ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಪರಿಣಾಮ, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ, 6 ದಿನಗಳ ಪ್ರಯಾಣಿಕರ ಲೆಕ್ಕ ಹೀಗಿದೆ
Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರ ಫೆ 9 ರಿಂದ ಏರಿಕೆಯಾಗಿದ್ದು, ಬಳಿಕ ಮುಖ್ಯಮಂತ್ರಿ ಸೂಚನೆ ಮೇರೆಗೆ ಕೊಂಚ ಇಳಿದಿದೆ. ಆದರೆ ಮೆಟ್ರೋ ಟಿಕೆಟ್ ದರ ಏರಿಕೆ ಪರಿಣಾಮ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. 6 ದಿನಗಳ ಲೆಕ್ಕಾಚಾರ ಇಲ್ಲಿದೆ ನೋಡಿ

Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಇಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ ಬಳಿಕವೂ ಮೆಟ್ರೋ ಟಿಕೆಟ್ ದರ ನೆಪ ಮಾತ್ರ ಇಳಿಕೆಯಾಗಿದೆ. ಆದರೆ, ಅದು ಪ್ರಯಾಣಿಕರನ್ನು ತನ್ನೆಡೆ ಸೆಳೆಯುವಲ್ಲಿ ವಿಫಲವಾಗಿದೆ ಎಂಬುದನ್ನು ಆರು ದಿನಗಳ ಪ್ರಯಾಣಿಕರ ಸಂಖ್ಯೆಯೇ ಎತ್ತಿ ತೋರಿಸಿದೆ. ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಕಾರಣ ಮೆಟ್ರೋದ ನಿತ್ಯ ಪ್ರಯಾಣಿಕರು ಕಂಗಾಗಲಾಗಿದ್ದು, ಪರ್ಯಾಯ ಸಾರಿಗೆ ವ್ಯವಸ್ಥೆ ಕಡೆಗೆ ಗಮನಹರಿಸಿದ್ದು ಕಂಡುಬಂದಿದೆ.
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ
ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿರುವ ಬೆಂಗಳೂರು ಮೆಟ್ರೋ ಟಿಕೆಟ್ ದರವನ್ನು ಫೆ 9 ರಂದು ಜಾರಿಗೆ ಬರುವಂತೆ ಹೆಚ್ಚಳ ಮಾಡಲಾಗಿತ್ತು. ಈ ದರ ಏರಿಕೆಯು ಕೆಲವು ಪ್ರದೇಶಗಳಿಗೆ ಶೇಕಡ 100 ಏರಿಕೆಯಾಗಿದ್ದು, ಒಟ್ಟಾರೆಯಾಗಿ ಶೇಕಡ 45ರ ಆಸುಪಾಸಿನಲ್ಲಿತ್ತು. ಇದು ವ್ಯಾಪಕ ಟೀಕೆಗೆ ಒಳಗಾಗಿತ್ತು. ರಾಜಕೀಯ ವಾಕ್ಸಮರಕ್ಕೂ ಇದು ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕರ್ನಾಟಕದ ಸಚಿವರು ಮೆಟ್ರೋ ಪ್ರಯಾಣದ ದರ ಏರಿಕೆಯ ತೀರ್ಮಾನ ಕೇಂದ್ರ ಸರ್ಕಾರದ್ದು. ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಕೇಂದ್ರ ಸರ್ಕಾರ ನೇಮಕ ಮಾಡಿದ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ದರ ಏರಿಕೆ ವಿಚಾರದಲ್ಲಿ ಶಿಫಾರಸು ಮಾಡಿದ್ದು ಎಂದು ಟೀಕಿಸಿತ್ತು. ಈ ನಡುವೆ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿಗೆ ಆಗಮಿಸಿದ್ದ ವೇಳೆ, ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯ ನಿರ್ಧಾರ ರಾಜ್ಯ ಸರ್ಕಾರದ್ದೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಹೇಳಿದರು. ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಕರೆಯಿಸಿಕೊಂಡು ದರ ಇಳಿಸುವಂತೆ ನಿರ್ದೇಶನ ನೀಡಿದರು. ಇದರಂತೆ, ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 30ರಷ್ಟು ಇಳಿಕೆಯಾಯಿತಾದರೂ ಅದು ಪ್ರಯಾಣಿಕರಿಗೆ ವರದಾನವಾಗಲಿಲ್ಲ ಎಂಬುದು ಪ್ರಯಾಣಿಕರ ಸಂಖ್ಯೆ ಮೂಲಕ ಬಹಿರಂಗವಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ
ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯಾದ ಬಳಿಕ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿರುವುದು ಕಂಡುಬಂದಿದೆ. ಕಳೆದ 6 ದಿನಗಳ ಅವಧಿಯಲ್ಲಿ ನಮ್ಮ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ 4 ಲಕ್ಷದಷ್ಟು ಇಳಿಕೆಯಾಗಿದೆ.
ಕಳೆದ ಭಾನುವಾರ (ಫೆ 9) 6,23,123, ಹಿಂದಿನ ಭಾನುವಾರ (ಫೆ 2) 6,37,884. ಇಳಿಕೆ ಪ್ರಮಾಣ 14,761.
ಕಳೆದ ಸೋಮವಾರ (ಫೆ 10) 8,28,149, ಹಿಂದಿನ ಸೋಮವಾರ (ಫೆ 3) 8,70,147. ಇಳಿಕೆ ಪ್ರಮಾಣ 41998
ಕಳೆದ ಮಂಗಳವಾರ (ಫೆ 11) 7,78,774. ಹಿಂದಿನ ಮಂಗಳವಾರ (ಫೆ 4) 8,58,417, ಇಳಿಕೆ ಪ್ರಮಾಣ 79643.
ಕಳೆದ ಬುಧವಾರ (ಫೆ 12) 7,62,811, ಹಿಂದಿನ ಬುಧವಾರ (ಫೆ 5) 8,67,660. ಇಳಿಕೆ ಪ್ರಮಾಣ 1,04,849
ಕಳೆದ ಗುರುವಾರ (ಫೆ 13) 7,51,251, ಹಿಂದಿನ ಗುರುವಾರ (ಫೆ 6) 8,64,601, ಇಳಿಕೆ ಪ್ರಮಾಣ 1,13,350.
ಕಳೆದ ಶುಕ್ರವಾರ (ಫೆ 14) 7,63,250, ಹಿಂದಿನ ಶುಕ್ರವಾರ (ಫೆ 7) 8,70,687, ಇಳಿಕೆ ಪ್ರಮಾಣ 1,07,437.
ಕಳೆದ ಶನಿವಾರ (ಫೆ 15) 6.90 ಲಕ್ಷ, ಹಿಂದಿನ ಶನಿವಾರ (ಫೆ 8) 6.9 ಲಕ್ಷ, ಇಳಿಕೆ ಪ್ರಮಾಣ 52 ಸಾವಿರ
ಬಹುಶಃ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಬಿಸಿಮುಟ್ಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಬೆಂಗಳೂರು ಮೆಟ್ರೋ ನಿತ್ಯ ಪ್ರಯಾಣಿಕರು.
