ರೈಲು ಮಾರ್ಗದಲ್ಲಿ ಇನ್ನೂ ತೆರವಾಗದ ಮಣ್ಣು, ಇನ್ನೆರೆಡು ದಿನ ಮಂಗಳೂರು – ಬೆಂಗಳೂರು ರೈಲು ಸೇವೆ ಇಲ್ಲ, ಮುಂದುವರಿದಿದೆ ಪ್ರಯಾಣಿಕರ ಪರದಾಟ
ಭೂ ಕುಸಿತದಿಂದಾಗಿ ಹಲವು ರೈಲುಗಳ ಸಂಚಾರ ರದ್ದಾಗಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ರೈಲು ಮಾರ್ಗದ ದುರಸ್ತಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಸೋಮವಾರ ಮತ್ತು ಮಂಗಳವಾರವೂ (ಆಗಸ್ಟ್ 12-13) ಹಲವು ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ. (ವರದಿ: ಹರೀಶ ಮಾಂಬಾಡಿ)
ಮಂಗಳೂರು: ಸಕಲೇಶಪುರ ಮತ್ತು ಬಾಳ್ಳುಪೇಟೆಯ ಮಧ್ಯೆ ಶನಿವಾರ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರವೂ (ಆಗಸ್ಟ್ 12, 13) ಮಂಗಳೂರಿನಿಂದ ಬೆಂಗಳೂರುವರೆಗಿನ ರೈಲ್ವೆ ಸೇವೆ ರದ್ದುಗೊಂಡಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಮಂಗಳೂರು-ಬೆಂಗಳೂರು ರೈಲು ಅರ್ಧದಲ್ಲೇ ಸ್ಥಗಿತಗೊಂಡು ನೂರಾರು ಪ್ರಯಾಣಿಕರು ಪರದಾಡಬೇಕಾಯಿತು.
ರೈಲು ಸಂಖ್ಯೆ 16596 ಕಾರವಾರ –ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪೂರ್ತಿಯಾಗಿ ರದ್ದುಗೊಂಡಿದೆ. ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ತೆರಳಬೇಕಾಗಿದ್ದ ರೈಲು ಸಂಖ್ಯೆ 16585 ಯಾನ ಭಾನುವಾರ ರದ್ದುಗೊಂಡಿದ್ದು, ಸೋಮವಾರ ಮತ್ತು ಮಂಗಳವಾರವೂ ಇದು ಪ್ರಯಾಣಿಸುವುದಿಲ್ಲ. ಮಂಗಳೂರು ಸೆಂಟ್ರಲ್‌ನಿಂದ ವಿಜಯಪುರಕ್ಕೆ ತೆರಳುವ ರೈಲು ಸಂಖ್ಯೆ 07378 ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ತನ್ನ 12ನೇ ತಾರೀಕಿನ ಪ್ರಯಾಣವನ್ನು ಸಂಪೂರ್ಣ ರದ್ದುಗೊಳಿಸಿದೆ. ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ತನ್ನ 12ನೇ ತಾರೀಕಿನ ಯಾನವನ್ನು ರದ್ದುಗೊಳಿಸಿದೆ.ರೈಲು ಸಂಖ್ಯೆ 16576 ಮಂಗಳೂರು ಯಶವಂತಪುರ ರೈಲು ಸೋಮವಾರ, ಮಂಗಳವಾರದ ಪ್ರಯಾಣವನ್ನು ರದ್ದುಗೊಳಿಸಿದೆ.
ಹಾಗೆಯೇ ರೈಲು ಸಂಖ್ಯೆ 16586 ಮುರ್ಡೇಶ್ವರ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ತೆರಳದೆ ಮಂಗಳೂರಿಗಷ್ಟೇ ಪ್ರಯಾಣ ಬೆಳೆಸಿದೆ. ಮಂಗಳೂರು ಬೆಂಗಳೂರು ಪ್ರಯಾಣ ರದ್ದುಗೊಳಿಸಿದೆ. ರೈಲು ಸಂಖ್ಯೆ 07377 ವಿಜಯಪುರ ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಬಾಗಲಕೋಟೆಯಲ್ಲೇ ಪ್ರಯಾಣ ಸ್ಥಗಿತಗೊಳಿಸಿದೆ. ಬಾಗಲಕೋಟೆಯಿಂದ ಮಂಗಳೂರಿನವರೆಗಿನ ಪ್ರಯಾಣವನ್ನು ರದ್ದುಗೊಳಿಸಲಾಯಿತು.
