ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಳ, ಸಗಟು ದರ ಇಳಿಕೆ, ಬೆಳ್ಳುಳ್ಳಿ, ಆಲೂಗಡ್ಡೆ ದರವೂ ಕುಸಿತ
Bengaluru Market Update: ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಳವಾಗಿದ್ದು, ಸಗಟು ದರ ಇಳಿಕೆಯಾಗತೊಡಗಿದೆ. ಚಿಲ್ಲರೆ ಮಾರಾಟದರವೂ ಇಳಿಕೆಯ ಹಾದಿಯಲ್ಲಿದೆ. ಇದೇ ರೀತಿ, ಬೆಳ್ಳುಳ್ಳಿ, ಆಲೂಗಡ್ಡೆ ದರವೂ ಕುಸಿತವಾಗತೊಡಗಿದೆ.
Bengaluru Market Update: ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಹೆಚ್ಚಳವಾಗಿರುವ ಕಾರಣ ಸಗಟು ಬೆಲೆ ಇಳಿದು ಚಿಲ್ಲರೆ ಬೆಲೆಯೂ ಇಳಿಯತೊಡಗಿದೆ. ಬೆಳ್ಳುಳ್ಳಿ ಮತ್ತು ಆಲೂಗಡ್ಡೆ ಆವಕ ಹೆಚ್ಚಳವಾಗಿದ್ದು ಅವುಗಳ ಬೆಲೆಯೂ ಕುಸಿಯತೊಡಗಿದೆ. ಜನವರಿಯಲ್ಲಿ ಹೊಸ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಯು ಪ್ರತಿ ಕೆ.ಜಿ 30 ರಿಂದ 45 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
ಭಾರಿ ಏರಿಕೆ ಕಂಡಿತ್ತು ಈರುಳ್ಳಿ ದರ; ರಫ್ತು ಸುಂಕದ ಬಳಿಕ ಸುಧಾರಣೆ
ಭಾರತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಗಗನಮುಖಿಯಾಗಿತ್ತು. ಆಗ ಮಧ್ಯಪ್ರವೇಶಿಸಿದ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿತು. ಸುಂಕ ವಿಧಿಸಿತು. ಇದಾಗಿ, ನವೆಂಬರ್ ಹಾಗೂ ಡಿಸೆಂಬರ್ ಆರಂಭದಲ್ಲಿ ಸಾಧಾರಣ ಈರುಳ್ಳಿ ಬೆಲೆ ಕಿಲೋಗೆ 70 ರೂಪಾಯಿ ಆಗಿತ್ತು. ಈಗ ಗುಣಮಟ್ಟದ ಈರುಳ್ಳಿ ಬೆಲೆಯೇ ಕಿಲೋಗೆ 40 ರೂಪಾಯಿ. ಯಶವಂತಪುರ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್‌ನಲ್ಲಿ 60-70 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ 30 -40 ರೂಪಾಯಿಗೆ ಇಳಿದಿದೆ. ಇನ್ನು ಬೆಳ್ಳುಳ್ಳಿ ವಿಚಾರಕ್ಕೆ ಬಂದರೆ, ಕಿಲೋಗೆ 500 ರೂಪಾಯಿ ದಾಟಿದ್ದ ಬೆಳ್ಳುಳ್ಳಿ ಬೆಲೆ ಈಗ 350 ರಿಂದ 400 ರೂಪಾಯಿ ಆಸುಪಾಸಲ್ಲಿದೆ. ಆಲೂಗಡ್ಡೆ ದರವೂ ಅಷ್ಟೆ. ಕಳೆದ ತಿಂಗಳು 25-30 ರೂಪಾಯಿ ತನಕ ಇದ್ದ ದರ ಈಗ ಇನ್ನಷ್ಟು ಇಳಿದಿದೆ. ಹಾಸನದಿಂದ ಮತ್ತು ಉತ್ತರ ಪ್ರದೇಶದಿಂದಲೂ ಸಾಕಷ್ಟು ಪ್ರಮಾಣದಲ್ಲಿ ಆಲೂಗಡ್ಡೆ ಆವಕವಾಗುತ್ತಿರುವುದು ಇದಕ್ಕೆ ಕಾರಣ.
