ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿ, ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳೆಷ್ಟು, ನಮ್ಮ ಮೆಟ್ರೋದೊಂದಿಗೆ ಹೋಲಿಸಿ ನೋಡೋಣ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿ, ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳೆಷ್ಟು, ನಮ್ಮ ಮೆಟ್ರೋದೊಂದಿಗೆ ಹೋಲಿಸಿ ನೋಡೋಣ

ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿ, ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳೆಷ್ಟು, ನಮ್ಮ ಮೆಟ್ರೋದೊಂದಿಗೆ ಹೋಲಿಸಿ ನೋಡೋಣ

Bengaluru Metro: ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿಯಾಗಿದೆ. ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳೆಷ್ಟು ಎಂಬುದು ಗೊತ್ತಾದರೆ ಇದು ನಿಚ್ಚಳವಾಗುತ್ತದೆ. ಅವುಗಳನ್ನು ನಮ್ಮ ಮೆಟ್ರೋದೊಂದಿಗೆ ಹೋಲಿಸಿ ನೋಡೋಣ.

ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿ, ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳ ತುಲನೆ (ಸಾಂಕೇತಿಕ ಚಿತ್ರ)
ಬೆಂಗಳೂರು ಮೆಟ್ರೋ ಪ್ರಯಾಣ ಭಾರತದಲ್ಲೇ ದುಬಾರಿ, ದೆಹಲಿ, ಮುಂಬಯಿ, ಚೆನ್ನೈ ಮೆಟ್ರೋ ಟಿಕೆಟ್‌ ದರಗಳ ತುಲನೆ (ಸಾಂಕೇತಿಕ ಚಿತ್ರ) (PTI)

Bengaluru Metro: ಬೆಂಗಳೂರು ನಗರ ಸಾರಿಗೆ ಪ್ರಮುಖ ಕೊಂಡಿಯಾಗಿರುವ ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆಯಾಗಿದ್ದು ಗರಿಷ್ಠ ಟಿಕೆಟ್ ದರ 90 ರೂಪಾಯಿ ಆಗಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಭಾರತದ ಮೆಟ್ರೋ ಸಾರಿಗೆ ಪೈಕಿ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿ ಪರಿಗಣಿಸಲ್ಪಟ್ಟಿದೆ. ಬೆಂಗಳೂರು ಮೆಟ್ರೋದ ಗರಿಷ್ಠ ಟಿಕೆಟ್ ದರ 60 ರೂಪಾಯಿಯಿಂದ 90 ರೂಪಾಯಿಗೆ ಏರಿಕೆ ಫೆ 9 ರಂದು ಜಾರಿಗೆ ಬಂದಿದೆ. ಇನ್ನೊಂದೆಡೆ, ಕೋಲ್ಕತ ಮೆಟ್ರೋ ಭಾರತದಲ್ಲಿ ಅತ್ಯಂತ ಕಡಿಮೆ ಟಿಕೆಟ್ ದರ ಹೊಂದಿದ ಮೆಟ್ರೋ ಎಂಬ ಕೀರ್ತಿಗೆ ಭಾಜನವಾಗಿದೆ. ಕೋಲ್ಕತ್ತ ಮೆಟ್ರೋದ ಕನಿಷ್ಠ ಟಿಕೆಟ್ ದರ 5 ರೂಪಾಯಿ ಮತ್ತು ಗರಿಷ್ಠ ಟಿಕೆಟ್ ದರ 50 ರೂಪಾಯಿ.

ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಗೆ ಜನರ ಆಕ್ರೋಶ

ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಜನಾಕ್ರೋಶ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಬೆಂಗಳೂರು ಮೆಟ್ರೋದಲ್ಲಿ ಈಗ 25 ಕಿಮೀಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ 90 ರೂಪಾಯಿ ಪಾವತಿಸಬೇಕು. ದೆಹಲಿ ಮೆಟ್ರೋದಲ್ಲಿ 32ಕ್ಕೂ ಹೆಚ್ಚು ಕಿಮೀ ದೂರದ ಪ್ರಯಾಣಕ್ಕೆ 60 ರೂಪಾಯಿ. ಇನ್ನು ಚೆನ್ನೈ ಮೆಟ್ರೋದಲ್ಲಿ 50 ರೂಪಾಯಿ ಇದೆ. ಕೋಲ್ಕತ್ತ ಮೆಟ್ರೋದಲ್ಲಿ 25 ಕಿಮೀನಿಂದ 30 ಕಿಮೀ ದೂರದ ಪ್ರಯಾಣಕ್ಕೆ 25 ರೂಪಾಯಿ ಟಿಕೆಟ್ ಇದೆ. ಭಾರತದ ಮೆಟ್ರೋಗಳ ಪೈಕಿ ಕೋಲ್ಕತ್ತ ಮೆಟ್ರೋ ಕಡಿಮೆ ಟಿಕೆಟ್ ದರ ಹೊಂದಿದ್ದು ದೇಶದ ಜನರ ಗಮನಸೆಳೆದಿದೆ.

ಸ್ಮಾರ್ಟ್ ಕಾರ್ಡ್‌ಗಳ ಕನಿಷ್ಠ ಬಾಕಿ ಅಗತ್ಯವನ್ನು ಬಿಎಂಆರ್‌ಸಿಎಲ್ 50 ರೂಪಾಯಿಯಿಂದ 90 ರೂಪಾಯಿಗೆ ಹೆಚ್ಚಿಸಿದೆ, ಇದು ಭಾರತೀಯ ಮೆಟ್ರೋ ಸೇವೆಗಳಲ್ಲಿ ವಿಶಿಷ್ಟವಾದ ನೀತಿಯಾಗಿದೆ. 2011 ರಲ್ಲಿ ಪ್ರಾರಂಭವಾದಾಗಿನಿಂದ, ಬಿಎಂಆರ್‌ಸಿಎಲ್ ಸುಮಾರು 1 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದೆ. ಹೆಚ್ಚುವರಿಯಾಗಿ, ದೈನಂದಿನ ಮತ್ತು ಬಹು-ದಿನದ ಪಾಸ್‌ಗಳ ವೆಚ್ಚವು ತೀವ್ರವಾಗಿ ಏರಿಕೆಯಾಗಿದೆ. ಒಂದು ದಿನದ ಪಾಸ್ 150 ರಿಂದ 300 ರೂಪಾಯಿಗೆ, ಮೂರು ದಿನಗಳ ಪಾಸ್ 350 ರಿಂದ 600 ರೂ, ಮತ್ತು ಐದು ದಿನಗಳ ಪಾಸ್ 550 ರಿಂದ 800 ರೂಪಾಯಿಗೆ ಏರಿಕೆಯಾಗಿ ಪ್ರಯಾಣಿಕರ ಕಳವಳವನ್ನು ಹೆಚ್ಚುಮಾಡಿದೆ.

ನಮ್ಮ ಮೆಟ್ರೋ ಟಿಕೆಟ್ ದರ vs ಇತರೆ ಮೆಟ್ರೋ ರೈಲು ಟಿಕೆಟ್ ದರ

ಬೆಂಗಳೂರು ಮೆಟ್ರೋ (76 ಕಿಮೀ) ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ 90 ರೂಪಾಯಿ ( 30 ಕಿಮೀ ಮೇಲ್ಪಟ್ಟು). ಸ್ಮಾರ್ಟ್‌ ಕಾರ್ಡ್ ಬಳಕೆದಾರರಿಗೆ (ಕ್ಯೂಆರ್ ಕೋಡ್ ಹೊರತಾಗಿ) ಶೇ 5 ರಿಯಾಯಿತು ಮತ್ತು ಪ್ರಯಾಣ ದಟ್ಟಣೆ ಇಲ್ಲದೇ ಇದ್ದರೆ ಹೆಚ್ಚುವರಿ ಶೇ 5 ರಿಯಾಯಿತಿ ಇದೆ. ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಲ್ಲಿ ಶೇಕಡ 10 ರಿಯಾಯಿತಿ.

ದೆಹಲಿ ಮೆಟ್ರೋ (353 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ 60 ರೂಪಾಯಿ ( 32 ಕಿಮೀ ಮೇಲ್ಪಟ್ಟು), ದೆಹಲಿ ಮೆಟ್ರೋ ಸ್ಮಾರ್ಟ್‌ ಕಾರ್ಡ್‌/ ಕ್ಯೂಆರ್ ಕೋಡ್‌ ಬಳಕೆದಾರರಿಗೆ ಶೇಕಡ 10 ರಿಯಾಯಿತಿ (ಸಂಚಾರ ದಟ್ಟಣೆ ಇಲ್ಲದ ವೇಳೆ ಹೆಚ್ಚುವರಿ ಶೇ 10 ರಿಯಾಯಿತಿ), ಭಾನುವಾರ ಮತ್ತು ರಾಷ್ಟ್ರೀಯ ರಜಾದಿನಗಳಲ್ಲಿ ಹೆಚ್ಚುವರಿ ವಿನಾಯಿತಿ ಇದೆ.

ಹೈದರಾಬಾದ್ ಮೆಟ್ರೋ ( 69 ಕಿಮೀ)- ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ 26 ಕಿಮೀ ಮೇಲ್ಪಟ್ಟು 60 ರೂಪಾಯಿ. ಸ್ಮಾರ್ಟ್‌ ಕಾರ್ಡ್ ಬಳಕೆದಾರರಿಗೆ ಸಂಚಾರ ದಟ್ಟಣೆ ಇಲ್ಲದ ವೇಳೆ ಶೇಕಡ 10 ರಿಯಾಯಿತಿ.

ಚೆನ್ನೈ ಮೆಟ್ರೋ (45 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ 32 ಕಿಮೀ ಮೇಲ್ಪಟ್ಟು 60 ರೂಪಾಯಿ, ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ, ಕ್ಯೂಆರ್‌ ಕೋಡ್‌, ವಾಟ್ಸ್‌ಆಪ್ ಟಿಕೆಟ್‌ಗಳಿಗೆ ಶೇಕಡ 20 ರಿಯಾಯತಿ ಇದೆ.

ಮುಂಬಯಿ ಮೆಟ್ರೋ (59 ಕಿಮೀ)- ಕನಿಷ್ಠ ಟಿಕೆಟ್ ದರ 10 ರೂಪಾಯಿ ( 3 ಕಿಮೀ ತನಕ), ಗರಿಷ್ಠ ಟಿಕೆಟ್ ದರ 42 ಕಿಮೀ ದಾಟಿದರೆ 80 ರೂಪಾಯಿ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ವಾರದ ದಿನಗಳಲ್ಲಿ ಶೇ 5, ಭಾನುವಾರ ಮತ್ತು ರಜಾದಿನಗಳಲ್ಲಿ ಶೇ 10 ರಿಯಾಯಿತಿ ಇದೆ.

ಕೋಲ್ಕತ ಮೆಟ್ರೋ (61 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ ರೂಪಾಯಿ 50. ಸ್ಮಾರ್ಟ್ ಕಾರ್ಡ್‌ ರೀಚಾರ್ಜ್ ಮೇಲೆ ಶೇಕಡ 10 ಬೋನಸ್.

ಲಖನೌ ಮೆಟ್ರೋ (22.9 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 1 ನಿಲ್ದಾಣಕ್ಕೆ), ಗರಿಷ್ಠ ಟಿಕೆಟ್ ದರ 18 ನಿಲ್ದಾಣಗಳ ಬಳಿಕ 60 ರೂಪಾಯಿ. ಸ್ಮಾರ್ಟ್‌ಕಾರ್ಡ್ ಬಳಕೆದಾರರಿಗೆ ಶೇ 10 ರಿಯಾಯಿತಿ

ಕೊಚ್ಚಿ ಮೆಟ್ರೋ(25.6 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ಕಿಮೀ ತನಕ), ಗರಿಷ್ಠ ಟಿಕೆಟ್ ದರ 25 ಕಿಮೀಗೆ 60 ರೂಪಾಯಿ. ಸ್ಮಾರ್ಟ್‌ಕಾರ್ಡ್ ಬಳಕೆದಾರರಿಗೆ, ಕ್ಯೂಆರ್ ಟಿಕೆಟ್‌ಗೆ ಶೇಕಡ 20, ಪೀಕ್‌ ಅವರ್‌ನ್ಲಿ ಶೇಕಡ 10, ಸಂಚಾರ ದಟ್ಟಣೆ ಇಲ್ಲದೇ ಇದ್ದಾಗ ಶೇ 50 ರಿಯಾಯಿತಿ.

ಜೈಪುರ ಮೆಟ್ರೋ (12 ಕಿಮೀ) - ಕನಿಷ್ಠ ಟಿಕೆಟ್ ದರ 10 ರೂಪಾಯಿ ( 2 ನಿಲ್ಧಾಣಗಳವರೆಗೆ), ಗರಿಷ್ಠ ಟಿಕೆಟ್ ದರ 9-10 ನಿಲ್ದಾಣಕ್ಕೆ 30 ರೂಪಾಯಿ. ಸ್ಮಾರ್ಟ್‌ಕಾರ್ಡ್ ಬಳಕೆದಾರರಿಗೆ ಶೇ 10 ರಿಯಾಯಿತಿ

ಬೆಂಗಳೂರು ಮೆಟ್ರೋ ಪ್ರಯಾಣಿಕರ ಕಳವಳ

ಪ್ರಯಾಣಿಕರ ಕಳವಳಕ್ಕೆ ಇಂಬುನೀಡುವಂತೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಕ್ಯೂಆರ್ ಕೋಡ್ ಬಳಕೆದಾರರಿಗೆ ರಿಯಾಯಿತಿಯನ್ನು ನಿಲ್ಲಿಸಿದೆ. ಸದ್ಯ ಸ್ಮಾರ್ಟ್ ಕಾರ್ಡ್ ಹೊಂದಿದವರಿಗೆ ಮಾತ್ರ ಶೇಕಡ 5 ರಿಯಾಯಿತಿ ನೀಡಿದೆ. ಇದು 2020ರ ಮೊದಲು ಶೇಕಡ 15 ಇತ್ತು. ನಂತರ ಇದನ್ನು ಶೇಕಡ 5ಕ್ಕೆ ಇಳಿಸಲಾಗಿತ್ತು.

ಬೆಂಗಳೂರು ಮೆಟ್ರೋ ಹೊರತು ಪಡಿಸಿದರೆ ಭಾರತದ ಉಳಿ ಮೆಟ್ರೋ ರೈಲುಗಳಲ್ಲಿ ಕ್ಯೂಆರ್‌ ಕೋಡ್, ಸ್ಮಾರ್ಟ್‌ ಕಾರ್ಡ್‌ ಬಳಕೆದಾರರಿಗೆ ಈಗಲೂ ರಿಯಾಯಿತಿ ಲಭ್ಯವಿದೆ. ಭಾರತದ ಟೆಕ್ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನಲ್ಲೇ ನಮ್ಮ ಮೆಟ್ರೋ ಡಿಟಿಜಿಲ್ ಪಾವತಿಗೆ ಸಂಬಂಧಿಸಿದ ರಿಯಾಯಿತಿ ನಿಲ್ಲಿಸಿರುವುದು ಬೇಸರದ ಸಂಗತಿ ಎಂದು ಅನೇಕ ಪ್ರಯಾಣಿಕರು ವಾದಿಸುತ್ತಿದ್ದಾರೆ. ಇನ್ನೊಂದೆಡೆ, ಬೆಂಗಳೂರಿಗರ ದುಃಖವನ್ನು ಇನ್ನಷ್ಟು ಹೆಚ್ಚಿಸುವಂತೆ ಚೆನ್ನೈ ಮತ್ತು ಕೊಚ್ಚಿ ಮೆಟ್ರೋಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳು, ಕ್ಯೂಆರ್ ಕೋಡ್‌ಗಳು ಮತ್ತು ವಾಟ್ಸಾಪ್ ಟಿಕೆಟ್‌ ಖರೀದಿಗೆ ಶೇಕಡ 20 ರಿಯಾಯಿತಿ ಲಭ್ಯವಿದೆ.

Whats_app_banner