ರೈಲು ಸಂಖ್ಯೆ 16512 ಕಣ್ಣೂರು ಬೆಂಗಳೂರು ಎಕ್ಸ್ ಪ್ರೆಸ್ ಭಾನುವಾರ ಕಣ್ಣೂರಿನಿಂದ ಶೋರನೂರು, ಈರೋಡ್, ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳಿದೆ. ಬೆಂಗಳೂರಿನಿಂದ 11ರಂದು ಹೊರಟ ರೈಲು ಬಂಗಾರಪೇಟೆ, ಶೋರನೂರು ಮಾರ್ಗವಾಗಿ ಕಣ್ಣೂರಿಗೆ ತೆರಳಿದೆ. ಈ ಎರಡೂ ರೈಲುಗಳು ಪಥ ಬದಲಾಯಿಸಿವೆ ಎಂದು ಪಾಲ್ಘಾಟ್ ವಿಭಾಗದ ಪ್ರಕಟಣೆ ಮಾಹಿತಿ ನೀಡಿದೆ.
ಭೂಕುಸಿತದಿಂದ ಕಮರಿದ ಏರ್‌ಫೋರ್ಸ್ ಸೇರುವ ಆಸೆ
ರೈಲು ಮಾರ್ಗದಲ್ಲಿ ಭೂಕುಸಿತದಿಂದ ಹಲವಾರು ಪ್ರಯಾಣಿಕರಿಗೆ ಗಮ್ಯ ಸ್ಥಾನಕ್ಕೆ ಸಕಾಲಕ್ಕೆ ತಲುಪಲು ಅಸಾಧ್ಯವಾಗಿರುವ ವಿಷಯ ಒಂದೆಡೆಯಾದರೆ, ಭಾರತೀಯ ವಾಯುಸೇನೆಗೆ ಸೇರುವ 24ರ ಹರೆಯದ ರೋಬಿನ್ ಸಿಂಗ್ ರಾವತ್ ಅವರ ಕನಸು ನುಚ್ಚುನೂರಾಗಿದೆ. ರೈಲು ಸಂಖ್ಯೆ 16511ರಲ್ಲಿ ಅವರು ಬೆಂಗಳೂರಿನಿಂದ ಮಂಗಳೂರಿಗೆ ಶನಿವಾರ ಪ್ರಯಾಣಿಸುತ್ತಿದ್ದರು. ಸಕಲೇಶಪುರ ಮತ್ತು ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಮಧ್ಯೆ ಭೂಕುಸಿತ ಹಿನ್ನೆಲೆ ರೈಲು ಮಂಗಳೂರಿಗೆ ಸಂಚರಿಸಲಾಗಲಿಲ್ಲ. ಭಾರತೀಯ ವಾಯುಸೇನೆಯ ಸರ್ವೀಸ್ ಸೆಲೆಕ್ಷನ್ ಬೋರ್ಡ್ ವಿಭಾಗದಲ್ಲಿ ಅವರು ತೇರ್ಗಡೆಯಾಗಲು ಪ್ರಯಾಸಪಟ್ಟಿದ್ದರು. ಈ ಬಾರಿ ಅವರು ತನ್ನ ಕೊನೆಯ ಪ್ರಯತ್ನದಲ್ಲಿ ಅದನ್ನು ಪೂರೈಸಿ, ವಾಯುಸೇನೆ ಸೇರಲು ಬೇಕಾಗಿರುವ ಏರ್ ಫೋರ್ಸ್ ಕಾಮನ್ ಅಡ್ಮಿಶನ್ ಟೆಸ್ಟ್ ಬರೆಯಲು ಭಾನುವಾರ ಬೆಳಗ್ಗೆ 8.30ಕ್ಕೆ ಮಂಗಳೂರಿನ ಶಾರದಾನಿಕೇತನಕ್ಕೆ ಬರುವವರಿದ್ದರು. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ರೋಹಿತ್ ಸಿಂಗ್ ರಾವತ್, ಭೂಕುಸಿತದ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿಯೂ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂದು ಯೋಚಿಸುತ್ತಿದ್ದರು. ನನ್ನಂತೆ ಹಲವರು ಈ ಪರೀಕ್ಷೆ ಬರೆಯಲು ಮಂಗಳೂರಿಗೆ ಬರುವವರಿದ್ದರು ಎಂದಿದ್ದಾರೆ.