ಈರುಳ್ಳಿ, ಬೆಳ್ಳುಳ್ಳಿ ರಫ್ತು ಹೆಚ್ಚಾದಾಗೆಲ್ಲ ಬೆಲೆ ಏರಿಕೆ
ಕರ್ನಾಟಕದಲ್ಲಿ ಹಿಂಗಾರು ಮತ್ತು ಮುಂಗಾರು ಅವಧಿಯಲ್ಲಿ ಉತ್ಪಾದನೆಯಾಗುವ ಈರುಳ್ಳಿಯನ್ನು ಸರಿಯಾದ ಕ್ರಮದಲ್ಲಿ ದಾಸ್ತಾನು ಮಾಡಿಕೊಂಡರೆ ಸಾಕು. ಅದು ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟಾಗುತ್ತದೆ. ಆದರೆ ಈ ಉತ್ಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನ್ಯ ರಾಜ್ಯಗಳಿಗೆ, ರಾಷ್ಟ್ರಗಳಿಗೆ ರಫ್ತಾಗುತ್ತದೆ. ಪರಿಣಾಮ ರಾಜ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊರತೆ ಕಾಡುತ್ತದೆ. ಆಗ ಸಹಜವಾಗಿಯೆ ಬೆಲೆ ಏರಿಕೆ ಬಿಸಿ ತಟ್ಟುತ್ತದೆ ಎನ್ನುತ್ತಾರೆ ಎಪಿಎಂಸಿ ವರ್ತಕರು. ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಹೆಚ್ಚುವರಿಯಾಗಿ ಶೇಕಡ 20 ಸುಂಕ ವಿಧಿಸಿದ ಕಾರಣ, ರಫ್ತು ಕೊಂಚ ಮಟ್ಟಿಗೆ ನಿಯಂತ್ರಣಕ್ಕೆ ಒಳಗಾಯಿತು. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಾಯಿತು. ಬೆಲೆ ನಿಯಂತ್ರಣಕ್ಕೆ ಬಂತು ಎಂದು ವಿವರಿಸುತ್ತಾರೆ ವರ್ತಕರು.
ಎಪಿಎಂಸಿಗಳಲ್ಲಿ ಸದ್ಯದ ಚಿತ್ರಣ ಹೀಗಿದೆ
ಸದ್ಯ ಮಹಾರಾಷ್ಟ್ರದ ಸೊಲ್ಲಾಪುರ ಸೇರಿ ರಾಜ್ಯದ ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿರುವ ಈರುಳ್ಳಿಯು ಬೆಂಗಳೂರು ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವಕವಾಗುತ್ತಿದೆ. ಶನಿವಾರ 51,175 ಚೀಲ (ಪ್ರತಿ ಚೀಲ 50 ಕೆ.ಜಿ) ಅವಕವಾಗಿತ್ತು. ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ನಿತ್ಯವೂ ಎಂಬಂತೆ 230 ಟ್ರಕ್‌ಗಳಲ್ಲಿ 48 ಸಾವಿರ ಚೀಲ ಈರುಳ್ಳಿ ಆವಕವಾಗುತ್ತಿದೆ. ಮುಂಗಾರಿನಲ್ಲಿ ತಡವಾಗಿ ಬಿತ್ತನೆ ಮಾಡಿರುವ ಹಾಗೂ ಹಿಂಗಾರಿನಲ್ಲಿ ಬಿತ್ತನೆ ಆಗಿರುವ ಈರುಳ್ಳಿಯ ಕಟಾವು ಜನವರಿ ಎರಡನೇ ವಾರದಿಂದ ಆರಂಭವಾಗಲಿದೆ. ಹಿರಿಯೂರು, ಚಿತ್ರದುರ್ಗ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಜಗಳೂರು, ಕೊಟ್ಟೂರು ಭಾಗದಲ್ಲಿ ಬೆಳೆದಿರುವ ಈರುಳ್ಳಿಯ ಕಟಾವು ಇನ್ನೇನು ಶುರುವಾಗಲಿದೆ. ಈ ಭಾಗಗಳಲ್ಲಿ ಮುಂಗಾರು ಅವಧಿಯಲ್ಲಿ ಎಕರೆಗೆ 12 ಟನ್‌ನಂತೆ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಈ ವರ್ಷ ಇದರಲ್ಲಿ ಶೇ.20 ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರರು.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope