ಐಸೋಲೇಷನ್ ಹಾಸಿಗೆಗಳನ್ನು ಮೀಸಲಾಗಿಡಲಾಗಿತ್ತು. ಇಲ್ಲಿ ವಿಆರ್‌ಡಿಎಲ್ ಲ್ಯಾಬ್ ಸ್ಥಾಪಿಸಲಾಗಿದೆ. ಅಲ್ಲಿನ ಮೈಕ್ರೊಬಯೋಲಜಿ ವಿಭಾಗವು ಟೆಸ್ಟ್‌ಗಳನ್ನು ನಡೆಸಲು ಸಿದ್ಧವಾಗಿದೆ. ಇಲ್ಲಿ ಸಾಕಷ್ಟು ಪಿಪಿಐ ಕಿಟ್‌ಗಳೂ ಇವೆ.
ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ವರ್ಷ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಆಫ್ರಿಕನ್ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಪರೀಕ್ಷಿಸಲು ಆರಂಭಿಸಲಾಗಿತ್ತು. ಪ್ರಯಾಣಿಕರ ತಪಾಸಣೆ ಮತ್ತು ತಾಪಮಾನ ಟೆಸ್ಟಿಂಗ್ ಸೇರಿದತೆ ಅನೇಕ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲಾಗಿದೆ ಎಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪ್ರಕಟಿಸಿತ್ತು. ಎಂಪಾಕ್ಸ್ ವೈರಸ್ ಸೋಂಕಿನ ರೋಗ ಲಕ್ಷಣಗಳನ್ನು ಹೊಂದಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ 21 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.
ಎಂಪಾಕ್ಸ್ ಸೋಂಕಿನ ರೋಗಲಕ್ಷಣಗಳೇನು?
ದೇಹದಲ್ಲಿ ವಿಶಿಷ್ಟ ದದ್ದು ಉಂಟಾಗುತ್ತದೆ. ಇದು ಚಪ್ಪಟ್ಟೆಯಾದ ದ್ರವ ತುಂಬಿದ ಗುಳ್ಳೆಗಳಂತೆ ಇರುತ್ತದೆ. ಸಾಮಾನ್ಯವಾಗಿ ಮುಖದ ಮೇಲೆ ಆರಂಭವಾಗುತ್ತದೆ. ಬಳಿಕ ದೇಹದ ಇತರೆ ಭಾಗಗಳಿಗೆ ಹರಡುತ್ತದೆ. ಜ್ವರ, ತಲೆನೋವು, ಸ್ನಾಯುನೋವು, ಬೆನ್ನು ನೋವು, ಶೀತ, ನಿಶ್ಯಕ್ತಿಯಂತಹ ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ.
ಯಾರಿಗೆ ಹೆಚ್ಚು ಅಪಾಯ?
ಚಿಕ್ಕ ಮಕ್ಕಳು, ರೋಗ ನಿರೋಧಕ ಶಕ್ತಿ ದುರ್ಬಲಗೊಂಡವರು (ಎಚ್‌ಐವಿ ಇತ್ಯಾದಿ ಹೊಂದಿರುವವರು ಒಳಗೊಂಡಂತೆ), ಗರ್ಭಿಣಿಯರಿಗೆ ಹೆಚ್ಚಿನ ಅಪಾಯ ಉಂಟಾಗುತ್ತದೆ ಎಂದು ಹೇಳಲಾಗಿದೆ. ಎಂಪಾಕ್ಸ್‌ನ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಅಪಾಯ ಇರುವವರಿಗೆ ಲಸಿಕೆ ನೀಡಲು ಶಿಫಾರಸು ಮಾಡಬಹುದು. ಎಂಪೋಕ್ಸ್ ತಡೆಗಟ್ಟಲು ಉತ್ತಮ ವೈಯಕ್ತಿಕ ನೈರ್ಮಲ್ಯದ ಅಭ್ಯಾಸ ಅಗತ್ಯ. ಸೋಂಕಿತ ವ್ಯಕ್ತಿಗಳ ನಿಕಟ ಸಂಪರ್ಕವನ್ನು ತಪ್ಪಿಸಬೇಕು ಎಂದು ಕೇಂದ್ರ ಸರಕಾರವು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
